

ಬೆಂಗಳೂರು: ಏನೇ ಮಾಡಿದರೂ ಹಾವಳಿ ಇಡುತ್ತಲೇ ಇರುವ ಕರೊನಾ ಸೋಂಕನ್ನು ಇಲ್ಲವಾಗಿಸಲು ಜಗತ್ತಿನಾದ್ಯಂತ ಲಸಿಕೆ ಕಂಡುಹಿಡಿಯಲು ಸಂಶೋಧನೆಗಳು ನಡೆಯುತ್ತಿವೆ. ಆ ನಿಟ್ಟಿನಲ್ಲಿ ಹಲವು ಔಷಧ ಕಂಪನಿಗಳು ಪ್ರಯತ್ನಿಸುತ್ತಿರುವ ಜತೆಗೆ ರಾಜಕೀಯ ಪಕ್ಷಗಳೂ ತಲೆಕೆಡಿಸಿಕೊಂಡಿವೆ. ಆದರೆ ಇಲ್ಲೊಬ್ಬರು ಆರೋಗ್ಯ ಸಚಿವರು ಎಲ್ಲರಿಗಿಂತ ಮುಂದೆ ಒಂದು ವಿಶೇಷವಾದ ಹೆಜ್ಜೆ ಇಟ್ಟಿದ್ದಾರೆ.
ಭಾರತ್ ಬಯೋಟೆಕ್ ಕಂಪನಿಯು ಕೋವ್ಯಾಕ್ಸಿನ್ನ ಮೂರನೇ ಹಂತದ ಪ್ರಯೋಗವನ್ನು ನಡೆಸಲಿರುವುದಾಗಿ ಸೋಮವಾರ ಘೋಷಿಸಿದೆ. ಇದರಲ್ಲಿ ದೇಶಾದ್ಯಂತದ 26 ಸಾವಿರ ಸ್ವಯಂಸೇವಕರು ತಮ್ಮನ್ನು ಪ್ರಯೋಗಕ್ಕೆ ಒಡ್ಡಿಕೊಳ್ಳಲಿದ್ದಾರೆ ಎಂದು ಅದು ತಿಳಿಸಿದೆ. ಈ ಪ್ರಯೋಗವು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪಾಲುದಾರಿಕೆಯಲ್ಲಿ ನಡೆಯಲಿದ್ದು, ಇದು ದೇಶದಲ್ಲಿ ನಡೆಯುತ್ತಿರುವ ಕೋವಿಡ್-19ನ ಬೃಹತ್ ಪ್ರಯೋಗ ಎನಿಸಿಕೊಂಡಿದೆ. ಇದಕ್ಕೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ ಮಾನ್ಯತೆಯೂ ಇದೆ.
ವಿಶೇಷವೆಂದರೆ ಈ ಪ್ರಯೋಗದಲ್ಲಿ ಪ್ರಥಮ ಸ್ವಯಂಸೇವಕರಾಗಿ ಗೃಹ ಸಚಿವರೊಬ್ಬರು ಪಾಲ್ಗೊಳ್ಳಲಿದ್ದಾರೆ. ಹರಿಯಾಣದ ಗೃಹ ಸಚಿವ ಅನಿಲ್ ವಿಜ್ ಇಂಥದ್ದೊಂದು ಸಾಹಸಕ್ಕೆ ಮುಂದಾಗಿದ್ದಾರೆ. ಕರೊನಾ ಲಸಿಕೆ ಕೋವ್ಯಾಕ್ಸಿನ್ನ 3ನೇ ಹಂತದ ಪ್ರಯೋಗವನ್ನು ಭಾರತ್ ಬಯೋಟೆಕ್ ನ. 20ರಿಂದ ಹರಿಯಾಣದಲ್ಲಿ ನಡೆಸಲಿದೆ. ಅದರಲ್ಲಿ ಪ್ರಥಮ ಸ್ವಯಂಸೇವಕನಾಗಿ ಪಾಲ್ಗೊಳ್ಳುವ ನಾನು ಮೊದಲಿಗನಾಗಿ ಲಸಿಕೆ ತೆಗೆದುಕೊಳ್ಳಲಿದ್ದೇನೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.