ಮನೆಯಲ್ಲೇ ಮಾಸ್ಕ್ ತಯಾರಿಸಿಕೊಳ್ಳಿ: ಹೊಲಿಗೆಯಂತ್ರ ಇಲ್ಲದಿದ್ದರೆ ಏನು ಮಾಡಬಹುದು?

Mask
Published on

ತೀರಾ ಅಗತ್ಯ ಸಂದರ್ಭದಲ್ಲಿ ಹೊರಗಡೆ ಹೋಗಬೇಕಾದಾಗ ಜನರು ಮಾಸ್ಕ್​ಗಳನ್ನು ಧರಿಸುವುದು ಉತ್ತಮ ಎಂದು ಕೇಂದ್ರ ಸರ್ಕಾರ ಮಾರ್ಗಸೂಚಿಯಲ್ಲಿ ಹೇಳಿದೆ. ಆದರೆ ಇಂದು ಮಾಸ್ಕ್​ಗಳ ಬೆಲೆ ಗಗನಮುಖಿಯಾಗುತ್ತಿದೆ. ಇದಕ್ಕೆ ಆತಂಕ ಪಡಬೇಕಿಲ್ಲ, ಜನರು ಮನೆಯಲ್ಲೇ ಮಾಸ್ಕ್​ಗಳನ್ನು ತಯಾರಿಸಿಕೊಳ್ಳಬಹುದು.

ಹೀಗೆ ಮಾಡಿ...

1. ಯಾವುದೇ ಹತ್ತಿ ಬಟ್ಟೆಯನ್ನು ಮುಖಗವಸಿಗೆ ಬಳಸಬಹುದು. ಅದನ್ನು ಉಪ್ಪು ಬೆರೆಸಿದ ಕುದಿಯುವ ನೀರಿನಲ್ಲಿ ಐದು ನಿಮಿಷ ನೆನೆಸಿ ಚೆನ್ನಾಗಿ ಒಣಗಿಸಿಕೊಳ್ಳಬೇಕು.

2. ದೊಡ್ಡವರಿಗಾದರೆ 9 ಅಂಗುಲ x 7 ಅಂಗುಲ, ಚಿಕ್ಕವರಿಗಾದರೆ 7 ಅಂಗುಲ x 5 ಅಂಗುಲ ಬಟ್ಟೆ ಕತ್ತರಿಸಿಕೊಳ್ಳಿ.

3. ಕಟ್ಟಲು ಹಾಗೂ ಪೈಪಿಂಗ್​ಗೆ ನಾಲ್ಕು ಸ್ಟ್ರಿಪ್​ಗಳನ್ನು ತುಂಡು ಮಾಡಿಕೊಳ್ಳಬೇಕು. ತುಂಡು ಮಾಡಿದ ಬಟ್ಟೆಗಳನ್ನು 1.55 ಅಂಗುಲ ಸ್ಟ್ರಿಪ್​ಗಳನ್ನಾಗಿ ಜೋಡಿಸಬೇಕು. ಅದು ಪೈಪಿಂಗ್ ಆಗಿ ಬಳಕೆಯಾಗುತ್ತದೆ.

4. ಕೆಳಮುಖವಾಗಿ ತಲಾ 1.5 ಅಂಗುಲ ಗಾತ್ರದ ಮೂರು ಪದರಗಳನ್ನು ರಚಿಸಿ.

5. ಪದರ ಮಾಡಿದ ಬಟ್ಟೆಯನ್ನು ತಿರುವಿ ಆ ಭಾಗದಲ್ಲೂ ಪದರ ಮಾಡಿಕೊಳ್ಳಿ. ಪದರಗಳನ್ನು ಮಾಡಿದ ನಂತರ ಅದರ ಗಾತ್ರ ಒಂಬತ್ತು ಇಂಚಿನಿಂದ ಐದು ಇಂಚಿಗೆ ಕುಗ್ಗುತ್ತದೆ.

6. ಎರಡೂ ಕಡೆ ಪದರಗಳನ್ನು ಪೈಪಿಂಗ್​ಗೆ ಜೋಡಿಸಿ. ಈಗ 40 ಇಂಚು ಉದ್ದದ ಮುಖಕ್ಕೆ ಆವರಿಸುವ ಬಟ್ಟೆಯನ್ನು ಮೇಲೆ ಮತ್ತು ಕೆಳಗೆ ಜೋಡಿಸಿ ಹೊಲಿಯಿರಿ. ಈ ಎರಡೂ ಸ್ಟ್ರಿಪ್​ಗಳನ್ನು ಮತ್ತೆ ಮೂರು ಬಾರಿ ಮಡಚಿ ಹೊಲಿಯಿರಿ.

7. ಮುಖದ ಭಾಗ (ಫೇಸ್ ಕವರ್) ನಿಮ್ಮ ಬಾಯಿಯ ಭಾಗ ಮುಚ್ಚಿರುವಂತಿರುವುದನ್ನು ಹಾಗೂ ಅದರ ಹಾಗೂ ಮುಖದ ನಡುವೆ ಅಂತರ (ಗ್ಯಾಪ್) ಇರದಿರುವುದನ್ನು ಖಾತರಿಪಡಿಸಿಕೊಳ್ಳಿ.

ಹೊಲಿಗೆಯಂತ್ರ ಇಲ್ಲದಿದ್ದರೆ ಏನು ಮಾಡಬಹುದು?

  • ಕರವಸ್ತ್ರವನ್ನು ಅದರ ಮಧ್ಯದವರೆಗೆ ಒಂದು ಕಡೆ ಮಡಚಿ.
  • ಇನ್ನೊಂದು ಅಂಚನ್ನು ಮೊದಲ ಮಡಚಿನ ಮೇಲೆ ಮಡಚಿ. ಮಧ್ಯ ದಿಂದ ಸಮಾನವಾಗಿ ಮತ್ತೆ ಮಡಚಿ.
  • ಬಟ್ಟೆಯ ಎಡಭಾಗಕ್ಕೆ ಒಂದು ರಬ್ಬರ್ ಬ್ಯಾಂಡ್ ಕಟ್ಟಿ. ಇನ್ನೊಂದು ಭಾಗವನ್ನೂ ಹಾಗೇ ಕಟ್ಟಿ.
  • ಎರಡೂ ರಬ್ಬರ್ ಬ್ಯಾಂಡ್​ಗಳ ನಡುವಿನ ಭಾಗ ನಿಮ್ಮ ಬಾಯಿ ಮತ್ತು ಮೂಗನ್ನು ಆವರಿಸು ವಂತಿರುವುದನ್ನು ಖಾತರಿಪಡಿಸಿ.
  • ಬಟ್ಟೆಯ ಒಂದು ಅಂಚನ್ನು ರಬ್ಬರ್ ಬ್ಯಾಂಡ್​ನ ಬದಿಗೆ ತೆಗೆದುಕೊಂಡು ಅದರ ಮೇಲೆ ಮಡಚಿ. ಎರಡೂ ಕಡೆ ಹೀಗೆ ಮಾಡಿ. ಒಂದು ಮಡಿಕೆಯನ್ನು ಇನ್ನೊಂದರಲ್ಲಿ ಸೇರಿಸಿ.
  • ಈ ಮಾಸ್ಕ್ ಧರಿಸಲು ರಬ್ಬರ ಬ್ಯಾಂಡ್​ಗಳನ್ನು ಕಿವಿಯ ಸುತ್ತ ಸಿಕ್ಕಿಸಿಕೊಳ್ಳಿ.

ಮಾರ್ಗಸೂಚಿಯಲ್ಲಿ ಏನಿದೆ..?

ನವದೆಹಲಿ: ಅಗತ್ಯ ಸಾಮಗ್ರಿ ಖರೀದಿಗೆ ಮನೆಯಿಂದ ಹೊರಗೆ ಬರುವ ಜನರು ಶುದ್ಧ ಬಟ್ಟೆಯಿಂದ ತಯಾರಿಸಿದ ಮಾಸ್ಕ್ ಧರಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ಮಾರ್ಗಸೂಚಿಯಲ್ಲಿ ತಿಳಿಸಿದೆ. ವೈದ್ಯಕೀಯ ಸಿಬ್ಬಂದಿ ಮತ್ತು ಸೋಂಕಿತರ ಜತೆ ಸಂಪರ್ಕದಲ್ಲಿರುವವರು ಮನೆಯಲ್ಲಿ ಮಾಸ್ಕ್​ಗಳನ್ನು ತಯಾರಿಸಬಾರದು. ಒಬ್ಬ ವ್ಯಕ್ತಿ ಬಳಸಿದ ಮಾಸ್ಕ್​ನ್ನು ಮತ್ತೊಬ್ಬ ವ್ಯಕ್ತಿ ಬಳಸಬಾರದು. ಹಾಗಾಗಿ ಮನೆಯಲ್ಲಿ ಎಷ್ಟು ಜನರಿದ್ದಾರೋ ಅಷ್ಟು ಮಾಸ್ಕ್​ಗಳನ್ನು ತಯಾರಿಸಿಕೊಳ್ಳಿ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಈ ಹಿಂದೆ ಆರೋಗ್ಯ ಸಚಿವಾಲಯವು ಪ್ರತಿಯೊಬ್ಬರೂ ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ. ಯಾರು ಕೆಮ್ಮು, ಜ್ವರದಿಂದ ಬಳಲುತ್ತಿದ್ದಾರೋ ಮತ್ತು ಸೋಂಕಿತರ ಹಾಗೂ ಶಂಕಿತರ ಸಂಪರ್ಕ ಹೊಂದಿದ್ದಾರೋ ಅವರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಎಂದು ತಿಳಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net