ಬಿಜೆಪಿ ವಿರುದ್ಧ ಗೃಹ ಸಚಿವರ ಅಸಮಾಧಾನ

g parameshwara
Published on

ಬೆಂಗಳೂರು: ಕರ ಸೇವಕರ ಬಂಧನ ವಿಚಾರವಾಗಿ ಬಿಜೆಪಿ ನಾಯಕರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುತ್ತಿರುವುದಕ್ಕೆ ಗೃಹ ಸಚಿವ ಜಿ. ಪರಮೇಶ್ವರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರ.

ಸುದ್ದಿಗಾರರಿಗೆ ಗುರುವಾರ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಕರ್ತವ್ಯ. ಕಾನೂನು ಪ್ರಕಾರ ಪೊಲೀಸರು ಕ್ರಮತೆಗೆದುಕೊಂಡಿದ್ದಾರೆ. ಅನಾವಶ್ಯಕವಾಗಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಇದನ್ನು ನಾವು ಸಹಿಸುವುದಿಲ್ಲ ಎಂದರು.

ಬಿಜೆಪಿಯವರು ಏನು ಮಾಡಬೇಕೋ ಅದನ್ನು ಮಾಡಲಿ. ನಾವು ಏನೋ ಮಾಡಬೇಕು ಅದನ್ನು ಮಾಡುತ್ತೇವೆ ಎಂದ ಅವರು ಬಿಜೆಪಿಯವ ಒತ್ತಾಯದಂತೆ ಯಾವ ಕಾರಣಕ್ಕೆ ಇನ್ಸ್ಪೆಕ್ಟರನ್ನು ಅಮಾನತು ಮಾಡಬೇಕು. ಅವರ ಪಾಡಿಗೆ ಅವರು ಕೆಲಸ ಮಾಡಿದ್ದಾರೆ, ಸರ್ಕಾರ ಅವರನ್ನು ಕಡ್ಡಾಯ ರಜೆ ಮೇಲೆ ಏನು ಕಳುಹಿಸಿಲ್ಲ. ಮೊದಲೇ ರಜೆ ಕೇಳಿದ್ದರು. ಹಾಗಾಗಿ ರಜೆ ಮೇಲೆ ಹೋಗಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಈಗ ರಾಮಮಂದಿರ ಉದ್ಘಾಟನೆ ಸಂದರ್ಭ ಬಿಟ್ಟರೆ ಕರಸೇವಕನ ಬಂಧನ ವಿಷಯದಲ್ಲಿ ಕಾನೂನು ವಿರುದ್ಧವಾಗಿ ಪೊಲೀಸರು ಕೆಲಸ ಮಾಡಿಲ್ಲ. ಬಿಜೆಪಿಯವರು ಅನಾವಶ್ಯಕವಾಗಿ ದೊಡ್ಡ ಪ್ರಮಾಣದ ರಾಜಕೀಯ ಮಾಡುತ್ತಿದ್ದಾರೆ. ಈ ರಾಜಕಾರಣವನ್ನು ನಾವು ಹೇಗೆ ಸಹಿಸಬೇಕು. ಬಿಜೆಪಿಯವರಿಗೆ ಇಷ್ಟ ಆಗಿಲ್ಲ ಎಂದು ಪೋಲಿಸ್ ಅಧಿಕಾರಿಗಳನ್ನ ಸಸ್ಪೆಂಡ್ ಮಾಡಲು ಆಗುತ್ತದೆಯೇ ಎಂದರು.

ಬಿ.ಕೆ ಹರಿಪ್ರಸಾದ್ ಗೋಧ್ರಾ ಘಟನೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಮಾಹಿತಿ ಬಂದರೆ ಅದನ್ನು ನಿರ್ವಹಿಸಲು ನಮ್ಮ ಇಲಾಖೆ ಸಮರ್ಥವಾಗಿದೆ. ಅಹಿತಕರ ಘಟನೆಗೆ ಅವಕಾಶ ಕೊಡುವುದಿಲ್ಲ. ಸಂದರ್ಭ ಬಂದಾಗ ಹರಿಪ್ರಸಾದ್ ರನ್ನೇ ಕೇಳೋಣ ಎಂದು ಹೇಳಿದರು.

ಹರಿಪ್ರಸಾದ್ ನಮ್ಮ ಪಕ್ಷದ ಹಿರಿಯ ನಾಯಕರು, ಅವರು ಹೇಳುವಾಗ ಒಂದಷ್ಟು ಮಾಹಿತಿ ಇರಬಹುದು. ಅವರಿಗೆ ನೋಟಿಸ್ ಕೊಡುವ ಅಗತ್ಯ ಇಲ್ಲ. ಈ ಹೇಳಿಕೆಗಳು ಕೊಟ್ಟವರಿಗೆಲ್ಲ ನೋಟಿಸ್ ಕೊಡುತ್ತಾ ಹೋದರೆ ಎಷ್ಟು ಜನರಿಗೆ ಕೊಡಬೇಕಾಗಬಹುದೆಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net