ಭವಿಷ್ಯದ ಭರವಸೆ: ಕರ್ತವ್ಯ ನೆನಪಿಸಿದ ಪ್ರಧಾನಿ ಭಾಷಣ

sdftfgh
Published on

ಎಪ್ಪತ್ತಾರನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನವದೆಹಲಿಯ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಭವ್ಯ ಭಾರತ ನಿರ್ಮಾಣ ಸಾಕಾರಗೊಳಿಸುವ ನಿಟ್ಟಿನಲ್ಲಿ ಹಲವು ಹೊಳಹುಗಳನ್ನು ತೆರೆದಿಟ್ಟರು. ಇದೇ ವೇಳೆ, ಅಭಿವೃದ್ಧಿಯ ಮಾರ್ಗದಲ್ಲಿ ದೇಶ ಎದುರಿಸುತ್ತಿರುವ ಎರಡು ಬೃಹತ್ ಸವಾಲುಗಳ ಬಗೆಗೂ ಅವರು ಪ್ರಸ್ತಾಪಿಸಿದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಾಗೂ ಕಳೆದ 75 ವರ್ಷಗಳಲ್ಲಿ ದೇಶವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಕೊಡುಗೆ ನೀಡಿದವರನ್ನೂ ಸ್ಮರಿಸಿದ ಮೋದಿ, ಭವ್ಯ ಭಾರತ ನಿರ್ವಣಕ್ಕಾಗಿ ನಾಯಕರು ಕಂಡ ಕನಸನ್ನು ಈಡೇರಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಉತ್ತಮ ಭಾರತ, ಗುಲಾಮಿ ಮನಸ್ಥಿತಿ ನಿವಾರಣೆ, ದೇಶದ ಪರಂಪರೆ ಬಗ್ಗೆ ಹೆಮ್ಮೆ, ವಿವಿಧತೆಯಲ್ಲಿ ಏಕತೆ ಹಾಗೂ ನಾಗರಿಕ ಕರ್ತವ್ಯಗಳಲ್ಲಿ ನಿಷ್ಠೆ- ಈ ಪಂಚಪ್ರಾಣಗಳ ಬಗೆಗೆ ಕೇಂದ್ರೀಕರಿಸಿ ಮುನ್ನಡೆಯುವ ಮೂಲಕ ಭವ್ಯ ಭಾರತವನ್ನು ಕಟ್ಟಬೇಕಾಗಿದೆ ಎಂದು ಕರೆ ನೀಡಿದ ಪ್ರಧಾನಿ, ಭಾರತದ ಯುವಜನರ ಸಾಮರ್ಥ್ಯದ ಬಗೆಗೆ ಅಗಾಧ ವಿಶ್ವಾಸ ವ್ಯಕ್ತಪಡಿಸಿದರು. ದೇಶದಲ್ಲಿ ಯುವ ಜನತೆಯಿಂದ ಹೊಸ ಅವಿಷ್ಕಾರಗಳು ನಡೆಯುತ್ತಿವೆ, ಯುವಕರಿಂದಲೇ ಡಿಜಿಟಲ್ ಭಾರತದ ಕನಸು ನನಸಾಗಲಿದೆ ಎಂದರು. ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ ಎಂಬ ಎರಡು ದೊಡ್ಡ ಸವಾಲುಗಳನ್ನು ನಾವೀಗ ಎದುರಿಸುತ್ತಿದ್ದೇವೆ ಎಂದು ಬೊಟ್ಟುಮಾಡಿದ ಮೋದಿ, ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಎಲ್ಲ ಭಾರತೀಯರ ಬೆಂಬಲ ಕೋರಿದರು.

ಸರ್ಕಾರಗಳು ಹಾಗೂ ಸಮಾಜ ಎರಡೂ ಕೂಡಿ ಕಾರ್ಯಗೈದಲ್ಲಿ ಮಾತ್ರ ಈ ಸಮಸ್ಯೆಗಳನ್ನು ನಿಯಂತ್ರಿಸಲು ಸಾಧ್ಯ ಎಂಬುದನ್ನು ಎಲ್ಲರೂ ಮನಗಾಣಬೇಕಾಗಿದೆ. ಸ್ವಾತಂತ್ರ್ಯದ ನೂರನೇ ವರ್ಷದ ಹೊತ್ತಿಗೆ ಭಾರತವನ್ನು ಮುಂದುವರಿದ ದೇಶವನ್ನಾಗಿಸಬೇಕೆಂಬ ಆಶಯವೂ ಅವರ ಮಾತಿನಲ್ಲಿ ವ್ಯಕ್ತವಾಯಿತು. ‘ಭಾರತ ಮೊದಲು’ ಎಂಬ ನೀತಿಯನ್ನು ಮುಂದುವರಿಸಬೇಕೆಂಬ ಮೋದಿ ಕರೆಯು, ದೇಶದ ಸರ್ವಾಂಗೀಣ ಪ್ರಗತಿಯಲ್ಲಿ ಪ್ರತಿಯೊಬ್ಬ ಭಾರತೀಯನ ಪಾತ್ರ ಹಾಗೂ ಕರ್ತವ್ಯದ ಸೂಚಕವೆಂದು ಹೇಳಬಹುದಾಗಿದೆ.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವಾತಂತ್ರೊ್ಯೕತ್ಸವ ಕೊಡುಗೆ ಎನ್ನುವಂತೆ ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ. ಕರ್ತವ್ಯ ನಿರ್ವಹಣೆ ವೇಳೆ ಹುತಾತ್ಮರಾಗುವ ರಾಜ್ಯದ ಯೋಧರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಹಾಗೂ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ಒದಗಿಸುವುದಾಗಿ ಘೊಷಿಸಿರುವುದು ಯೋಧರಿಗೆ ರಾಜ್ಯ ಸಲ್ಲಿಸುವ ಗೌರವದ ಪ್ರತೀಕವಾಗಿದೆ. ರಾಜ್ಯದ ಎಲ್ಲ ಸರ್ಕಾರಿ ಶಾಲೆ- ಕಾಲೇಜುಗಳಲ್ಲಿ

ಶೌಚಗೃಹಗಳನ್ನು 250 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿಗಳು ಪ್ರಕಟಿಸಿರುವುದು ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾಲಯಗಳಲ್ಲಿನ ವಿದ್ಯಾರ್ಥಿಗಳ ಪರದಾಟ ತಪ್ಪಿಸಲು ನೆರವಾಗಲಿದೆ. ಕುಶಲಕರ್ವಿುಗಳಿಗೆ 50,000 ರೂ.ವರೆಗೆ ಸಾಲ ಹಾಗೂ ಸಹಾಯಧನ ಯೋಜನೆ; ಭೂರಹಿತ ಕೃಷಿ ಕಾರ್ವಿುಕರ ಮಕ್ಕಳಿಗೂ ವಿದ್ಯಾನಿಧಿ ಯೋಜನೆ ವಿಸ್ತರಣೆ; ರಾಜ್ಯದಲ್ಲಿ ಭೂರಹಿತ ಕಾರ್ವಿುಕರು ಹೆಚ್ಚಾಗಿರುವ ಪ್ರದೇಶಗಳಲ್ಲಿ 4,050 ಅಂಗನವಾಡಿ ಕೇಂದ್ರಗಳ ಸ್ಥಾಪನೆ ಯೋಜನೆಗಳನ್ನೂ ಸಿಎಂ ಪ್ರಕಟಿಸಿದ್ದಾರೆ. ಈ ಯೋಜನೆಗಳ ಘೋಷಣೆಯೇನೋ ಉತ್ತಮವಾಗಿದೆ. ಆದರೆ ಅನುಷ್ಠಾನ ಪರಿಣಾಮಕಾರಿಯಾಗಿದ್ದರೆ ಮಾತ್ರ ನಿರೀಕ್ಷಿತ ಫಲ ದೊರಕಲು ಸಾಧ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net