ಹೊಸನಗರ, ಸಾಗರ ತಾಲೂಕಿನಲ್ಲಿ ನಾಳೆ ಶಾಲಾ ಕಾಲೇಜಿಗೆ ರಜೆ

rain
ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಬರುತ್ತಿರುವುದರಿಂದ ಶಿವಮೊಗ್ಗ ಸಮೀಪದ ಗಾಜನೂರಿನ ತುಂಗಾ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ.
Published on

ಶಿವಮೊಗ್ಗ: ಹೊಸನಗರ, ಸಾಗರ, ತೀರ್ಥಹಳ್ಳಿಯಲ್ಲಿ ಸೋಮವಾರ ಇಡೀ ದಿನ ಪುಷ್ಯ ಮಳೆ ಆರ್ಭಟ ಮುಂದುವರಿದಿದೆ. ಉಳಿದ ತಾಲೂಕುಗಳಲ್ಲಿ ಸಾಧಾರಣವಾಗಿದೆ. ನಿರಂತರ ಮಳೆಯಿಂದಾಗಿ ತೀರ್ಥಹಳ್ಳಿ ತಾಲೂಕಿನ ಶಂಕರಪುರ ಗ್ರಾಮ ಹಾಗೂ ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ತಲಾ ಒಂದು ಮನೆ ಭಾಗಶಃ ಹಾನಿಗೀಡಾಗಿವೆ.

ಮಳೆ ಮುಂದುವರಿಯುವ ಲಕ್ಷಣಗಳು ಇರುವುದರಿಂದ ಹೊಸನಗರ ಹಾಗೂ ಸಾಗರ ತಾಲೂಕಿನ ಶಾಲಾ ಕಾಲೇಜುಗಳಿಗೆ ಮಂಗಳವಾರ ರಜೆ ನೀಡಲಾಗಿದೆ. ಅಲ್ಲದೇ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಶಿವಮೊಗ್ಗ ತಾಲೂಕಿನ ಹಾರ‌್ನಹಳ್ಳಿಯಲ್ಲಿ ನವೀದ್ ಎಂಬುವರ ಮನೆಯ ಪಾರ್ಶ್ವದ ಗೋಡೆ ಕುಸಿದಿದೆ. ಇನ್ನೊಂದೆಡೆ ಹಿಂದಿನ ವರ್ಷಗಳಲ್ಲಿ ಭೂಕುಸಿತ ಸಂಭವಿಸಿದ ಪ್ರದೇಶಗಳ ಜನರಲ್ಲೂ ಮತ್ತೆ ಭೂಕುಸಿತದ ಆತಂಕ ಕಾಡುತ್ತಿದೆ. ಅದರಲ್ಲೂ ಕೃಷಿ ಜಮೀನಿಗೆ ಹೊಂದಿಕೊಂಡಿರುವ ಗುಡ್ಡಗಳು ಕುಸಿದರೆ ವರ್ಷದ ವ್ಯವಸಾಯಕ್ಕೆ ಹಿನ್ನಡೆಯಾಗುತ್ತದೆ ಎಂಬ ಭಯ ರೈತ ವರ್ಗವನ್ನು ಕಾಡುತ್ತಿದೆ.
ಕಳೆದ 24 ತಾಸಿನಲ್ಲಿ ಜಿಲ್ಲೆಯಲ್ಲಿ ಸರಾಸರಿ 39.44 ಮಿ.ಮೀ ಮಳೆ ಬಿದ್ದಿದೆ. ಸಾಗರ, ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕುಗಳಲ್ಲಿ ಹೆಚ್ಚು ಮಳೆಯಾಗಿದೆ. ಶಿವಮೊಗ್ಗದಲ್ಲಿ 20 ಮಿ.ಮೀ., ಭದ್ರಾವತಿಯಲ್ಲಿ 12.90, ತೀರ್ಥಹಳ್ಳಿಯಲ್ಲಿ 56.20, ಸಾಗರದಲ್ಲಿ 71.20, ಶಿಕಾರಿಪುರದಲ್ಲಿ 24.90, ಸೊರಬದಲ್ಲಿ 33 ಹಾಗೂ ಹೊಸನಗರ ತಾಲೂಕಿನಲ್ಲಿ 57.20 ಮಿ.ಮೀ. ಮಳೆಯಾಗಿದೆ.
ಚಕ್ರಾ ವ್ಯಾಪ್ತಿಯಲ್ಲಿ ಅತ್ಯಧಿಕ 140 ಮಿ.ಮೀ. ಮಳೆಯಾಗಿದ್ದರೆ, ಸಾವೆಹಕ್ಲು ಭಾಗದಲ್ಲಿ 125, ಮಾಣಿ ಜಲಾಶಯ ವ್ಯಾಪ್ತಿಯಲ್ಲಿ 102 ಮಿ.ಮೀ., ಯಡೂರಿನಲ್ಲಿ 94, ಹುಲಿಕಲ್‌ನಲ್ಲಿ 132, ಮಾಸ್ತಿಕಟ್ಟೆಯಲ್ಲಿ 135 ಮಿ.ಮೀ. ಮಳೆ ಬಿದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net