ಇಂದು ಹೊಳೆಲಿಂಗೇಶ್ವರ ಸನ್ನಿಧಿಯಲ್ಲಿ ಪುಣ್ಯಸ್ನಾನ

srb shiva
ಶ್ರೀ ಹೊಳೆಲಿಂಗೇಶ್ವರ
Published on

ಸೊರಬ: ವರದಾ ಮತ್ತು ದಂಡಾವತಿ ನದಿಗಳ ಸಂಗಮ ಕ್ಷೇತ್ರ ಬಂಕಸಾಣದ ಶ್ರೀ ಹೊಳೆಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಸೋಮವಾರ ಚಾಲನೆ ದೊರೆತಿದ್ದು, ವರದಾ ನವಶಕ್ತಿ ನಾಗಚೌಡೇಶ್ವರಿ ದೇವಿಗೆ ಉಡಿತುಂಬುವುದು, ಉತ್ಸವ ಮೂರ್ತಿ ಸ್ಥಾಪನೆ ಮಾಡಲಾಯಿತು.

14ರಂದು ಮಕರ ಸಂಕ್ರಮಣದ ಉತ್ತರಾಯಣ ಪುಣ್ಯ ಕಾಲ ಇರುವುದರಿಂದ ನದಿಯಲ್ಲಿ ಭಕ್ತರು ಪುಣ್ಯಸ್ನಾನ ಮಾಡಲಿದ್ದಾರೆ. ದೇವರಿಗೆ ಅಭಿಷೇಕ ಹಾಗೂ ಪೂಜಾ ಕಾರ್ಯಗಳು ನಡೆಯಲಿವೆ. ಬೆಳಗ್ಗೆ ಧ್ವಜಾರೋಹಣ, ಲಿಂಗಪೂಜೆ ಮತ್ತು ವಿವಿಧ ಪೂಜಾ ಕಾರ್ಯಗಳು ಜರುಗಲಿವೆ.

15ರಂದು ಬೆಳಗ್ಗೆ ಶ್ರೀ ಹೊಳೆಲಿಂಗೇಶ್ವರ ಸ್ವಾಮಿಯ ಮಹಾ ರಥೋತ್ಸವ ಜರುಗಲಿದೆ. ಕಣಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಿವಾಚಾರ್ಯ ಸ್ವಾಮೀಜಿ, ಶಾಂತಾಪುರ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಜಡೆ ಮಠದ ಶ್ರೀ ಮಹಾಂತ ಸ್ವಾಮೀಜಿ, ಜಡೆ ಸಂಸ್ಥಾನದ ಕುಮಾರಕೆಂಪಿನ ಶ್ರೀ ಸಿದ್ಧವೃಷಭೇಂದ್ರ ಸ್ವಾಮೀಜಿ, ಲಕ್ಕವಳ್ಳಿ ಮೋಕ್ಷಮಂದಿರ ಜೈನ ಮಠದ ಶ್ರೀ ವೃಷಭಸೇನ ಭಟ್ಟಾರಕ ಸ್ವಾಮೀಜಿ, ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ, ತಡಗಣಿಯ ರವೀಂದ್ರ ಗುರೂಜಿ ಅವರ ಸಾನ್ನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ನಂತರ ಭಕ್ತರಿಗೆ ತೀರ್ಥ ಪ್ರಸಾದ ಮತ್ತು ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. 27ರಂದು ಜಂಗೀ ಕುಸ್ತಿ ಸ್ಪರ್ಧೆ, 31ರಂದು ಶ್ರೀ ವೀರಭದ್ರೇಶ್ವರ ದೇವರ ಗುಗ್ಗಳ ನೆರವೇರಲಿದೆ.

ಮಕರ ಸಂಕ್ರಾಂತಿ ಸಂದರ್ಭ ಕ್ಷೇತ್ರದ ವರದಾ ಮತ್ತು ದಂಡಾವತಿ ಸಂಗಮ ಸ್ಥಾನದಲ್ಲಿ ಭಕ್ತರು ಪುಣ್ಯಸ್ನಾನ ಮಾಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಸಾಮಾನ್ಯವಾಗಿ ನದಿಗಳು ಪೂರ್ವ ಅಥವಾ ಪಶ್ಚಿಮಾಭಿಮುಖವಾಗಿ ನದಿಗಳು ಹರಿಯುತ್ತವೆ. ಬಂಕಸಾಣದಲ್ಲಿ ವರದಾ-ದಂಡಾವತಿ ಸಂಗಮದ ನಂತರ ಉತ್ತರಾಭಿಮುಖವಾಗಿ ಹರಿಯುವುದು ವಿಶೇಷ. ಇದರಿಂದ ಉತ್ತರ ಪುಣ್ಯಕಾಲದಲ್ಲಿ ಮಕರ ಸಂಕ್ರಮಣದಂದು ಸ್ನಾನ ಮಾಡಿ ಪೂಜೆ ಸಲ್ಲಿಸಿದರೆ ಪುಣ್ಯ ಸಿಗುತ್ತದೆ ಎಂಬುದು ನಂಬಿಕೆ. ಜಾತ್ರಾ ಮಹೋತ್ಸವದ ಅಂಗವಾಗಿ ದೇವರಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ವಿಧಿ ವಿಧಾನಗಳು ನಡೆಯುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net