ಹೊಸನಗರ ಹಿಂದು ಗಣಪತಿ ವಿಸರ್ಜನೆ

hos ganapathi
ಹೊಸನಗರದ ಹಿಂದು ಮಹಾಸಭಾ ಗಣಪತಿ ವಿಸರ್ಜನೆಗೂ ಮುನ್ನ ಕೆರೆ ದಂಡೆಯಲ್ಲಿ ಪೂಜೆ ಸಲ್ಲಿಸುತ್ತಿರುವುದು. ಪ್ರಶಾಂತ್, ವಿನಯ್, ಸುರೇಂದ್ರ ಕೋಟ್ಯಾನ್ ಇತರರಿದ್ದರು.
Published on

ಹೊಸನಗರ: ಅಖಿಲ ಭಾರತ ಹಿಂದು ಮಹಾಸಭಾ ಹೊಸನಗರ ಘಟಕದಿಂದ ಪಟ್ಟಣದ ಪೋಸ್ಟ್ ಆಫೀಸ್ ಸಮೀಪದ ವೀರ ಸಾವರ್ಕರ್ ಮಂಟಪದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ಮೆರವಣಿಗೆ ಬುಧವಾರ ನೆರವೇರಿತು.

ಬೆಳಗ್ಗೆ ಗಣಪತಿ ಪೂಜೆ, ಮಹಾಮಂಗಳಾರತಿ ನಡೆಯಿತು. ಸಂಜೆ 6 ಗಂಟೆಗೆ ಆರಂಭವಾದ ಶೋಭಾಯಾತ್ರೆ ಪಟ್ಟಣದ ಗಣಪತಿ ದೇವಸ್ಥಾನದ ಮೂಲಕ ದ್ಯಾವರ್ಸ, ನೆಹರು ರಸ್ತೆ, ಚೌಡಮ್ಮ ಬೀದಿ, ಕಾಳಿಕಾಪುರ ರಸ್ತೆ, ಮಾರಿಗುಡ್ಡ, ಮಾವಿನಕೊಪ್ಪ, ಮುಖ್ಯರಸ್ತೆಯ ಮೂಲಕವಾಗಿ ಕ್ರಿಶ್ಚಿಯನ್ ಕಾಲನಿ, ಅಂಬೇಡ್ಕರ್ ಕಾಲನಿ, ಕೆಇಬಿ ವೃತ್ತ, ಸಂತೆ ಮಾರುಕಟ್ಟೆ ಮಾರ್ಗವಾಗಿ ತೆರಳಿ ಗಣಪತಿ ಕೆರೆಯಲ್ಲಿ ಜಲಸ್ತಂಭನ ಮಾಡಲಾಯಿತು.

ಶೋಭಾಯಾತ್ರೆಯಲ್ಲಿ ಜಿಲ್ಲೆಯ ಹಲವು ಸಾಂಸ್ಕೃತಿಕ ತಂಡಗಳು ಪಾಲ್ಗೊಂಡಿದ್ದವು. ಮಹಿಳಾ ಮತ್ತು ಪುರುಷ ತಂಡದ ನಾಸಿಕ್ ಬ್ಯಾಂಡ್, ನಾದಸ್ವರ, ಗೊಂಬೆ ಕುಣಿತ, ಹನುಮಂತ ವೇಷ ಆಕರ್ಷಿಸಿತು.

ಡಿಜೆ ಸದ್ದು, ಕಣ್ಣು ಕುಕ್ಕುವ ಬಣ್ಣ ಬಣ್ಣದ ವಿದ್ಯುತ್ ಬೆಳಕಿನಡಿ ಯುವಕ, ಯುವತಿಯರು ಕುಣಿಯುತ್ತ ಸಾಗುತ್ತಿದ್ದರೆ ಕೇಸರಿ ನದಿಯೇ ಹರಿದು ಬರುತ್ತಿರುವಂತೆ ಭಾಸವಾಯಿತು. ರಾಜಬೀದಿಯಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಜಯಘೋಷಣೆಗಳು ಎಲ್ಲೆಡೆ ಕೇಳಿ ಬರುತ್ತಿದ್ದವು. ಈ ನಡುವೆ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಶೋಭಾ ಯಾತ್ರೆಯಲ್ಲಿ ಕೆಲ ಹೊತ್ತು ಪಾಲ್ಗೊಂಡರು.

ಬಿಗಿ ಪೊಲೀಸ್ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ನಡುವೆ 13 ಗಂಟೆಗೂ ಅಧಿಕ ಕಾಲ ನಡೆದ ಶೋಭಾಯಾತ್ರೆ ವಿಜೃಂಭಣೆಯಿಂದ ನೆರವೇರಿತು. ಮೆರವಣಿಗೆಯಲ್ಲಿ ಅಖಿಲ ಭಾರತ ಹಿಂದು ಮಹಾಸಭಾ ಅಧ್ಯಕ್ಷ ಪ್ರಶಾಂತ್, ಕಾರ್ಯದರ್ಶಿ ವಿನಯ್, ಸದಸ್ಯರಾದ ಸುರೇಂದ್ರ ಕೋಟ್ಯಾನ್, ಗಣೇಶ್ ಮುಧುಕರ, ಎಂ.ಎನ್.ರಾಜು, ರಾಘವೇಂದ್ರ, ಸಂದೀಪ್, ವಿಕ್ರಂ, ಸುಬ್ರಹ್ಮಣ್ಯ, ದೀಪಕ್ ಸ್ವರೂಪ್, ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net