ರಂಗಿನಾಟದಲ್ಲಿ ಮಿಂದೆದ್ದ ಚಿಣ್ಣರು,ಯುವಕರು

8srt-2
Published on

ಶಿರಹಟ್ಟಿ: ತಲೆತಲಾಂತರದಿಂದ ನಡೆದು ಬಂದ ಸಂಪ್ರದಾಯದಂತೆ ಹುಲಗಾಮನ ವೇಷಧಾರಿಯ ಮೆರವಣಿಗೆ ಬುಧವಾರ ಬೆಳ್ಳಗ್ಗೆ ಸಂಪನ್ನಗೊಂಡು ಕಾಮನ ದಹನದೊಂದಿಗೆ ಪಟ್ಟಣದಲ್ಲಿ ಎಲ್ಲೆಡೆ ಬಣ್ಣದೋಕಳಿಯ ಸಂಭ್ರಮ ನೋಡುವಂತ್ತಿತ್ತು.
ಶಿರಹಟ್ಟಿ ಸೇರಿದಂತೆ ತಾಲೂಕಿನ ಬೆಳ್ಳಟ್ಟಿ, ರಣತೂರ, ತಾರೀಕೊಪ್ಪ, ಕಡಕೋಳ, ದೇವಿಹಾಳ ಮತ್ತಿತರ ಗ್ರಾಮಗಳಲ್ಲಿ ರಂಗಿನಾಟದ ಸಂಭ್ರಮ ಮನೆ ಮಾಡಿತ್ತು. ಬೆಳಗ್ಗೆ ಪಟ್ಟಣದ ವಿವಿಧ ಬಡಾವಣೆ ಸೇರಿದಂತೆ ಮಾರುಕಟ್ಟೆ ಪ್ರದೇಶದಲ್ಲಿ ಚಿಣ್ಣರು, ಯುವಕರು. ಮಹಿಳೆಯರು ಪರಸ್ಪರ ಬಣ್ಣ ಹಚ್ಚಿ ಹ್ಯಾಪಿ ಓಕಳಿ ಎಂದು ಶುಭಕೋರುತ್ತ ಬಣ್ಣದ ನೀರು ತುಂಬಿದ ಪಿಚಕಾರಿ, ಪ್ಲಾಸ್ಟಿಕ್ ಬಾಟಲ್‍ಗಳನ್ನು ಹಿಡಿದು ಬಣ್ಣ ಎರಚಿ ಖುಷಿಪಡುತ್ತಿದ್ದರು.
ಇನ್ನು ಯುವಕರ ಪಡೆ ಕೈಯಲ್ಲಿ ವಿವಿಧ ಬಣ್ಣದ ಗುಲಾಲ ತುಂಬಿದ ಪ್ಯಾಕೆಟ್‍ಗಳನ್ನು ಹಿಡಿದು ಪಟ್ಟಣವೆಲ್ಲ ಸುತ್ತಿ ಬಣ್ಣ ಎರಚಾಡಿ ಕೇಕೆ ಹಾಕಿ ಕೂಗಾಡುವ ದೃಶ್ಯ ಮನ ಮೋಹಕವಾಗಿತ್ತು. ಏತನ್ಮಧ್ಯೆ ಕೆಲ ಯುವಕರು, ಚಿಣ್ಣರು ಡಿಜೆ.ಯಿಂದ ಹೊರಹೊಮ್ಮುವ ಶೋಕಿ ಹಾಡುಗಳಿಗೆ ಕುಣಿಯುತ್ತ ಸಂಭ್ರಮಿಸಿದರೆ ಮತ್ತೊಂದೆಡೆ ಹಲಗೆಗಳ ತಾಳಕ್ಕೆ ತಕ್ಕಂತೆ ಕುಣಿದು ಸಂಜೆವರೆಗೂ ರಂಗಿನಾಟದಲ್ಲಿ ಮಿಂದೆದ್ದರು. ಪೊಲೀಸ್ ಕಾವಲಿನ ಮಧ್ಯ ನಡೆದಂಥ ಬಣ್ಣದೋಕಳಿ ಶಾಂತಿ, ಸುವ್ಯವಸ್ಥೆಯಿಂದ ಸಂಪನ್ನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net