

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಮನೆ ಊಟ ಪಡೆಯಲು ಅನುಮತಿ ಕೊಡುವಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಮೇಲ್ವಿಚಾರಕರಿಗೆ ನಿರ್ದೇಶಿಸಬೇಕು ಎಂದು ಕೋರಿರುವ ಅರ್ಜಿಯನ್ನು ಮೊದಲಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಲ್ಲಿಸುವಂತೆ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.
ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಿತು. ಈ ವೇಳೆ ದರ್ಶನ್ ಪರ ಹಿರಿಯ ವಕೀಲ ಕೆ.ಎನ್.ಫಣೀಂದ್ರ, ಕರ್ನಾಟಕ ಬಂಧೀಖಾನೆ ಕಾಯ್ದೆಯ 1963 ಸೆಕ್ಷನ್ 30ರ ಪ್ರಕಾರ ವಿಚಾರಣಾಧೀನ ಕೈದಿ ಮನೆ ಊಟ ಮತ್ತು ಇತ್ಯಾದಿ ಪಡೆಯಲು ಅರ್ಹರಾಗಿದ್ದಾರೆ ಎಂದು ಹೇಳಿದರು.
ಆಗ ಪೀಠವು ಇಂಥ ವಿಚಾರಕ್ಕೆ ಸಂಬಂಧಿಸಿದಂತೆ ದೇಶದ ಯಾವುದೇ ನ್ಯಾಯಾಲಯ ಮಾಡಿರುವ ಒಂದು ಆದೇಶವನ್ನು ಕೊಡಿ ಎಂದರು. ಈ ವಿಚಾರದಲ್ಲಿ ಆದೇಶ ಮಾಡಲೇಬೇಕು ಎಂದಾದರೆ ವಿಸ್ತೃತವಾಗಿ ವಾದ ಆಲಿಸಬೇಕಿದೆ. ಅದಕ್ಕೆ ಕಾಲಾವಕಾಶಬೇಕಿದೆ. ಇದಕ್ಕೂ ಮುನ್ನ, ನೀವು ವಿಚಾರಣಾಧೀನ ನ್ಯಾಯಾಲಯದಲ್ಲಿ (ಮ್ಯಾಜಿಸ್ಟ್ರೇಟ್) ಅರ್ಜಿ ಸಲ್ಲಿಸಬಹುದು. ನಾಳೆಯೇ ಅರ್ಜಿ ಸಲ್ಲಿಸಿ, ಸೋಮವಾರ ಸರ್ಕಾರ ಆಕ್ಷೇಪಣೆ ಹಾಕಲು ಆದೇಶಿಸಲಾಗುವುದು. ಮ್ಯಾಜಿಸ್ಟ್ರೇಟ್ ಜು.27ರ ಒಳಗೆ ಪ್ರಕರಣ ನಿರ್ಧರಿಸಬೇಕು ಎಂದು ಆದೇಶ ಮಾಡಲಾಗುವುದು ಎಂದು ತಿಳಿಸಿ, ವಿಚಾರಣೆಯನ್ನು ಜು.29ಕ್ಕೆ ಮುಂದೂಡಲಾಯಿತು.