ಜನರು ದೀಪ ಹಚ್ಚಲು ಹಚ್ಚಲು ಹೋಗಿ ತಮ್ಮ ಮನೆಗೇ ಬೆಂಕಿ ಇಟ್ಟು ಸುಟ್ಟುಕೊಳ್ಳದಿದ್ದರೆ ಸಾಕು...' ಮೋದಿಯವರನ್ನು ವ್ಯಂಗ್ಯವಾಡಿದ ಶಿವಸೇನೆ ನಾಯಕ

Sanjay Raut
Published on

ನವದೆಹಲಿ: ಭಾನುವಾರ (ಏ.5) ರಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ದೀಪವನ್ನು ಹಚ್ಚಿ ಎಂದು ಪ್ರಧಾನಮಂತ್ರಿ ಕರೆಕೊಟ್ಟಿದ್ದಾರೆ.

ಕರೊನಾ ವಿರುದ್ಧ ಹೋರಾಟದಲ್ಲಿ ಯಾರೂ ಒಂಟಿಯಲ್ಲ. ಪರಸ್ಪರ ಒಗ್ಗಟ್ಟು, ಸಹಕಾರದಿಂದ ಕವಿದಿರುವ ಕಗ್ಗತ್ತಲಾದ ಕರೊನಾವನ್ನು ಎದುರಿಸೋಣ ಎಂದು ದೇಶದ ಜನರಿಗೆ ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು, ಏ.5ರಂದು ರಾತ್ರಿ 9ಗಂಟೆಗೆ ಪ್ರತಿಯೊಬ್ಬರೂ ಮನೆಯ ಬಾಲ್ಕನಿಗೆ ಬಂದು ಮೊಬೈಲ್ ಫ್ಲಾಶ್​ ಲೈಟ್​, ಮೊಂಬತ್ತಿ, ಟಾರ್ಚ್ ಮೂಲಕ ಬೆಳಕು ಹೊತ್ತಿಸಿ ಎಂದು ಹೇಳಿದ್ದಾರೆ.

ಆದರೆ ಪ್ರಧಾನಿ ನರೇಂದ್ರ ಮೋದಿಯರ ಈ ವಿಡಿಯೋ ಸಂದೇಶಕ್ಕೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಜನಸಾಮಾನ್ಯರಷ್ಟೇ ಅಲ್ಲದೆ, ವಿಪಕ್ಷಗಳ ನಾಯಕರೂ ವ್ಯಂಗ್ಯವಾಡುತ್ತಿದ್ದಾರೆ.

ದೀಪ ಬೆಳಗಲು ಹೇಳಿದ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಶಿವಸೇನಾ ಸಂಸದ ಸಂಜಯ್​ ರಾವತ್​ ವಾಗ್ದಾಳಿ ನಡೆಸಿದ್ದಾರೆ. ಮೋದಿಯವರ ಮಾತನ್ನು ಪಾಲಿಸಲು ಹೋಗಿ ಜನರು ತಮ್ಮ ತಮ್ಮ ಮನೆಗಳಿಗೆ ಬೆಂಕಿ ಹೊತ್ತಿಸಿಕೊಳ್ಳದಿದ್ದರೆ ಸಾಕು ಎಂದಿದ್ದಾರೆ.

ಮಾ.22ರಂದು ಜನತಾ ಕರ್ಫ್ಯೂದಿನ ಸಂಜೆ 5ಗಂಟೆಗೆ 5 ನಿಮಿಷ ನಿಮ್ಮ ನಿಮ್ಮ ಮನೆಯ ಬಾಲ್ಕನಿಗೆ ಬಂದು ಕರೊನಾ ವಾರಿಯರ್ಸ್​ಗಾಗಿ ಚಪ್ಪಾಳೆ ಹೊಡೆಯಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಅವರ ಮಾತನ್ನು ಹಲವರು ತಪ್ಪಾಗಿ ಅರ್ಥೈಸಿಕೊಂಡು, ರಸ್ತೆಗಳ ಮೇಲೆ ಗುಂಪುಗುಂಪಾಗಿ ಮೆರವಣಿಗೆ ಹೋಗುತ್ತ, ಜಾಗಟೆಗಳ್ನು ಹೊಡೆದಿದ್ದರು. ಅಲ್ಲಿಗೆ ಸಾಮಾಜಿಕ ಅಂತರದ ಪರಿಕಲ್ಪನೆಯನ್ನು ಮುರಿದಿದ್ದರು.

ಅದೇ ಘಟನೆಯನ್ನು ನೆನಪಿಸಿದ ಶಿವಸೇನೆ ಸಂಸದ ಸಂಜಯ್​ ರಾವತ್​​, ನರೇಂದ್ರ ಮೋದಿಯರು ಹಿಂದೊಮ್ಮೆ ಐದು ನಿಮಿಷ ಚಪ್ಪಾಳೆ ಹೊಡೆಲು ದೇಶದ ಜನರಿಗೆ ಹೇಳಿದ್ದರು. ಆ ಒಂದಷ್ಟು ಜನರು ರಸ್ತೆ ಮೇಲೆ ಗುಂಪುಗುಂಪಾಗಿ ಮೆರವಣಿಗೆ ಸಾಗಿ ಡ್ರಮ್​​ಗಳನ್ನು ಬಡಿದಿದ್ದರು. ಈಗ ದೀಪ ಬೆಳಗಲು ಕರೆಕೊಟ್ಟಿದ್ದಾರೆ. ಜನರು ತಮ್ಮ ಮನೆಗಳನ್ನು ಸುಟ್ಟುಕೊಳ್ಳದಿದ್ದರೆ ಸಾಕು ಎಂದು ಹೇಳಿದ್ದಾರೆ. ಹಾಗೇ, ಸರ್​, ದೀಪವನ್ನೇನೋ ಹಚ್ಚೋಣ, ಆದರೆ ಕರೊನಾ ವೈರಸ್​ನಿಂದ ಉಂಟಾಗಿರುವ ಈ ವಿಷಮ ಪರಿಸ್ಥಿತಿ ಸರಿಪಡಿಸಲು ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂಬುದನ್ನು ನಮಗೆ ತಿಳಿಸಿ ಎಂದು ಸಂಜಯ್ ರಾವತ್ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net