ಗಮಕ ಕಲೆಗೆ ಹೊಸಹಳ್ಳಿ ಕೊಡುಗೆ ಅಪಾರ: ಬಿವೈಆರ್

gamaka
ಹೊಸಹಳ್ಳಿಯಲ್ಲಿ ವಾರ್ಷಿಕ ಗಮಕ ಸಪ್ತಾಹ ಸಮಾರೋಪದಲ್ಲಿ ಹಿರಿಯ ಗಮಕಿ ಸುಧಾರತ್ನ ಅವರಿಗೆ ಸಂಸದ ಬಿ.ವೈ.ರಾಘವೇಂದ್ರ ಗಮಕ ಸುಧಾ ಬಿರುದು ಪ್ರದಾನ ಮಾಡಿ ಸನ್ಮಾನಿಸಿದರು. ಡಾ. ಬಿ.ವಿ.ರಾಜಾರಾಂ, ಎಚ್.ಎಸ್.ಸತ್ಯನಾರಾಯಣ್, ಮ.ಸ.ನಂಜುಂಡಸ್ವಾಮಿ, ಎಚ್.ಎಸ್.ಗೋಪಾಲ್ ಇತರರಿದ್ದರು.
Published on

ಶಿವಮೊಗ್ಗ: ಅತ್ಯಂತ ಪ್ರಾಚೀನ ಕಲೆಗಳಲ್ಲಿ ಒಂದಾಗಿರುವ ಗಮಕವನ್ನು ಉಳಿಸಿ, ಬೆಳೆಸಲು ಹೊಸಹಳ್ಳಿ ಎಂಬ ಪುಟ್ಟ ಗ್ರಾಮದ ಪಾತ್ರ ಪ್ರಮುಖವಾದುದು. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಈ ಗ್ರಾಮ ಗಮನ ಸೆಳೆಯುತ್ತಿದೆ. ಈ ಗ್ರಾಮಕ್ಕೆ ಗಮಕದಲ್ಲಿ ರಾಷ್ಟ್ರೀಯ ಮಾನ್ಯತೆ ದೊರಕಿಸಿಕೊಡುವುದಾಗಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಭರವಸೆ ನೀಡಿದರು.

ಗಮಕ ಕಲಾ ಪರಿಷತ್‌ನಿಂದ ಹೊಸಹಳ್ಳಿಯ ಗಮಕ ಭವನದಲ್ಲಿ ಏರ್ಪಡಿಸಿದ್ದ ವಾರ್ಷಿಕ ಗಮಕ ಸಪ್ತಾಹ ಸಮಾರೋಪದಲ್ಲಿ ಹಿರಿಯ ಗಮಕಿ ಸುಧಾರತ್ನ ಅವರಿಗೆ ಗಮಕ ಸುಧಾ ಬಿರುದು ಪ್ರದಾನ ಮಾಡಿ ಮಾತನಾಡಿದರು.

ಗಮಕದಲ್ಲಿ ಪದ್ಯ-ಗದ್ಯಗಳು ಸಮನ್ವಯವಾಗಿರಬೇಕು. ಪದ್ಯದ ಲಯವನ್ನು ಗದ್ಯದಲ್ಲಿ ಮುಂದುವರಿಸಬೇಕು. ಗದ್ಯದ ಆಶಯ ಪದ್ಯವಾಗಿ ಅರಳಬೇಕು. ಹೀಗೆ ಕೊಡು-ಕೊಳ್ಳುವಿಕೆಯಾದಾಗ ಸಮನ್ವಯ ಸಾಧಿಸಿದಂತಾಗುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ಹಳೆಗನ್ನಡ ಕಾವ್ಯಗಳು ಕಠಿಣ ಎಂದು ಪರಿಭಾವಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಅಭಿರುಚಿ ಹುಟ್ಟಿಸುವಂತೆ ಕಾವ್ಯಗಳನ್ನು ಗಮಕ ರೂಪದಲ್ಲಿ ಪ್ರಸ್ತುತಪಡಿಸಿ ಅವುಗಳ ಸೂಕ್ಷ್ಮ, ವಿಶೇಷ ಅಂಶಗಳನ್ನೂ ವ್ಯಾಖ್ಯಾನದ ಮೂಲಕ ಪರಿಣಾಮಕಾರಿಯಾಗಿ ಪರಿಚಯಿಸುವುದು ವಿಶೇಷ ಎಂದರು.

ಬ್ರಾಹ್ಮಣ ಸಮಾಜದ ಪ್ರಮುಖರಾದ ಮ.ಸ.ನಂಜುಂಡಸ್ವಾಮಿ, ಗಮಕ ಕಲಾ ಪರಿಷತ್ ಅಧ್ಯಕ್ಷ ಎಚ್.ಎಸ್.ಸತ್ಯನಾರಾಯಣ್, ಹಿರಿಯ ರಂಗಕರ್ಮಿ ಡಾ. ಬಿ.ವಿ.ರಾಜಾರಾಂ, ಪ್ರಮುಖರಾದ ಎಚ್.ಎಸ್.ಗೋಪಾಲ್, ರಾಜಾರಾಮಮೂರ್ತಿ, ಎಸ್.ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net