ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಗೆ ಗಾಂಧಿ ಸೇವಾ ಪ್ರಶಸ್ತಿ

27-RNR-05A
Published on

ಹಾವೇರಿ: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಪ್ರತಿವರ್ಷ ನೀಡುವ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಪ್ರಸಕ್ತ ಸಾಲಿನಲ್ಲಿ ಹಿರಿಯ ಗಾಂಧಿವಾದಿ ಪ್ರೊ. ಜಿ.ಬಿ. ಶಿವರಾಜು ಹಾಗೂ ತಾಲೂಕಿನ ಹೊಸರಿತ್ತಿ ಗ್ರಾಮದ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆ ಆಯ್ಕೆಯಾಗಿವೆ ಎಂದು ಇಲಾಖೆಯ ಆಯುಕ್ತ ಹೇಮಂತ ನಿಂಬಾಳ್ಕರ್​ ತಿಳಿಸಿದ್ದಾರೆ.

ಮಹಾತ್ಮ ಗಾಂಧೀಜಿಯವರ ಸತ್ಯ, ಅಹಿಂಸೆ, ಸ್ವಾವಲಂಬನೆ, ಗ್ರಾಮಸ್ವರಾಜ್​, ಅಸಶ್ಯತೆ ನಿವಾರಣೆ, ಆಥಿರ್ಕ ಚಿಂತನೆಗಳು, ಖಾದಿ ಚಟುವಟಿಕೆ, ಜೀವನ ಶಿಕ್ಷಣ ಮತ್ತಿತರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಮಹತ್ಸಾಧನೆ ಮಾಡಿದ ಮಹನೀಯರು ಹಾಗೂ ಸಂಘ ಸಂಸ್ಥೆಗಳನ್ನು ಗುರುತಿಸಿ ಗೌರವಿಸಲು ರಾಜ್ಯ ಸರ್ಕಾರವು ಕರ್ನಾಟಕ ಗಾಂಧೀ ಸೇವಾ ಪ್ರಶಸ್ತಿ ನೀಡುತ್ತಿದೆ. ಪ್ರಶಸ್ತಿಯೂ 5 ಲಕ್ಷ ರೂ. ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರ ಒಳಗೊಂಡಿದ್ದು, ಅ. 2ರ ಗಾಂಧಿ ಜಯಂತಿಯಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಹೊಸರಿತ್ತಿ ಗ್ರಾಮದ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆ 1984ರ ಅಕ್ಟೋಬರ್​ 02ರಂದು ಆರಂಭಗೊಂಡಿದ್ದು, 39 ವರ್ಷಗಳಿಂದ ಗಾಂಧಿ ವಿಚಾರಗಳನ್ನು ಹೊಸ ಪೀಳಿಗೆಯಲ್ಲಿ ಅಳವಡಿಸಲು ದುಡಿಯುತ್ತಿದೆ. ಗಾಂಧೀ ಗ್ರಾಮೀಣ ಗುರುಕುಲ ವಸತಿ ಶಾಲೆಯಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ 5ರಿಂದ 10ನೇ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿದೆ. ಸಮಾಜದ ಎಲ್ಲ ವರ್ಗ, ಗ್ರಾಮೀಣ ಕೃಷಿಕ ಹಾಗೂ ಕೂಲಿಕಾರರ ಕುಟುಂಬದ ಹಿನ್ನೆಲೆಯ ಸಾವಿರಾರು ಪ್ರತಿಭಾವಂತ ಮಕ್ಕಳಿಗೆ ಊಟ, ವಸತಿ, ಇತರ ಸೌಲಭ್ಯಗಳನ್ನು ನೀಡುತ್ತ ಬಂದಿದೆ.

ಇಲ್ಲಿನ ವಿದ್ಯಾಥಿರ್ಗಳು ತಾವೇ ನೇಯ್ದ ಬಟ್ಟೆಗಳನ್ನು ಧರಿಸುತ್ತಾರೆ. ತಾವೇ ಬೆಳೆದ ಕೃಷಿ ಬೆಳೆಗಳಿಂದ ತಯಾರಿಸಿದ ಆಹಾರ ಸೇವಿಸುತ್ತಾರೆ. ದೇಶದ ಆಂತರಿಕ ಕಲಹಗಳನ್ನು ಕಿತ್ತೆಸೆಯುವ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಶಿಕ್ಷಣ ಪಡೆಯುತ್ತಿದ್ದಾರೆ. ರಾಜ್ಯ ಪಠ್ಯಕ್ರಮದ ಜತೆಗೆ ಗಾಂಧೀ ವಿಚಾರಧಾರೆಯ ಅನುಸಾರ ಕೃಷಿ, ನೂಲು ಮತ್ತು ನೇಯ್ಗೆ, ಹೈನುಗಾರಿಕೆ, ತೋಟಗಾರಿಕೆ ಮುಂತಾದ ಸ್ವಾವಲಂಬಿ, ಪ್ರಾಯೋಗಿಕ ಶಿಕ್ಷಣವನ್ನು ಇಲ್ಲಿನ ವಿದ್ಯಾಥಿರ್ಗಳಿಗೆ ನೀಡಲಾಗುತ್ತಿದೆ.

ಇಲ್ಲಿ ಶಿಕ್ಷಣ ಪಡೆದ ಹಲವಾರು ವಿದ್ಯಾಥಿರ್ಗಳು ಅತ್ಯುತ್ತಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಸಂಸ್ಥೆಯು ಶಿಕ್ಷಣದ ಜತೆಗೆ ಜೀವನ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net