ಎಚ್‌ಎಂಟಿ ಭೂಮಿ; ಕೇಂದ್ರ, ರಾಜ್ಯ ಸರ್ಕಾರದ ಸಚಿವರ ನಡುವೆ ವಾಗ್ಯುದ್ಧ

hhmt
Published on

ಬೆಂಗಳೂರು: ಎಚ್‌ಎಂಟಿ ಕಾರ್ಖಾನೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಂತ್ರಿಗಳ ನಡುವೆ ಮಾತಿನ ಮಲ್ಲಯುದ್ಧವನ್ನೇ ಸೃಷ್ಟಿ ಮಾಡಿದೆ.

ಈ ಕಾರ್ಖಾನೆ ವ್ಯಾಪ್ತಿಯಲ್ಲಿರುವ ಅರಣ್ಯ ಜಮೀನು ವಶಪಡಿಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾದರೆ, ಕೇಂದ್ರ ಸಚಿವರು ಈ ಭೂಮಿ ವಾಪಸ್ ನೀಡುವ ಪ್ರಶ್ನೆಯೇ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

ಈ ನಡುವೆ ನೂರಾರು ಎಕರೆ ಭೂಮಿಯನ್ನು ಕಂಪನಿ ಖಾಸಗಿಯವರಿಗೆ ಮಾರಾಟ ಮಾಡಿರುವ ಕುರಿತು ಪರಸ್ಪರ ಕೆಸರೆರಚಾಟ ನಡೆದಿದೆ. ಎಚ್‌ಎಂಟಿ ಕಾರ್ಖಾನೆ ಈಗ ರಾಜಕೀಯ ಚರ್ಚಾ ವಸ್ತುವಾಗಿದೆ.

ಕಾರ್ಖಾನೆ ಅಧೀನದಲ್ಲಿರುವ ಭೂಮಿ ಅರಣ್ಯ ಭೂಮಿಯಾಗಿದ್ದು, ಇದನ್ನು ಮಾರಾಟ ಮಾಡಲು ಬಿಡುವುದಿಲ್ಲ. ಅದೇನು ಕೇಂದ್ರ ಸರ್ಕಾರದ ಕಾರ್ಖಾನೆಯೋ ರಿಯಲ್ ಎಸ್ಟೇಟ್ ಕಂಪನಿಯೋ ಎಂದು ರಾಜ್ಯದ ಅರಣ್ಯ ಖಾತೆ ಸಚಿವ ಈಶ್ವರ್ ಖಂಡ್ರೆ ಪ್ರಶ್ನಿಸಿದರೆ, ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಈ ಭೂಮಿ ವಾಪಸ್ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಭೂಮಿ ವಾಪಸ್ ನೀಡುವ ಪ್ರಶ್ನೆಯೇ ಇಲ್ಲ

ಎಚ್‌ಎಂಟಿ ಕಾರ್ಖಾನೆಯ ಅಧೀನದಲ್ಲಿರುವ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ವಾಪಸ್ಸು ನೀಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಒಂದು ವೇಳೆ ರಾಜ್ಯ ಸರ್ಕಾರ ದುರುದ್ದೇಶಪೂರಿತವಾಗಿ ಭೂಮಿ ವಿಷಯದಲ್ಲಿ ಕಿರುಕುಳ ನೀಡಿದರೆ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಎಚ್‌ಎಂಟಿಗೆ ಜಮೀನು ಪುಕ್ಕಟೆ ಕೊಟ್ಟಿಲ್ಲ

ಅರಣ್ಯ ಇಲಾಖೆ ಭೂಮಿಯನ್ನು ಅಕ್ರಮವಾಗಿ ವಿವಿಧ ಸರ್ಕಾರಿ ಸಂಸ್ಥೆ, ಇಲಾಖೆಗಳಿಗೆ ಮತ್ತು ಖಾಸಗಿಯವರಿಗೆ ಸಂಸ್ಥೆ ಮಾರಾಟ ಮಾಡಿದೆ ಎಂದು ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ನೀಡಿರುವ ಹೇಳಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿದರು.

ಕಾರ್ಖಾನೆಗೆ ಯಾವುದೇ ಜಮೀನನ್ನು ಉಚಿತವಾಗಿ, ಪುಕ್ಕಟೆಯಾಗಿ ನೀಡಿಲ್ಲ. ಬೇಕಿದ್ದರೆ ರಾಜ್ಯ ಅರಣ್ಯ ಸಚಿವರು ದಾಖಲೆಗಳನ್ನು ತೆಗೆದು ನೋಡಲಿ ಎಂದು ಸಲಹೆ ಮಾಡಿದರು.

ಯಾವ ಬಿಲ್ಡರ್‌ಗೆ ಧಾರೆ ಎರೆಯುತ್ತೀರಿ?

ಕಾರ್ಖಾನೆಯ ವಶದಲ್ಲಿರುವ ಜಮೀನು ತೆಗೆದುಕೊಂಡು ಏನು ಮಾಡುತ್ತೀರಿ ಸಚಿವರೇ? ಯಾವ ಬಿಲ್ಡರ್‌ಗೆ ದಾನ ಮಾಡುತ್ತೀರಿ? ಎಂದು ಕೆಣಕಿದರು.

ಅಧಿಕಾರದಲ್ಲಿದ್ದವರು ಯಾರು?

ಎಚ್‌ಎಂಟಿಗೆ ಸೇರಿದ 200 ಎಕರೆ ಜಮೀನನ್ನು ಮಾರಾಟ ಮಾಡಲು ಅನುಮತಿ ಕೊಟ್ಟವರು ಯಾರು? 1999ರಿಂದ 2004 ರವರೆಗೆ ರಾಜ್ಯದಲ್ಲಿ ಯಾರು ಅಧಿಕಾರದಲ್ಲಿದ್ದರು? ಆಡಳಿತ ನಡೆಸಿದ ಸರ್ಕಾರಗಳಲ್ಲಿ ಬಿಲ್ಡರ್ ಕೆಲಸ ಮಾಡುತ್ತಿದ್ದ ಕೆಲವರಿಗೆ ಈ ಕಾರ್ಖಾನೆಯ ಜಮೀನು ಮೇಲೆ ವಕ್ರದೃಷ್ಟಿ ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

27 ಎಕರೆ ಖರೀದಿ ಮಾಡಿದ್ದು ಯಾವಾಗ:

ಪ್ರೆಸ್ಟೀಜ್ ಕಂಪನಿಯವರು 27 ಎಕರೆ ಭೂಮಿ ಖರೀದಿ ಮಾಡಿದ್ದು ಯಾವಾಗ? ಈಗಾಗಲೇ ಅಪಾರ್ಟ್ಮೆಂಟ್ ಗಳನ್ನು ಕಟ್ತಾ ಇದಾರಲ್ಲಾ? ಪ್ರೆಸ್ಟೀಜ್ ಗೆ ಭೂಮಿ ಖರೀದಿ ಎನ್‌ಒಸಿ ಕೊಡುತ್ತಾರೆ. ಆದರೆ, ನಮ್ಮ ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಖರೀದಿ ಮಾಡಲು ಬಂದರೆ ಎನ್‌ಒ ಸಿ ಕೊಡುವುದಿಲ್ಲ. ರಾಜ್ಯ ಸರ್ಕಾರಕ್ಕೆ ಪ್ರೆಸ್ಟೀಜ್ ಮುಖ್ಯವಾ? ಅಥವಾ ಇಸ್ರೋ ಮುಖ್ಯವಾ? ಹೇಳಬೇಕಲ್ಲವೇ? ಎಂದು ಕುಮಾರಸ್ವಾಮಿ ಟಾಂಗ್ ಕೊಟ್ಟರು.

ಎಚ್‌ಎಂಟಿ ಕೈಗಾರಿಕಾ ಸಂಸ್ಥೆಯೊ? ರಿಯಲ್ ಎಸ್ಟೇಟ್ ಕಂಪನಿಯೋ?

ಎಚ್‌ಎಂಟಿ ಕಂಪನಿ 2004 ರಿಂದ 2006 ಅವಧಿಯಲ್ಲಿ 313 ಕೋಟಿ ರೂ.ಗೆ 167ಎಕರೆ ಜಮೀನು ಮಾರಾಟ ಮಾಡಿದೆ. ಇದು ಕೇಂದ್ರ ಸರ್ಕಾರಿ ಸ್ವಾಮ್ಯದ ಕೈಗಾರಿಕೆಯೋ? ರಿಯಲ್ ಎಸ್ಟೇಟ್ ಕಂಪನಿಯೋ? ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರಶ್ನಿಸಿದರು.

ಎಚ್‌ಎಂಟಿಗೆ ನೀಡಿದ ಜಮೀನು ಅರಣ್ಯ ಇಲಾಖೆಗೆ ಸೇರಿದ್ದು, ಈ ಬಗ್ಗೆ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಕಾನೂನು ರೀತ್ಯಾ ವಾಪಸ್ ಪಡೆಯುತ್ತೇವೆ. ಇದರಲ್ಲಿ ಯಾವುದೇ ರಾಜಕೀಯವೂ ಇಲ್ಲ, ದ್ವೇಷವೂ ಇಲ್ಲ. ಕಾನೂನು ಬಾಹಿರ ಆಗಿದ್ದರೆ ಕ್ರಮ ಆಗಲೇಬೇಕಲ್ಲವೆ ಎಂದು ಕೇಳಿದರು.

ಈ ಜಮೀನನ್ನು ವಶಪಡಿಸಿಕೊಂಡರೂ ಇದನ್ನು ಟ್ರೀ ಪಾರ್ಕ್ ಮಾಡುತ್ತೇವೆ. ಯಾರಿಗೂ ಪರಭಾರೆ ಮಾಡಲು ಸಾಧ್ಯವೇ ಇಲ್ಲ. ಈ ಬಗ್ಗೆ ಅನುಮಾನ ಬೇಡವೇ ಬೇಡ ಎಂದು ಸ್ಪಷ್ಟಪಡಿಸಿದರು.

ಖಾಸಗಿ ಕಂಪನಿ ಪಟ್ಟಿ ಪ್ರದರ್ಶಿಸಿದ ಸಚಿವ

ಅರಣ್ಯ ಭೂಮಿ ಹಸ್ತಾಂತರಿಸಲು ಡಿನೋಟಿೈ ಮಾಡಿರಲೇಬೇಕು. ಹಾಗೆಯೇ ಹಸ್ತಾಂತರ ಮಾಡಲು ರುವುದಿಲ್ಲ. ಈ ಕಂಪನಿ ಖಾಸಗಿಯವರಿಗೆ ಜಮೀನು ಮಾರಾಟ ಮಾಡಿದೆ. ರಮಣ ಇನ್ಸಿಟಿಟ್ಯೂಟ್, ಬ್ಯಾಂಕ್ ಆ್ ಇಂಡಿಯಾ, ಕೆನರಾ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಮ್ಯಾಕ್ಸ್ ವೆಲ್ ಮ್ಯಾಗ್ನಟೇಟ್, ಡಾಲರ್ಸ್ ಇಂಜಿನಿಯರ್ಸ್, ಐೆರ್ಸ್ ನೆವೆಲ್, ಬಾಗ್‌ಮನೆ ಎಸ್ಟೇಟ್, ಪ್ರೀಮಿಯಂ, ಸುಂದರಂ ಹೀಗೆ ಹತ್ತಾರು ಕಂಪನಿಗಳಿಗೆ ಜಮೀನು ಮಾರಾಟ ಮಾಡಲಾಗಿದೆ ಎಂದು ದೊಡ್ಡ ಪಟ್ಟಿಯನ್ನೇ ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು.

ಕೇಂದ್ರದಿಂದ ದುಡ್ಡ ತಂದು ಅಭಿವೃದ್ಧಿ ಮಾಡಿ:

ಎಚ್‌ಎಂಟಿ ಪುನಃಶ್ಚೇತನಕ್ಕೆ ನಮ್ಮ ಅಡ್ಡಿ ಇಲ್ಲ. ಆದರೆ, ಈ ಸಂಸ್ಥೆಯ ಜಮೀನು ಮಾರಾಟ ಮಾಡಿ ಪುನಃಶ್ಚೇತನಗೊಳಿಸುವುದು ಬೇಡ. ಕೇಂದ್ರದಿಂದ ದುಡ್ಡು ತಂದು ಮಾಡಲಿ, ನಮ್ಮದೇನೂ ಅಭ್ಯಂತರವಿಲ್ಲ ಎಂದರು.

10 ಸಾವಿರ ಕೋಟಿ ರೂ. ಬೆಲೆಬಾಳುವ 200ಎಕರೆ ಭೂಮಿಯನ್ನು ಅರಣ್ಯ ಇಲಾಖೆಗೆ ವಾಪಸ್ ಪಡೆಯಬೇಕಿದೆ. ಈ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡುತ್ತಿದ್ದೇವೆ. ಕಾನೂನು ಪ್ರಕಾರ ಕುಮಾರಸ್ವಾಮಿ ಮುಂದುವರಿಯಲಿ. ಲೋಕಸಭೆಯಲ್ಲಿ ಅರಣ್ಯ ಕಾಯ್ದೆಗೆ ತಿದ್ದುಪಡಿ ತರಲಿ ಎಂದು ಹೇಳಿದರು.

ಅರಣ್ಯ ಇಲಾಖೆ ಜಮೀನು ಮಾರಾಟಕ್ಕೆ ಅನುಮತಿ ಕೊಡಲು ಬರುವುದೇ ಇಲ್ಲ. ಅಲ್ಲದೆ, ಅರಣ್ಯ ಇಲಾಖೆ ಯಾವ ಅನುಮತಿಯನ್ನೂ ನೀಡಿಲ್ಲ. ನಾವು ಅರಣ್ಯ ಇಲಾಖೆಗೆ ವಾಪಸ್ ಪಡೆದು ಮಾರಾಟ ಮಾಡುತ್ತೇವಾ? ಲಾಲ್‌ಬಾಗ್, ವಿಧಾನಸೌಧ ಮಾರಾಟ ಮಾಡಲು ಆಗುತ್ತಾ? ಎಂದು ತಿರುಗೇಟು ನೀಡಿದರು.

ಈಗಾಗಲೇ ಈ ಕಂಪನಿಗೆ ಸೇರಿದ ಜಮೀನಿನಲ್ಲಿ ಕಟ್ಟಡ ನಿರ್ಮಿಸಿದವರ ವಿರುದ್ಧವೂ ಕಾನೂನು ಹೋರಾಟ ಮಾಡುತ್ತೇವೆ. ಯಾವ ಪಕ್ಷದವರೇ ಆಗಲಿ, ಕಾನೂನು ಎಲ್ಲರಿಗೂ ಒಂದೆ ಎಂದು ಈಶ್ವರ ಖಂಡ್ರೆ ಟಾಂಗ್ ಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net