ಬಾದಾಮಿಯಲ್ಲೇ ಸ್ಪರ್ಧಿಸಿ; ಸಿದ್ದರಾಮಯ್ಯರಿಗೆ ಹಾಲೆಂಡ್​ನಿಂದ ಬಂತು ಮನವಿ

mysore siddaramiah
Published on

ಬಾಗಲಕೋಟೆ: ವಿಧಾನಸಭೆ ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದು ಇನ್ನೂ ನಿಚ್ಚಳವಾಗಿಲ್ಲ. ಆ ಸಂಬಂಧ ಈಗಾಗಲೇ ಕೆಲವು ಕ್ಷೇತ್ರಗಳ ಹೆಸರು ಚಾಲ್ತಿಯಲ್ಲಿದ್ದರೂ ಎಲ್ಲಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬುದಿನ್ನೂ ಖಚಿತಗೊಂಡಿಲ್ಲ.

ಕಳೆದ ಸಲ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡಿ ವಿಜೇತರಾಗಿ ಹಾಲಿ ಅಲ್ಲಿನ ಶಾಸಕರೂ ಆಗಿರುವ ಸಿದ್ದರಾಮಯ್ಯ ಅವರಿಗೆ ಮತ್ತೆ ಅದೇ ಕ್ಷೇತ್ರದಲ್ಲೇ ಚುನಾವಣೆಗೆ ನಿಂತು ಸ್ಪರ್ಧೆ ಮಾಡುವಂತೆ ದೂರದ ಹಾಲೆಂಡ್​ನಿಂದ ಮನವಿ ಬಂದಿದೆ. ಅರ್ಥಾತ್, ಹಾಲೆಂಡ್​ನಲ್ಲಿರುವ ಬಾದಾಮಿ ಮೂಲದ ಉದ್ಯಮಿಯೊಬ್ಬರು ಈ ಮನವಿ ಮಾಡಿಕೊಂಡಿದ್ದಾರೆ.

ಹಾಲೆಂಡ್​ನಲ್ಲಿ ಉದ್ಯಮಿಯಾಗಿರುವ ಇಂಜಿನಿಯರ್ ಅಶೋಕ ಹಟ್ಟಿ ಎಂಬವರು, ಸಿದ್ದರಾಮಯ್ಯ ಈ ಸಲ ಕೋಲಾರದಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿದ ಹಿನ್ನೆಲೆಯಲ್ಲಿ ಈ ವಿನಂತಿ ಮಾಡಿಕೊಂಡಿದ್ದಾರೆ. ಕಳೆದ ಬಾರಿ ಹಾಲೆಂಡ್​ನಿಂದ ಬಂದು ನಿಮಗೆ ಮತ ಹಾಕಿದ್ದೆವು. ಈ ಬಾರಿಯೂ ಬಾದಾಮಿಯಿಂದಲೇ ಸ್ಪರ್ಧಿಸಿ ಅಂತ ಅವರು ಕೇಳಿಕೊಂಡಿದ್ದಾರೆ.

ಸಿದ್ದರಾಮಯ್ಯ ಅವರು ನಮಗೆ ಇಮ್ಮಡಿ ಪುಲಿಕೇಶಿಯಂತೆ, ಅವರು ನಮ್ಮ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂಪಾಯಿ ಅನುದಾನ ತಂದಿದ್ದಾರೆ. ಬಾದಾಮಿ ದೊಡ್ಡಮಟ್ಟದಲ್ಲಿ ಅಭಿವೃದ್ಧಿಯಾಗಿದೆ. ಉತ್ತರ ಕರ್ನಾಟಕಕ್ಕೆ ದೊಡ್ಡ ಶಕ್ತಿ ಬಂದಿದೆ. ಕೋಲಾರ ಬದಲು ಬಾದಾಮಿಯಲ್ಲೇ ಕಣಕ್ಕಿಳಿಯಿರಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net