ಕೂಸು ಹುಟ್ಟೋಕೂ ಮುನ್ನವೇ ಕುಲಾವಿ ಹೊಲಿಸಿದರು ಎಂಬ ಗಾದೆ ಮಾತಿದೆ. ಆ ಮಾತು ಹಾಲಿವುಡ್ ನಿರ್ದೇಶಕ ಮೈಕಲ್ ಬೇ ವಿಷಯದಲ್ಲಿ ನೂರಕ್ಕೆ ನೂರು ಪ್ರತಿಶತಃ ಸತ್ಯ ಎಂಬಂತಾಗಿದೆ. ಅದಕ್ಕೆ ಕಾರಣ ಇರಾನ್ ವಿರುದ್ಧ ಅಮೆರಿಕ, ಇಸ್ರೇಲ್ ಜಂಟಿ ಯುದ್ಧ ಸಾರಿದ್ದು, ಪ್ರತಿದಿನ ಕೊಲ್ಲಿ ರಾಷ್ಟ್ರದಲ್ಲಿ ಬಾಂಬ್ಗಳ ಮಳೆಗೈಯಲಾಗುತ್ತಿದೆ. 2022ರಲ್ಲಿ ಪ್ರಾರಂಭವಾದ ರಷಿಯಾ ಮತ್ತು ಯೂಕ್ರೇನ್ ನಡುವಿನ ಯುದ್ಧ ಇನ್ನೂ ಮುಗಿದಿಲ್ಲ. ಇದೀಗ ಕೊಲ್ಲಿಯಲ್ಲಿ ಪ್ರಾರಂಭವಾಗಿರುವ ಈ ಸಮರ ಯಾವಾಗ ಮುಗಿಯುತ್ತೋ ಗೊತ್ತಿಲ್ಲ. ಆದರೆ, ಅದಕ್ಕೂ ಮುನ್ನವೇ "ಟ್ರಾನ್ಸ್ ಫಾರ್ಮರ್ಸ್' ಮತ್ತು "ಬ್ಯಾಡ್ ಬಾಯ್ಸ್' ಸರಣಿಗಳ ಖ್ಯಾತಿಯ ಹಾಲಿವುಡ್ ನಿರ್ದೇಶಕ ಮೈಕಲ್ ಬೇ ಯುದ್ಧದ ಸಮಯದಲ್ಲಿ ಇರಾನ್ನಲ್ಲಿ ನಡೆದ ನೈಜ ಘಟನೆಯಾಧಾರಿತ ಸಿನಿಮಾ ಘೋಷಿಸಿದ್ದಾರೆ. ಇರಾನ್ ಮೇಲೆ ಯುದ್ಧ ಸಾರಿ ಆಪರೇಷನ್ ಎಪಿಕ್ ಫ್ಯೂರಿ ಕೈಗೊಂಡ ಅಮೆರಿಕ ವಾಯುಸೇನೆಯ ಮೂಲಕ ದಾಳಿ ನಡೆಸಿತ್ತು. ಆಪರೇಷನ್ ಯಶಸ್ವಿಯಾದರೂ, ಅಮೆರಿಕ ವಾಯುಸೇನೆಯ ಎಫ್ಐ15 ಇ ಸ್ಕ್ರೈಕ್ ಈಗಲ್ ಯುದ್ಧವಿಮಾನವನ್ನು ಇರಾನ್ ಸೈನಿಕರು ಹೊಡೆದುರುಳಿಸಿದ್ದರು. ಅದರಲ್ಲಿದ್ದ ಇಬ್ಬರು ಅಮೆರಿಕ ಸೈನಿಕರು ಶತ್ರು ರಾಷ್ಟ್ರದಲ್ಲಿ ಸಿಲುಕಿಕೊಂಡಿದ್ದರು. ಅದಾಗಿ ಒಂದು ತಿಂಗಳಲ್ಲಿ ನುರಿತ ತಂಡವನ್ನು ಕಳುಹಿಸಿದ್ದ ಅಮೆರಿಕ ಇಬ್ಬರೂ ಸೈನಿಕರನ್ನು ರೆಸ್ಕ್ಯೂ ಮಾಡಿತ್ತು. ಅಲ್ಲಿಯವರೆಗೆ ಆ ಇಬ್ಬರು ಸೈನಿಕರು ಇರಾನ್ನಲ್ಲಿ ಹೇಗೆ ಹೋರಾಟ ನಡೆಸಿದ್ದರು? ಹೇಗೆ ಬದುಕುಳಿದರು? ಅವರ ರಕ್ಷಣಾ ಕಾರ್ಯ ಹೇಗೆ ನಡೆಯಿತು? ಎಂಬುದರ ಸುತ್ತ ಸಿನಿಮಾ ಸಾಗುತ್ತದೆ. ರಕ್ಷಣೆಗೆ ಒಳಗಾಗಿದ್ದ ಅಮೆರಿಕ ವಾಯುಸೇನೆಯ ಅಧಿಕಾರಿ ಮಿಚೆಲ್. ಇರಾನ್ನಲ್ಲಿ ತಮಗಾದ ಅನುಭವಗಳ ಕುರಿತು ಪುಸ್ತಕ ಬರೆಯುತ್ತಿದ್ದು, ಅದನ್ನು ಆಧರಿಸಿ ಮೈಕಲ್ ಬೇ ಸಿನಿಮಾ ಮಾಡಲಿದ್ದಾರೆ. 2027ರಲ್ಲಿ ಪುಸ್ತಕ ಹೊರಬರಲಿದ್ದು, ಸಿನಿಮಾ 2028ರ ಅಂತ್ಯಕ್ಕೆ ತೆರೆಗೆ ಬರಲಿದೆ ಎನ್ನಲಾಗಿದೆ.