Bengaluru Accident: ಬೆಂಗಳೂರಿನಲ್ಲಿ ಟೆಂಪೋವೊಂದು ಪಾದಚಾರಿಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಸದ್ಯ ಈ ಅಪಘಾತದ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಜಾಲಹಳ್ಳಿಯ ಎಸ್‌ಎಂ ರಸ್ತೆಯ ಬ್ರಿಗೇಡ್ ಕೋರ್ಟ್‌ಯಾರ್ಡ್ ಅಪಾರ್ಟ್‌ಮೆಂಟ್ ಎದುರು ಪಾದಚಾರಿ ಮಹಿಳೆ ರಸ್ತೆ ದಾಟಲು ನಿಂತಿದ್ದರು. ರಸ್ತೆ ಖಾಲಿ ಇದ್ದಾಗ ದಾಟಲು ಮುಂದಾದ ವೇಳೆ, ರಾಂಗ್ ವೇನಲ್ಲಿ ವೇಗವಾಗಿ ಬಂದು ಮತ್ತೊಂದು ವಾಹನವನ್ನು ಓವರ್‌ಟೇಕ್ ಮಾಡಿದ ಟೆಂಪೋ ಟ್ರಾವೆಲರ್ ಪಾದಚಾರಿಗೆ ನೇರವಾಗಿ ಡಿಕ್ಕಿ ಹೊಡೆದಿದೆ.
ಟೆಂಪೋ ಡಿಕ್ಕಿಯ ರಭಸಕ್ಕೆ ಪಾದಚಾರಿ ದೂರಕ್ಕೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಪ್ರಾಣಾಪಾಯದ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಬೆಂಗಳೂರಿನಲ್ಲಿ ಪಾದಚಾರಿಗಳ ಸುರಕ್ಷತೆ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಹುಟ್ಟುಹಾಕಿದೆ.
ಇದನ್ನೂ ಓದಿ: Viral Kumbh Girl: ಮೊನಾಲಿಸಾಗೆ ಬಿಗ್ ರಿಲೀಫ್; ಜನ್ಮ ದಿನಾಂಕ ಬದಲಿಸಿದ್ದ ಆದೇಶ ರದ್ದು!
ನಗರದೊಳಗೆ ವೇಗದ ಮಿತಿ ಹಾಗೂ ಲೇನ್ ಶಿಸ್ತು ಪಾಲಿಸದೇ ವಾಹನ ಚಲಾಯಿಸಿರುವುದೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿ ತಕ್ಷಣ ಸ್ಪೀಡ್ ಬ್ರೇಕರ್ ಅಳವಡಿಸುವಂತೆ ಸಂಚಾರ ಪೊಲೀಸರಿಗೆ ಆಗ್ರಹಿಸಿದ್ದಾರೆ.