ವಾಲ್ಮೀಕಿ ನಿಗಮದ ಹಗರಣಕ್ಕೂ ‘ಹನಿಟ್ರ್ಯಾಪ್’ ನಂಟು : ಸಿ.ಟಿ.ರವಿ ಆರೋಪ

16 ckm 1 c.t.ravi
ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ
Published on

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಕೋಟ್ಯಂತರ ರೂ.ಗಳ ಅಕ್ರಮಕ್ಕೆ ‘ಹನಿಟ್ರ್ಯಾಪ್’ ನಂಟಿದೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಗಂಭೀರ ಆರೋಪ ಮಾಡಿದರು.

ಪಕ್ಷದ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಆಂಧ್ರಪ್ರದೇಶದ ಸತ್ಯನಾರಾಯಣವರ್ಮಾ ಈ ಪ್ರಕರಣದಲ್ಲಿ ಕಿಂಗ್‌ಪಿನ್. ವರ್ಮಾ ಒಬ್ಬ ವೃತ್ತಿಪರ ಡ್ಯಾಶ್ ಎನ್ನುವ ಮಾಹಿತಿಯಿದೆ. ಹಲವು ರಾಜ್ಯಗಳಲ್ಲಿ ಇದೇ ರೀತಿ ನಡೆದ ಅಕ್ರಮಗಳಲ್ಲಿ ಈತನ ಪಾತ್ರವಿದೆ ಎಂದರು.

ರಾಜ್ಯದ ಸಚಿವರು, ಶಾಸಕರು ಸಹಕಾರ ನೀಡದಿದ್ದರೆ ವರ್ಮಾ ಅವರಿಗೆ ಏನೂಮಾಡಲಾಗುತ್ತಿದ್ದಿಲ್ಲ. ಲಭ್ಯ ಮಾಹಿತಿ ಪ್ರಕಾರ ಇವರನ್ನೆಲ್ಲ ಗೋವಾ, ಹೈದರಾಬಾದ್‌ಗೆ ಕರೆದುಕೊಂಡು ಹೋಗಿ ಹನಿಟ್ರ್ಯಾಪ್ ಬಲೆಗೆ ಕೆಡವಿದ್ದ. ಈ ಜಾಲ ದೊಡ್ಡದು, ವೃತ್ತಿಪರವಾದದ್ದೂ ಎಂದು ಸಿ.ಟಿ.ರವಿ ದೂರಿದರು.

ಹೊಸದೊಂದು ಮಾಹಿತಿ

ಪ್ರಕರಣ ಹೊರ ಬಿದ್ದ ಹೊಸತರಲ್ಲಿ ಕಮಿಷನ್ ಆಸೆಗೆ ಹಣ ಅಕ್ರಮ ವರ್ಗಾವಣೆ ಎಂದು ಹೇಳಲಾಯಿತು. ನಂತರ ರಿಯಲ್ ಎಸ್ಟೇಟ್‌ನಲ್ಲಿ ಹೂಡಿ, ಲಾಭ ಮಾಡಿಕೊಂಡ ನಂತರ ಹಣ ವಾಪಸ್ ಹಾಕುವವರಿದ್ದರು ಎನ್ನಲಾಯಿತು.

ನೆಕ್ಕುಂಟಿ ನಾಗರಾಜ್ ಹೆಸರು ಹೊರ ಬಿದ್ದಾಗ ಆತ ನಾಗೇಂದ್ರ ಆಪ್ತನಲ್ಲ. ಕಚೇರಿಯಲ್ಲಿ ಕ್ಲರ್ಕ್ ಆಗಿದ್ದ ಎಂಬ ತೇಪೆ ಹಚ್ಚಲಾಯಿತು. ಇದರಲ್ಲಿ ಹನಿಟ್ರ್ಯಾಪ್ ಲಿಂಕ್ ಇರುವುದು ನಿಚ್ಚಳವಾಗಿದೆ. ನಿಗಮದ ಹಣ ಲೂಟಿ ಹೊಡೆದು, ಚುನಾವಣೆಗೆ ಪಾರ್ಟಿ ಂಡ್ ಎಂದು ಹಂಚಿದ್ದಾರೆ.

ಪ್ರಕರಣದಲ್ಲಿ ತನಿಖೆಯನ್ನು ಹಳ್ಳ ಹಿಡಿಸುವ ಹುನ್ನಾರ ನಡೆದಿದೆ. ಒಂದೇ ಪ್ರಕರಣವನ್ನು ಎರಡು ಸಂಸ್ಥೆಗಳು ಏಕಕಾಲಕ್ಕೆ ನಡೆಸುವ ಅಗತ್ಯವಿಲ್ಲ. ಯೂನಿಯನ್ ಬ್ಯಾಂಕ್ ನೀಡಿದ ದೂರಿನ ಮೇರೆಗೆ ಸಿಬಿಐ ತನಿಖೆ ನಡೆಸುತ್ತಿದ್ದು, ರಾಜ್ಯ ಸರ್ಕಾರ ಕೂಡ ಒಪ್ಪಿಸಬೇಕು ಎಂದು ಸಿ.ಟಿ.ರವಿ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net