

ಶಿವಮೊಗ್ಗ : ಜಿಲ್ಲೆಯ ವಿವಿಧೆಡೆಗಳಲ್ಲಿ ಸಂಭ್ರಮದಿಂದ ಬಣ್ಣಗಳ ಹಬ್ಬ ಹೋಳಿ ಆಚರಿಸಲಾಯಿತು. ಶಿವಮೊಗ್ಗದ ವಿವಿಧೆಡೆಗಳಲ್ಲಿ ಜನರು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ಯುವಕರು ಬಣ್ಣ ಎರಚಲು, ಗೆಳೆಯರು, ಆತ್ಮೀಯರು, ಸಂಬಂಧಿಕರ ಮನೆಗಳಿಗೆ ತೆರಳುತ್ತಿದ್ದ ದೃಶ್ಯಗಳು ಕಂಡು ಬಂದವು.
ಗಾಂಧಿ ಬಜಾರ್, ಕುಂಬಾರ ಬೀದಿ, ಬಿಬಿ ರಸ್ತೆ ಸೇರಿದಂತೆ ನಗರದ ಬಹುತೇಕ ಭಾಗಗಳಲ್ಲಿ ಮಾ.14ರಂದು ಸಂಭ್ರಮದ ಹೋಳಿ ಆಚರಣೆಗೆ ಸಿದ್ಧತೆಗಳು ನಡೆದಿವೆ. ಹಲವು ಬೀದಿಗಳಲ್ಲಿ ಕಾಮದಹನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಳೆಯ ಬಟ್ಟೆ, ವಸ್ತುಗಳಿಂದ ಪ್ರತಿಕೃತಿ ಸಿದ್ಧಪಡಿಸಿಕೊಳ್ಳಲಾಗಿದೆ. ರಂಗೇರುವ ಹೋಳಿಗೆ ಶಿವಮೊಗ್ಗ ಸಜ್ಜಾಗಿದೆ.
14ರ ಬೆಳಗ್ಗೆ ನಗರದ ಸೀನಪ್ಪ ಶೆಟ್ಟಿ ವೃತ್ತದಲ್ಲಿ ಹೋಳಿ ಆಚರಣೆಗೆ ಹಿಂದು ಕೇಸರಿ ಅಲಂಕಾರ ಸಮಿತಿಯಿಂದ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೆಲವು ವರ್ಷಗಳಿಂದ ಇಲ್ಲಿ ನಡೆಯುವ ಸಂಭ್ರಮಾಚರಣೆಗೆ ಇನ್ನಿಲ್ಲದ ಮಹತ್ವ ಸಿಕ್ಕಿದೆ. ಒಂದೇ ಕಡೆ ಸಾವಿರಾರು ಮಂದಿ ಸೇರಿಕೊಂಡು ನೃತ್ಯ ಮಾಡುತ್ತ ಬಣ್ಣದ ಹಬ್ಬವನ್ನು ಆಚರಿಸುವ ರೇನ್ ಡ್ಯಾನ್ಸ್‌ದೃಶ್ಯ ಮನಮೋಹಕವಾಗಿರುತ್ತದೆ.
ಗಾಂಧಿ ಬಜಾರ್ ಬಸವೇಶ್ವರ ದೇವಸ್ಥಾನ, ತುಳಜಾ ಭವಾನಿ ದೇವಸ್ಥಾನ, ಕುಂಬಾರ ಬೀದಿ ಹಾಗೂ ಬಿಬಿ ರಸ್ತೆಗಳಲ್ಲಿ ಕಾಮಣ್ಣನನ್ನು ಪ್ರತಿಷ್ಠಾಪಿಸಲಾಗಿದೆ. ನಾಗರಿಕರಿಗೆ ಈ ಕಾಮಣ್ಣನ ಮೂರ್ತಿ ಪ್ರಮುಖ ಆಕರ್ಷಣೆಯಾಗಿದೆ. ಈ ಮೂರ್ತಿ ಜತೆಗೆ ಕೆಲವರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.
ಸುರಕ್ಷಿತ ಹೋಳಿ ಆಚರಣೆಗೆ ಜಿಲ್ಲಾಡಳಿತ ಒತ್ತು ನೀಡಿದೆ. ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ಬೈಕ್ ವ್ಹೀಲಿಂಗ್ ಮಾಡುವವರು, ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸುವವರು, ಬೈಕ್‌ನಲ್ಲಿ ಇಬ್ಬರಿಗಿಂತ ಹೆಚ್ಚು ಮಂದಿ ಸಂಚರಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಭದ್ರತೆ ದೃಷ್ಟಿಯಿಂದ ಹೆಚ್ಚುವರಿಯಾಗಿ 300 ಗೃಹರಕ್ಷಕ ದಳದ ಸಿಬ್ಬಂದಿ ಹಾಗೂ ನಾಲ್ಕು ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.
ಶಿವಮೊಗ್ಗ ದುರ್ಗಿಗುಡಿಯ ದುರ್ಗಾಂಬ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು. ನೂರಾರು ಮಂದಿ ರಥೋತ್ಸವದಲ್ಲಿ ಭಾಗವಹಿಸಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿತ್ತು. ದೇವಾಲಯ ಸಮಿತಿಯವರು ಸ್ಥಳದಲ್ಲಿದ್ದು ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸಿದರು. ಭದ್ರತೆ ದೃಷ್ಟಿಯಿಂದ ಪೊಲೀಸರನ್ನು ನಿಯೋಜಿಸಲಾಗಿತ್ತು. ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ತೇರನ್ನೆಳೆದು ಹರಕೆ ತೀರಿಸಿದರು.