

| ತಿಪ್ಪಣ್ಣ ಅವಧೂತ ಹುಬ್ಬಳ್ಳಿ
ಲೋಕಸಭಾ ಚುನಾವಣೆಯಲ್ಲಿ ಸ್ವತಃ ಕಣಕ್ಕಿಳಿಯುವ ಅಡಕತ್ತರಿಯಿಂದ ತಪ್ಪಿಸಿಕೊಳ್ಳಲು ಮಕ್ಕಳು ಹಾಗೂ ಸಂಬಂಧಿಕರನ್ನು ಅಖಾಡಕ್ಕಿಳಿಸಿರುವ ರಾಜ್ಯದ ಪ್ರಮುಖ ಸಚಿವರು ಚುನಾವಣೆ ಘೊಷಣೆಯಾಗಿ 20 ದಿನ ಕಳೆದರೂ ಕ್ಷೇತ್ರ ಬಿಟ್ಟು ಹೊರಬರುತ್ತಿಲ್ಲ. ಬಿಜೆಪಿಯಲ್ಲೂ ಸಹ ಕೆಲವು ಕ್ಷೇತ್ರದಲ್ಲಿ ಇದೇ ರೀತಿ ವಾತಾವರಣವಿದ್ದು ತಮ್ಮ ಕುಟುಂಬದ ಸದಸ್ಯರನ್ನು ಗೆಲ್ಲಿಸಿಕೊಳ್ಳಲು ಪ್ರಮುಖ ನಾಯಕರು ಸ್ವಕ್ಷೇತ್ರಕ್ಕೆ ಸೀಮಿತಗೊಂಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚು, ಬಿಜೆಪಿ ಮತ್ತು ಜೆಡಿಎಸ್ ಸ್ವಲ್ಪ ಕಡಿಮೆ ಸಂಖ್ಯೆಯಲ್ಲಿ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಿ ಕಣಕ್ಕಿಳಿಸಿವೆ. ಇದರಿಂದಾಗಿ ‘ಪರಿವಾರ ವಾದ’ ರಾಜಕಾರಣ ಅವಧಿ ಮುಗಿದ (ಔಟ್ ಡೇಟೆಡ್) ವಿಷಯವಸ್ತುವಾಗಿದೆ. ಇಷ್ಟರ ನಡುವೆ ತಮ್ಮ ಮಕ್ಕಳು, ಸಂಬಂಧಿಕರನ್ನು ಗೆಲ್ಲಿಸಿಕೊಂಡು ರಾಜಕೀಯ ಭವಿಷ್ಯ ರೂಪಿಸಲು ದೊಡ್ಡ ನಾಯಕರು ಹೋರಾಟ ನಡೆಸುತ್ತಿದ್ದಾರೆ. ರಾಜ್ಯದ 34 ಸಚಿವರ ಪೈಕಿ ಪ್ರಮುಖ ಖಾತೆ ಹೊಂದಿರುವ ಎಂಟು ಸಚಿವರ ಮಕ್ಕಳು ಹಾಗೂ ಸಂಬಂಧಿಕರಿಗೆ ಕಾಂಗ್ರೆಸ್ ಲೋಕಸಭೆ ಟಿಕೆಟ್ ನೀಡಿದೆ.ಇಷ್ಟೂ ಸಚಿವರು ಕ್ಷೇತ್ರದಲ್ಲೇ ಬೀಡುಬಿಟ್ಟಿದ್ದಾರೆ.
ಪ್ರಮುಖವಾಗಿ ಸಹೋದರ ಡಿ.ಕೆ. ಸುರೇಶ್ಗೆ ಬೆಂಗಳೂರು ಗ್ರಾಮೀಣ ಕ್ಷೇತ್ರದಲ್ಲಿ ಈ ಬಾರಿ ಗೆಲುವು ಕಷ್ಟ ಎಂಬುದನ್ನು ಅರಿತಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಸಭೆ ಆಯೋಜಿಸುತ್ತಿದ್ದಾರೆ. ಜತೆಗೆ ಆಪ್ತ ಸಚಿವರು ಹಾಗೂ ಶಾಸಕರನ್ನು ಮತಬೇಟೆಗೆ ನಿಯುಕ್ತಿಗೊಳಿಸಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ ಹೆಬ್ಬಾಳ್ಕರ್ ಗೆಲುವಿಗಾಗಿ ಚಿಕ್ಕೋಡಿ ಹಾಗೂ ಬೆಳಗಾವಿಯಲ್ಲೇ ಠಿಕಾಣಿ ಹೂಡಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ, ಅರಣ್ಯ ಸಚಿವ ಈಶ್ವರ ಖಂಡ್ರೆ ಪುತ್ರ ಸಾಗರ ಖಂಡ್ರೆ, ಸಕ್ಕರೆ ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತ ಪಾಟೀಲ, ಶಾಸಕ ಶಾಮನೂರ ಶಿವಶಂಕರಪ್ಪ ಸೊಸೆ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಪತ್ನಿ ಪ್ರಭಾ ಮಲ್ಲಿಕಾರ್ಜುನ ಅಖಾಡದಲ್ಲಿದ್ದು, ಅವರ ಗೆಲುವಿಗಾಗಿ ಸಚಿವರು ಕ್ಷೇತ್ರ ಬಿಟ್ಟು ಹೊರಗೆ ಹೋಗದಂತಾಗಿದೆ.
ಟಿಕೆಟ್ ಹಿಂದಿನ ಲಾಜಿಕ್: ಲೋಕಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ವೇಳೆ ಸಚಿವರನ್ನೇ ಕಣಕ್ಕಿಳಿಸುವ ಬಗ್ಗೆ ಕಾಂಗ್ರೆಸ್ನಲ್ಲಿ ಚರ್ಚೆಯಾಗಿತ್ತು. ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಐದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸಚಿವರನ್ನೇ ಕಣಕ್ಕಿಳಿಸುವ ಬಗ್ಗೆ ಪ್ರಸ್ತಾಪ ಮುಂದಿಟ್ಟಿದ್ದರು. ಎದುರಾಳಿಗೆ ಪೈಪೋಟಿ ನೀಡಲು ಸಮರ್ಥ ಅಭ್ಯರ್ಥಿ ಇಲ್ಲದೇ ಇರುವ ಕಾರಣ ಸಚಿವರನ್ನೇ ಕಣಕ್ಕಿಳಿಸುವುದು ಸೂಕ್ತ ಎಂಬ ವಾದ ಮುನ್ನೆಲೆಗೆ ಬಂದಿತ್ತು. ವಿಧಾನಸಭಾ ಚುನಾವಣೆ ಮುಗಿದು ಒಂದು ವರ್ಷದೊಳಗೆ ಲೋಕಸಭೆ ಚುನಾವಣೆ ಸಾಹಸಕ್ಕೆ ಕೈಹಾಕದಿರಲು ನಿರ್ಧರಿಸಿದ್ದ ಸಚಿವರೆಲ್ಲರೂ ಒಟ್ಟಾಗಿ ತಮ್ಮ ನಿಲುವು ಸ್ಪಷ್ಟಪಡಿಸಿದ್ದರಲ್ಲದೇ ಸಿಎಂ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರಿದರು. ಆದರೆ, ದೆಹಲಿ ನಾಯಕರು ಸಚಿವರು ಕಣಕ್ಕಿಳಿಯುವುದಿಲ್ಲವಾದರೆ ಅವರು ಹೇಳಿದವರಿಗೆ ಟಿಕೆಟ್ ನೀಡುತ್ತೇವೆ. ಕುಟುಂಬದವರಿಗಾದರೂ ಆದ್ಯತೆ ಕೊಡುತ್ತೇವೆ. ಈ ಷರತ್ತಿಗೆ ಒಪ್ಪದೇ ಹೋದರೆ ಸಚಿವರೇ ಕಣಕ್ಕಿಳಿಯಬೇಕೆಂದು ಪಟ್ಟುಹಿಡಿಯಿತು. ಅಂತಿಮವಾಗಿ ಸಚಿವರ ಕುಟುಂಬದವರಿಗೆ ಮಣೆ ಹಾಕಲಾಯಿತು. ಇದರ ಹಿಂದೆಯೂ ದೊಡ್ಡ ಲಾಜಿಕ್ ಕಾಣಿಸಿದೆ. ತಮ್ಮ ಕುಟುಂಬದವರೇ ಕಣಕ್ಕಿಳಿದರೆ ಗೆಲ್ಲಿಸಿಕೊಂಡು ಬರಲು ಸಚಿವರು ಹೆಚ್ಚಿನ ಮುತುವರ್ಜಿ ವಹಿಸುತ್ತಾರೆ. ತನು, ಮನ, ಧನ ಎಲ್ಲ ರೀತಿಯಲ್ಲೂ ಪಕ್ಷದ ಮೇಲೆ ಹೆಚ್ಚಿನ ಜವಾಬ್ದಾರಿ ಇರಲ್ಲ, ವೈಯಕ್ತಿಕ ಜವಾಬ್ದಾರಿ ನೀಡಿದಂತೆ ಎಂದು ದೆಹಲಿ ನಾಯಕರು ಭಾವಿಸಿದ್ದರು.
ಇದೇ ಮೊದಲು: ರಾಜ್ಯದ 28 ಕ್ಷೇತ್ರಗಳ ಪೈಕಿ ಒಟ್ಟಾರೆ 9 ಕ್ಷೇತ್ರಗಳಲ್ಲಿ ಸಚಿವರ ಮಕ್ಕಳಿಗೆ ಹಾಗೂ ಸಂಬಂಧಿಕರಿಗೆ ಲೋಕಸಭೆ ಚುನಾವಣೆ ಟಿಕೆಟ್ ಲಭಿಸಿರುವುದು ರಾಜ್ಯದ ಲೋಕಸಭೆ ಚುನಾವಣೆ ಇತಿಹಾಸದಲ್ಲೇ ಮೊದಲು ಎನ್ನಬಹುದು. ಗ್ಯಾರಂಟಿ ಯೋಜನೆಗಳು ‘ಕೈ’ ಹಿಡಿಯಬಹುದು ಎಂಬ ನಿರೀಕ್ಷೆಯಲ್ಲಿ ಸಚಿವರು ತಮ್ಮ ಮಕ್ಕಳನ್ನೇ ಕಣಕ್ಕಿಳಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಇಲ್ಲ ಉಸಾಬರಿ: ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶಿವಾನಂದ ಪಾಟೀಲ, ಉಡುಪಿ ಜಿಲ್ಲೆ ಉಸ್ತುವಾರಿಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಮಕ್ಕಳನ್ನು ಚುನಾವಣೆ ಕಣಕ್ಕೆ ಇಳಿಸಿರುವುದರಿಂದ ತಮ್ಮ ಉಸ್ತುವಾರಿ ಜಿಲ್ಲೆಗಳಿಂದ ದೂರವೇ ಉಳಿದಿದ್ದಾರೆ. ಚುನಾವಣೆ ಘೊಷಣೆಯಾದಾಗಿನಿಂದ ಒಮ್ಮೆಯೂ ಆ ಜಿಲ್ಲೆಗಳತ್ತ ಚಿತ್ತ ಹರಿಸಿಲ್ಲ. ಹೀಗಾಗಿ ಆ ಜಿಲ್ಲೆಗಳಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಸಚಿವರ ದರ್ಶನವೇ ಇಲ್ಲದಂತಾಗಿದೆ.
1.ಲೋಕ ಸಮರದಲ್ಲಿ ಕುಟುಂಬದವರು ಸೋತರೆ ನೈತಿಕತೆ ಪ್ರಶ್ನೆ ಎದುರಾಗಲಿದೆ.
2. ಕ್ಷೇತ್ರ ಕಳೆದುಕೊಂಡರೆ ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಡಬೇಕೆಂಬ ಒತ್ತಡ ಎದುರಿಸಬೇಕಾಗುತ್ತೆ
3. ಕುಟುಂಬ ಸದಸ್ಯರನ್ನು ಗೆಲ್ಲಿಸಿಕೊಂಡರೆ ಶಕ್ತಿ ಹಿಗ್ಗಿ ವ್ಯಾಪ್ತಿ ವಿಸ್ತರಿಸಲಿದೆ.
4. ಕುಟುಂಬದವರನ್ನೇ ಗೆಲ್ಲಿಸಿಕೊಳ್ಳಲಾಗಲಿಲ್ಲ ಎಂಬ ಮಾತು ಉಳಿದು ಹೋಗುತ್ತದೆ.
5. ಎದುರಾಳಿಗಿಂತ ಒಳ ಹೊಡೆತದ ಭೀತಿಯಲ್ಲೇ ಕೆಲಸ ಮಾಡಬೇಕಾದ ಅನಿವಾರ್ಯತೆ