

ಇನ್ನೊಂದು ಘಟನೆ! ಐದು ಜನ ಹೆಣ್ಣುಮಕ್ಕಳ ನಂತರ ತಾಯಿ ಭುವನೇಶ್ವರಿ ದೇವಿ ಒಂದು ಗಂಡು ಮಗುವನ್ನು ದಯಪಾಲಿಸಲು ಕಾಶಿಯ ವೀರೇಶ್ವರ ಶಿವನ ಮೊರೆಹೊಕ್ಕಳು. ಪ್ರತಿ ಸೋಮವಾರ ವ್ರತ, ಉಪವಾಸ, ಪೂಜೆಗಳನ್ನು ಕಾಶಿ ಹಾಗೂ ಕಲ್ಕತ್ತೆಯಲ್ಲಿ ಭಕ್ತಿ, ಶ್ರದ್ಧೆಗಳಿಂದ ಸಲ್ಲಿಸಲಾಗುತ್ತಿತ್ತು. ಆದರೆ ಪ್ರತಿನಿತ್ಯವೆಂಬಂತೆ ಆ ಎರಡು ವರ್ಷ ನಿರಂತರ ಶಿವಮಹಿಮೆ, ಶಿವಧ್ಯಾನದಲ್ಲಿ ಅವಳ ಮನಸ್ಸು ಮುಳುಗಿರುತ್ತಿತ್ತು. ಮುಂದೆ ಹುಟ್ಟಿದ ಮಗುವೇ ಸ್ವಯಂ ಶಿವನನ್ನೇ ಹೋಲುತ್ತಿದ್ದ ಜಗತ್ಪ್ರಸಿದ್ಧ ಸ್ವಾಮಿ ವಿವೇಕಾನಂದರು. ಶಿವ, ಸಂನ್ಯಾಸಿಗಳ ರಾಜ; ತ್ಯಾಗಿ; ತಾನು ವಿಷ ಕುಡಿದು ಜಗತ್ತನ್ನು ಕಾಪಾಡಿದವನು. ವಿವೇಕಾನಂದರ ಜೀವನ ಕೂಡ ಹಾಗೆಯೇ ಆಗಿದ್ದುದರಲ್ಲಿ ಆಶ್ಚರ್ಯವೇನಿಲ್ಲ.
ಇಂಥ ಉದಾಹರಣೆಗಳ ಪರಂಪರೆಯೇ ಭಾರತದಲ್ಲಿ ಸಿಗುತ್ತದೆ. ಶ್ರೀರಾಮಕೃಷ್ಣ, ಪ್ರಹ್ಲಾದ, ಅಭಿಮನ್ಯು ಇಲ್ಲಿ ವಿಶೇಷವಾಗಿ ಎದ್ದು ಕಾಣುತ್ತಾರೆ. ಪ್ರಹ್ಲಾದನ ವಿಷಯದಲ್ಲಿ ತಾಯಿ ನಡೆಸಿದ ಜೀವನ ಎಲ್ಲ ವಂಶವಾಹಿನಿಗಳ ಸಮಗ್ರ ಪರಿಣಾಮವನ್ನು ಹೊಡೆದುಹಾಕಿ ‘ತಾಯಿಯ ಮನಸ್ಸೇ ಮಗುವಿನ ಮನಸ್ಸಾಗುತ್ತದೆ’ ಎಂಬುದನ್ನು ಸಾರುತ್ತದೆ. ನಾವು ಬಯಸಿದಂತೆ ನಮ್ಮ ಮಕ್ಕಳಿಲ್ಲ ಎಂಬ ಕೊರಗು ಒಬ್ಬಿಬ್ಬರು ತಾಯಂದಿರದ್ದೇ? ಈ ನಿಟ್ಟಿನಲ್ಲಿ ಅವರು ಅಸಹಾಯಕರೇ? ಅಸಹಾಯಕತೆ ಮತ್ತು ಭಾರತೀಯ ಸಂಸ್ಕೃತಿ ಪರಸ್ಪರ ವಿರುದ್ಧ ಪದಗಳು. ‘ನಿನ್ನ ಉದ್ಧಾರ ನಿನ್ನ ಕೈಯಲ್ಲಿದೆ, ನಿನ್ನ ಭವಿಷ್ಯದ ನಿರ್ವತೃ ನೀನೇ’ ಎಂಬ ಸಂದೇಶ ಬೇರೆ ಬೇರೆ ರೀತಿಯಲ್ಲಿ ಮೊಳಗಿಸಿರುವುದನ್ನು ನೋಡುತ್ತೇವೆ. ಗೀತೆಯಲ್ಲಿ ಶ್ರೀಕೃಷ್ಣ ಇದನ್ನು ಪಾಂಚಜನ್ಯದ ಮೂಲಕ ಶಂಖನಾದದಿಂದ ಮೊಳಗಿಸಿದ.
ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್|
ಆತ್ಮೈವ ಹ್ಯಾತ್ಮನೋ ಬಂಧುರಾತ್ವೈವ ರಿಪುರಾತ್ಮನಃ ||
ಶ್ರೀಶಂಕರರು ಈ ಶ್ಲೋಕವೇ ಇಡೀ ಭಗವದ್ಗೀತೆಯ ಸಾರ ಎಂದರು. ಇದೇ ಕರ್ಮಸಿದ್ಧಾಂತ. ಆದರೆ ನಾವು ಇದನ್ನು ಅರ್ಥೈಸಿದ ರೀತಿಯೇ ಬೇರೆ. ಅದೊಂದು ಅದ್ಭುತವಾದ Science of self reliance ಎಂದು ಅರ್ಥ ಮಾಡಿಕೊಳ್ಳಲೇ ಇಲ್ಲ. ‘"Karma is the eternal assertion of one’s own freedom' ಎಂದು ವ್ಯಾಖ್ಯಾನಿಸಿದ್ದಾರೆ. ನಮ್ಮ ಸ್ಥಿತಿಗತಿಗಳನ್ನು ನಾವೇ ನಿರ್ವಿುಸಿಕೊಳ್ಳುತ್ತೇವೆ. ಅದರ ಸಂಪೂರ್ಣ ಸ್ವಾತಂತ್ರ್ಯ ನಮಗೆ ಇದೆ. ಇಲ್ಲಿ ಯಾರ ಕೈವಾಡವೂ ಬೇಕಾಗಿಲ್ಲ ಎಂಬ ಧೀರತೆಯ ದುಂದುಭಿ ಕರ್ಮಸಿದ್ಧಾಂತ.
ಮೇಲಿನ ಸಂಶೋಧನೆ ಇಂಗ್ಲೆಂಡಿಗೆ ಹೊಸದಾದದ್ದು ಆದರೆ ಭಾರತಕ್ಕಲ್ಲ. ಬುದ್ಧ ಪೂರ್ವದಲ್ಲೇ ಇವೆಲ್ಲ ಹಳೆಯ ವಿಷಯಗಳು. ಗೃಹ್ಯಸೂತ್ರಗಳು, ಮನು ಇತ್ಯಾದಿ ಸ್ಮೃತಿಗಳು ಇವನ್ನೆಲ್ಲ ಸಾರಿ ಹೇಳುತ್ತವೆ. ಮಹಾನಿರ್ವಾಣ ತಂತ್ರವೇನೂ ಹಿಂದೆ ಬೀಳುವುದಿಲ್ಲ. ಆಧುನಿಕ ಕಾಲದಲ್ಲಿ ವಿವೇಕಾನಂದರ ಕರ್ಮಯೋಗ ಇದನ್ನು ಪ್ರತಿಫಲಿಸುತ್ತದೆ. ಇಂದಿಗೂ ಹಳ್ಳಿಯಲ್ಲಿ ಗರ್ಭವತಿಯನ್ನು ದೇವಾಲಯ, ಆಶ್ರಮಗಳಿಗೆ ಕರೆದೊಯ್ಯುವುದು, ಸಾಧು-ಸಂತರ ಸೇವೆ, ಸಂಭಾಷಣೆಗಳಲ್ಲಿ, ಹಬ್ಬ-ಹರಿದಿನಗಳಲ್ಲಿ ಭಾಗವಹಿಸುವಂತೆ ಮಾಡುವುದು ಸರ್ವೇಸಾಮಾನ್ಯ. ಮನುಷ್ಯ ಜನ್ಮ ಒಂದು ಸೌಭಾಗ್ಯ, ಸ್ತ್ರೀಯ ಜೀವನದಲ್ಲಿ ಸಾರ್ಥಕತೆಯ ಪರಾಕಾಷ್ಠೆಯೇ ಮಾತೃತ್ವ ಎಂದು ತಿಳಿದ ಭಾರತ (ಅವಳು ಬ್ರಹ್ಮಚಾರಿಣಿಯೋ, ಸಂನ್ಯಾಸಿನಿಯೋ ಆಗ ಬಯಸಿದ ಸಂದರ್ಭಗಳನ್ನು ಬಿಟ್ಟು) ನೂತನ ಮಾನವನನ್ನು ತಮ್ಮಲ್ಲಿ ಸ್ವಾಗತಿಸುವ ಮತ್ತು ಸಂಭ್ರಮಿಸುವ ಪರಿಯನ್ನು ಈ ರೀತಿಯಲ್ಲಿ ನಿರ್ವಿುಸಿಕೊಂಡಿದೆ.
ಹೀಗೆ ಪ್ರಾರ್ಥನೆ, ತಪಸ್ಸಿನ ಫಲವಾಗಿ ಹುಟ್ಟಿದವನೇ ‘ಆರ್ಯ’ ಎಂದು ಹೇಳುತ್ತಾರೆ ಸ್ವಾಮಿ ವಿವೇಕಾನಂದರು. ಮಾತೆ ಅಥವಾ ಮಾತೃ ತನ್ನ ನಿರ್ವತೃವಿನ ಪಾತ್ರವನ್ನು ವಹಿಸುವ ಪ್ರಥಮ ಘಟ್ಟ ಇದು. ಹೀಗೆ ಹುಟ್ಟಿ ಬೆಳೆದವನೇ ‘ಪ್ರಜಾ’. ಸಂಸ್ಕೃತದಲ್ಲಿ, ಪ್ರಜಾ ಎಂದರೆ ಯೋಗ್ಯ ರೀತಿಯಲ್ಲಿ ಹುಟ್ಟಿದವನು ಎಂದರ್ಥ. ಮುಂದೆ ಇವನೇ ಸದ್ಗೃಹಸ್ಥನಾಗಿ ರೂಪಗೊಳ್ಳುವುದು. ಸದ್ಗೃಹಸ್ಥರ ನಿರ್ವಣವಾಗದೆ ಸದೃಢ ಸಮಾಜವಾಗಲಿ, ಸಾಮರ್ಥ್ಯ ಸಂಸ್ಕೃತಿಗಳಿಂದೊಡಗೂಡಿದ ರಾಷ್ಟ್ರವಾಗಲಿ ಕೇವಲ ಕನಸು. ಕಾರಣಗಳಿಲ್ಲದೆ ಪರಿಣಾಮಗಳಿಲ್ಲ; ಅಷ್ಟೇ ಅಲ್ಲ ಯಾವ ಕಾರಣವೂ ಪರಿಣಾಮವನ್ನು ನಿರ್ವಿುಸದೆ ಇರುವುದಿಲ್ಲ. ಇವೆಲ್ಲವನ್ನೂ ವೈಯಕ್ತಿಕ ಆಯ್ಕೆಗೆ ಬಿಡದೆ ಸ್ಮೃತಿಯಲ್ಲಿ ಸೇರಿಸಲಾಗಿದೆ ಎಂದಾಗ ಅವು ಕಟ್ಟುನಿಟ್ಟಾಗಿ ಪಾಲಿಸಬೇಕಾದ ಕರ್ತವ್ಯಗಳು ಎಂದರ್ಥ. ಕಾರಣವಿಷ್ಟೇ; ಸ್ವಾಮಿ ವಿವೇಕಾನಂದರು ಹೇಳಿದಂತೆ ಭಾರತೀಯ ಸಮಾಜದಲ್ಲಿ ವಿವಾಹ ಸಾರ್ವಜನಿಕ ಸಂಸ್ಥೆ, ವೈಯಕ್ತಿಕ ನೆಲೆಯಲ್ಲಿ ನಡೆದು ಹೋಗುವ ‘ಯಃಕಶ್ಚಿತ್’ ಘಟನೆಯಲ್ಲ, ಏಕೆಂದರೆ ಹುಟ್ಟುವ ಮಗು ಶ್ರೇಷ್ಠವ್ಯಕ್ತಿಯಾಗಿ ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರವೀಯುವ ಐತಿಹಾಸಿಕ ವ್ಯಕ್ತಿಯಾಗುವುದು ಎಷ್ಟು ದಿಟವೋ; ಅಷ್ಟೇ ದಿಟ ಒಬ್ಬ ದುಷ್ಟನಾಗಿ ಇಡೀ ಸಮಾಜವೇ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡುವುದು ಕೂಡ. ಭಾರತೀಯ ಸಂಸ್ಕೃತಿಯ ಉದ್ದಕ್ಕೂ ನಾವು ನೋಡುವುದು ಜೀವನವನ್ನು ವ್ರತವಾಗಿಸಿಕೊಂಡಿರುವುದನ್ನು. ಅದು ಗೃಹಸ್ಥನೇ ಆಗಿರಲಿ ಸಂನ್ಯಾಸಿಯೇ ಆಗಿರಲಿ. ಗೃಹಸ್ಥನಿಗೆ ಜೀವನವೇ ತಪಸ್ಸು, ಸಂನ್ಯಾಸಿಗೆ ತಪಸ್ಸೇ ಜೀವನ! ಆದ್ದರಿಂದಲೇ ಆಯುಷ್ಯದ ನಾಲ್ಕೂ ಘಟ್ಟಗಳನ್ನು ಬ್ರಹ್ಮಚರ್ಯ ಆಶ್ರಮ, ಗೃಹಸ್ಥ ಆಶ್ರಮ, ವಾನಪ್ರಸ್ಥ ಆಶ್ರಮ ಹಾಗೂ ಸಂನ್ಯಾಸ ಆಶ್ರಮ ಎಂದು ಕರೆಯಲಾಗಿದೆ. ಏಕೆಂದರೆ ತಪಸ್ಸು ನಡೆಯುವುದು ಆಶ್ರಮದಲ್ಲೇ.
ಸ್ತ್ರೀಯೊಬ್ಬಳಿಗೆ, ಮಾತೆಯೊಬ್ಬಳಿಗೆ ಪ್ರಕೃತಿ ಕೊಟ್ಟಿರುವ ಮಹಾನ್ ವರ ಎಂದರೆ ಮಕ್ಕಳೆಡೆಗಿನ ಅವಳ ಅದಮ್ಯ ವಾತ್ಸಲ್ಯ. ಇದು ಅವಳ ಬತ್ತಳಿಕೆಯಲ್ಲಿನ ಬ್ರಹ್ಮಾಸ್ತ್ರ. ಮನಃಶಾಸ್ತ್ರಜ್ಞರ ಅಭಿಪ್ರಾಯವೇನೆಂದರೆ ಮುಗ್ಧ ಮಕ್ಕಳು ತಾವು ಪ್ರೀತಿಸಿದ ವ್ಯಕ್ತಿಯ ಭಾವನೆ, ಆದೇಶ, ಆಸೆಗಳನ್ನು ಸಂಪೂರ್ಣವಾಗಿ ಗ್ರಹಿಸುತ್ತಾರೆ; ಸ್ವೀಕರಿಸುತ್ತಾರೆ. ತಮಗೇ ಗೊತ್ತಿಲ್ಲದೆ ಅದನ್ನು ಸುಪ್ತಪ್ರಜ್ಞೆಯಲ್ಲಿ ಧರಿಸಿಬಿಡುತ್ತಾರೆ ಎಂಬುದು. ಯಾವುದಾದರೂ ಸುಪ್ತಪ್ರಜ್ಞೆಗೆ ಇಳಿಯಿತೆಂದರೆ ಅದೇ ಮುಂದಿನ ಜೀವನದ ಮಾರ್ಗದರ್ಶಕ ಸೂತ್ರವಾಗಿಬಿಡುತ್ತದೆ. ಒಬ್ಬ ವ್ಯಕ್ತಿಯ ಇಡೀ ವ್ಯಕ್ತಿತ್ವ, ಸ್ವಭಾವವನ್ನೇ ಬದಲಾಯಿಸಿ ಬಿಡಬಹುದು ಅವನ ಸುಪ್ತಪ್ರಜ್ಞೆಯನ್ನು ತಟ್ಟಿ. ಇದನ್ನೇ ಉಪಯೋಗಿಸಿಕೊಂಡು ತಾಯಿಯ ವಾತ್ಸಲ್ಯವನ್ನೇ ಧಾರೆಯೆರೆಯಬಲ್ಲ ಗುರುವು ಮಕ್ಕಳ ಭವಿಷ್ಯವನ್ನೇ ಬದಲಾಯಿಸಬಹುದು, ಅರ್ಥಾತ್ ಯಾವುದೂ ನಮ್ಮನ್ನು ಬಂಧಿಸಲಾರದು. ಮನುಷ್ಯನ ಭವಿಷ್ಯ ಅವನ ಪ್ರಯತ್ನಗಳ ಆಚೆ ಎಂದೂ ನಿಂತಿಲ್ಲ. ರಾಮಕೃಷ್ಣರು ಒಬ್ಬ ಯಃಕಶ್ಚಿತ್ ಶಿಷ್ಯನಿಂದಲೂ ಅದ್ಭುತವಾದದ್ದೊಂದನ್ನು ಮಾಡಿಸಿ ಬಿಡುತ್ತಿದ್ದರು ಎಂದು ಮುಂದೆ ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು.
ವಿಲಿಯಮ್ ಸಹೋದರಿಯರು ವಿಂಬಲ್ಡನ್ ಟ್ರೋಫಿ ಗೆದ್ದಾಗ ಮತ್ತೆ ಮತ್ತೆ ಅವರು ನೆನಪಿಸಿಕೊಂಡಿದ್ದು ಅವರ ತಂದೆಯನ್ನು. ಟೆನಿಸ್ ಕ್ರೀಡಾಂಗಣದಲ್ಲಿ ಮೊದಲ ದಿನ ಅವರನ್ನು ಬಿಟ್ಟಾಗ, ‘ಮುಂದೊಂದು ದಿನ ನನ್ನೀರ್ವರೂ ಮಕ್ಕಳು ವಿಂಬಲ್ಡನ್ನಲ್ಲಿ ಸಂಧಿಸುವುದನ್ನು ನಾನು ನೋಡಲಿದ್ದೇನೆ’ ಎಂದಿದ್ದನ್ನು! ಹಾಗೆಯೇ ಜೆ.ಎಫ್. ಕೆನಡಿ; ಇದನ್ನು ಹೇಳುವಾಗ ನನ್ನ ಕಣ್ಣುಮುಂದೆ ಎದ್ದು ಬರುವುದು ವಿಶ್ವೇಶ್ವರಯ್ಯನವರ ಜೀವನದ ಘಟನೆಯೊಂದು.
ಬಾಲಕ ವಿಶ್ವೇಶ್ವರ ತನ್ನ ನೆರೆಯರೊಬ್ಬರ ಮನೆಗೆ ಹೋಗಿದ್ದಾಗ, ಗೃಹಿಣಿ ತಿನ್ನಲು ಹುರಿಹಿಟ್ಟು ಕೊಟ್ಟಳು. ಬಾಲ ಸಹಜರೀತಿಯಲ್ಲಿ ಬಾಯಿತುಂಬ ಹಾಕಿಕೊಂಡು ತಿನ್ನುವಾಗ ಒಣ ಹಿಟ್ಟು ಗಂಟಲಲ್ಲಿ ಸಿಕ್ಕಿ ನೆತ್ತಿ ಹತ್ತಿದಂತಾಯಿತು, ಉಸಿರಾಟವೇ ಕಷ್ಟವಾಯಿತು. ಕುಡಿಯಲು ನೀರು ಕೊಡೋಣ ಎಂದರೆ ಯಾವ ಪಾತ್ರೆ ಬಗ್ಗಿಸಿದರೂ ನೀರಿಲ್ಲ! ದಿಕ್ಕುತೋಚದ ಗೃಹಿಣಿ ಹಾಲನ್ನೇ ಬಗ್ಗಿಸಿಕೊಟ್ಟಳು. ಸಮಸ್ಯೆ ಬಗೆಹರಿಯಿತು! ಸಾವರಿಸಿಕೊಂಡ ಆಕೆ ಬಾಲಕ ವಿಶ್ವೇಶ್ವರನನ್ನು ಬಿಗಿದಪ್ಪಿ- ‘ನಿನ್ನನ್ನು ಕೊಂದುಬಿಡುತ್ತಿದ್ದೆನಲ್ಲೋ; ಮಗು! ನೀರಿಗೆ ಎಂಥ ಬರ ಬಂದಿದೆ ನಮ್ಮ ಊರಲ್ಲಿ! ಹೋಗಲಿ; ಇಷ್ಟು ಬುದ್ಧಿವಂತ ಹುಡುಗ ನೀನು, ನೀನಾದರೂ ಬೆಳೆದು ದೊಡ್ಡವನಾದ ಮೇಲೆ ಯಾವೂರಿಗೂ ಕುಡಿಯುವ ನೀರಿನ ಸಮಸ್ಯೆ ಇಲ್ಲದಂತೆ ನೋಡಿಕೋ’ ಎಂದು ನಿಡುಸುಯ್ದಳು! ಸರ್ ಎಂ.ವಿ. ಮುಂದಿನ ಜೀವನದಲ್ಲಿ ಇದು ಸತ್ಯವಾಗುವುದನ್ನು ನೋಡುತ್ತೇವೆ. ಸಾಗರದಾಚೆಯ ಏಡನ್, ಸಕ್ಕೂರ್, ಪುಣೆ, ಕೃಷ್ಣರಾಜಸಾಗರ, ಹೈದರಬಾದಿನ ಮೂಸಾ ಮತ್ತು ಈಸಿ ನದಿ, ವಿಜಯಪುರ ಇಲ್ಲೆಲ್ಲ (ಕೆಲವು ಉದಾಹರಣೆ ಮಾತ್ರ) ಈ tatesman Engineerನನ್ನು ಇಂದು ದೇವರಂತೆ ಗೌರವಿಸುತ್ತಾರೆ. ಹನುಮಂತನಂತೆ ಆಗಬೇಕೆಂದು ಬಯಸಿದ ಬಾಲಕ ನರೇಂದ್ರ ಸಮುದ್ರವನ್ನು ದಾಟಿದ! ‘ಭಾರತೀಯ ಅಸ್ಮಿತೆ’ ಎಂಬ ಕಳೆದುಹೋಗಿದ್ದ ಸೀತೆಯನ್ನು ವೈಭವದಿಂದ ಮರಳಿ ತಂದ!
ತಾಯಿಯೊಬ್ಬಳು ಪ್ರಜ್ಞಾವಂತಳಾದರೆ ಸಾಕು, ಬಲಿಷ್ಠ ಸಮಾಜ ಕನಸೇನಲ್ಲ, ಯೋಗ್ಯ ತಾಯಿ ಯಾವ ಸಮಾಜಸೇವಕಿಗೆ ಕಡಿಮೆ! ಬೇರೆ ಸೇವೆಗಳನ್ನು ಯಾರೂ ಮಾಡಬಹುದು. ಮಕ್ಕಳ ಭವಿಷ್ಯ ಮತ್ತು ಅದರ ನೇರ ಪರಿಣಾಮವೇ ಆದ ರಾಷ್ಟ್ರದ ಭವಿಷ್ಯ ಅವಳ ಕೈಯಲ್ಲಿರುವಷ್ಟು (ಶಿಕ್ಷಕನನ್ನು ಬಿಟ್ಟು) ಮತ್ತಾರಕೈಯಲ್ಲೂ ಇಲ್ಲ. ಪ್ರತಿ ಸ್ತ್ರೀಗೂ ಇದರ ಬಗ್ಗೆ ಪ್ರಜ್ಞೆ ಮೂಡಿಸಬೇಕು. ನಮ್ಮ ದೇಶದಲ್ಲಿ ‘ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ’ ಎನ್ನುವ ಪ್ರತ್ಯೇಕ ಇಲಾಖೆಯೇ ಇದೆ, ಅದರ ಬಹುಮುಖ್ಯ ಕರ್ತವ್ಯವೇ ಯುವತಿಯನ್ನು ಜವಾಬ್ದಾರಿ ಮಹಿಳೆ ಅರ್ಥಾತ್ ಆದರ್ಶ ಸತಿ, ಆದರ್ಶ ಮಾತೆಯನ್ನಾಗಿಸುವುದು. ಇಲ್ಲದಿದ್ದಲ್ಲಿ ಅವಳ ‘ಕಲ್ಯಾಣ’ಕ್ಕೆ ಅರ್ಥವಾದರೂ ಏನಿದೆ? ಯಾವುದೇ ಸ್ತ್ರೀ ಯಶಸ್ವಿ ಪತ್ನಿ, ಯಶಸ್ವಿ ತಾಯಿಯಾದಾಗ ಅವಳು ಸಂಭ್ರಮಿಸುವಂತೆ ಮತ್ತೆಂದೂ ಸಂಭ್ರಮಿಸುವುದಿಲ್ಲ, ಒಡೆದಮನೆ, (ವಿಚ್ಛೇದನದ ಪರಿಣಾಮವಾಗಿ) ತಾಯಿಯ ಪ್ರೀತಿಯಿಂದ ವಂಚಿತರಾದ ಮಕ್ಕಳು ದೇಶವೊಂದನ್ನು ನರಕವಾಗಿಸಬಲ್ಲರು ಎಂಬುದು ಪ್ಯಾರಿಸ್ ರಾಮಕೃಷ್ಣಾಶ್ರಮದಲ್ಲಿ ನಾನು ನಡೆಸಿದ ಸಂವಾದಗಳಿಂದ ಹೊರಹೊಮ್ಮಿದ ಒಮ್ಮತದ ಅಭಿಪ್ರಾಯ. ಮಕ್ಕಳು ನಿರ್ಲಕ್ಷಿಸಲ್ಪಟ್ಟಾಗ ಪರಿಣಾಮ ಎಷ್ಟು ಗಂಭೀರ ಎನ್ನುವುದನ್ನು ಐದನೇ ವೇದವೇ ಆದ ಮಹಾಭಾರತ ಸ್ಪಷ್ಟವಾಗಿ ಚಿತ್ರಿಸುತ್ತದೆ.
ದುರ್ಯೂೕಧನ ಕಾಲು ಮುರಿದು ಬಿದ್ದಿದ್ದಾನೆ ಎನ್ನುವ ಸುದ್ದಿ ಗಾಂಧಾರಿಯ ಒಡಲ ದಾವಾನಲವನ್ನೇ ಹೊರಹಾಕಿತು, ಮನುಷ್ಯ ಏನನ್ನೂ ಸಹಿಸಬಲ್ಲ ತನ್ನ ಕಣ್ಮುಂದೆಯೇ ತನ್ನ ಮಕ್ಕಳು ಸಾಯುವುದನ್ನು ಅಲ್ಲ. ಈಗ ಅವಳ ಸಿಟ್ಟು ತಿರುಗಿದ್ದು ಕೃಷ್ಣನ ಕಡೆಗೆ. ‘ಕೃಷ್ಣ ಇದಕ್ಕೆಲ್ಲ ನೀನೇ ಕಾರಣ, ನೂರು ಜನ ನೂರು ಹೇಳಲಿ, ನಾನಂತೂ ನೀನು ಸ್ವಯಂ ಪರಮಾತ್ಮ ಎಂದು ನಂಬಿದವಳು, ನೀನೇಕೆ ಪಕ್ಷಪಾತ ಮಾಡಿದೆ? ಕುಂತಿಗೆ ಅಷ್ಟು ಒಳ್ಳೆಯ ಮಕ್ಕಳನ್ನು ಕೊಟ್ಟೆ, ನನ್ನ ಒಡಲಿಗೇಕೆ ರಾಕ್ಷಸರನ್ನು ದೂಡಿದೆ, ಅವಳೇನು ಕಮಲಪುಷ್ಪಗಳಿಂದ ಪೂಜಿಸಿದ್ದಳೇ? ನಾನು ಕಲ್ಲುಮುಳ್ಳುಗಳನ್ನು ಅರ್ಪಿಸಿದ್ದೆನೇ? ನಾನು ಮಾಡಿದ ದ್ರೋಹವಾದರೂ ಏನು?’ ಹೀಗೆಯೇ ಹರಿಯಿತು ಅವಳ ಆಕ್ರೋಶ.
ಅವಳ ಯಾತನೆಯನ್ನು ಅರ್ಥಮಾಡಿಕೊಂಡ ಕೃಷ್ಣ ಮಧುರ ಧ್ವನಿಯಲ್ಲಿಯೇ ಕಹಿಸತ್ಯವೊಂದನ್ನು ಹೊರಹಾಕಿದ. ‘ಗಾಂಧಾರಿ ಇಲ್ಲಿ ನನ್ನ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಪಾಂಡವರು ಹಾಗಾಗುವುದಕ್ಕೆ ಕುಂತಿಯೇ ಕಾರಣ, ನಿನ್ನ ಮಕ್ಕಳು ಹೀಗಾಗುವುದಕ್ಕೂ ನೀನೇ ಕಾರಣ, ನನ್ನನ್ನೇಕೆ ಸುಮ್ಮನೆ ಇಲ್ಲಿ ತರುತ್ತೀಯೆ, ಕೇಳು; ವಿವಾಹಿತಳಾಗಿ ಹಸ್ತಿನಾಪುರಕ್ಕೆ ಬಂದಾಗ, ಗಂಡನಿಗೆ ಇಲ್ಲದ ಸೌಭಾಗ್ಯ ನನಗೇಕೆ ಎಂದುಕೊಂಡು ನೀನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡೆ, ನಿನ್ನ ಮಕ್ಕಳು ಏನು ಮಾಡುತ್ತಿದ್ದಾರೆ, ಏನು ಬಿಡುತ್ತಿದ್ದಾರೆ ಎಂದು ತಿಳಿಯುವ ಗೋಜಿಗೇ ಹೋಗಲಿಲ್ಲ, ಅವರು ಮಾಡಬಾರದ್ದನ್ನೇ ಮಾಡಿದರು, ನೋಡಬಾರದ್ದನ್ನೇ ನೋಡಿದರು, ತಿನ್ನಬಾರದ್ದನ್ನೇ ತಿಂದರು, ಅವರ ಮಾರ್ಗದರ್ಶಕರಂತೂ... ಆದರೆ ಕುಂತಿ ಕಣ್ಣಿನಲ್ಲಿ ಎಣ್ಣೆ ಹಾಕಿಕೊಂಡು ಮಕ್ಕಳನ್ನು ಬೆಳೆಸಿದಳು, ಮೊದಲ ಮಗ ಯುಧಿಷ್ಠಿರನಂತೂ ‘ಧರ್ಮರಾಜ’ನೇ ಆದ. ಲೋಕರೂಢಿಯಂತೆ ತಮ್ಮಂದಿರು ಅಣ್ಣನನ್ನೇ ಅನುಸರಿಸಿದರು. ನಿನ್ನ ಮಕ್ಕಳೂ ದುರ್ಯೂೕಧನನನ್ನೇ ಅನುಸರಿಸಿ ದುರ್ದೆಸೆಗೆ ಒಳಗಾದರು. ಮಕ್ಕಳ ಭವಿಷ್ಯದಲ್ಲಿ ತಾಯಿಯ ಪಾತ್ರ ಹಿರಿದಾದದ್ದು ಗಾಂಧಾರಿ!’
ಭಾರತೀಯ ನಾರಿಯ ಮುಂದಿರುವ ಆಯ್ಕೆಗಳು ಎರಡೇ!
ಅವಳು ಕುಂತಿಯೋ?! ಗಾಂಧಾರಿಯೋ?!
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)