ಬಾಕಿ ಪಾವತಿಗೆ ಕೇಂದ್ರ ಸಚಿವರಿಗೆ ಎಚ್‌ಎಂಟಿ ನೌಕರರ ಮನವಿ|HMT employees appeal

h (1)
Published on

ಬೆಂಗಳೂರು: ವೇತನ, ಗ್ರಾಚ್ಯುಟಿ, ಭವಿಷ್ಯ ನಿಧಿ ಪಾವತಿ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಬಗ್ಗೆ(HMT employees appeal to Union Minister for payment of arrears) ಹಿಂದೂಸ್ತಾನ್ ಮಶೀನ್ ಅಂಡ್ ಟೂಲ್ಸ್ (ಎಚ್‌ಎಂಟಿ) ಕಾರ್ಖಾನೆಯ ಹಾಲಿ ಹಾಗೂ ನಿವೃತ್ತ ಉದ್ಯೋಗಿಗಳು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ(H D Kumaraswamy) ಅವರನ್ನು ಭೇಟಿಯಾಗಿ ಚರ್ಚಿಸಿ ಮನವಿ ಸಲ್ಲಿಸಿದರು.

ಬೆಂಗಳೂರಿನ ಎಚ್‌ಎಂಟಿ ಕಚೇರಿಯಲ್ಲಿ ಸಚಿವರನ್ನು ಭೇಟಿಯಾದ ಉದ್ಯೋಗಿಗಳು, ನಾವು ನಿವೃತ್ತರಾಗಿ ಹಲವಾರು ವರ್ಷಗಳೇ ಕಳೆದಿದ್ದರೂ ನಮಗೆ ದೊರೆಯಬೇಕಾದ ಸೌಲಭ್ಯಗಳು ಇನ್ನೂ ಬಂದಿಲ್ಲ. ಕೆಲವರು ಕಾನೂನು ಹೋರಾಟ ನಡೆಸುತ್ತಿದ್ದು, ಇನ್ನೂ ಅನೇಕ ಉದ್ಯೋಗಿಗಳಿಗೆ ಅದು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ತಾವು ತುರ್ತು ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ನಿವೃತ್ತಿ ನಂತರ ಕಂಪನಿಯಿಂದ ಬರಬೇಕಾದ ನಮ್ಮ ಸೌಲಭ್ಯಗಳು ಬಾರದೆ ಇರುವುದರಿಂದ ನಮಗೆ ಕಾಯಿಲೆ ಬಂದಾಗ ಔಷಧ ಖರೀದಿ ಮಾಡುವುದು ಕೂಡ ಕಷ್ಟವಾಗಿದೆ. ಸುಮಾರು ಐದಾರು ವರ್ಷಗಳಿಂದ ನಮಗೆ ಬರಬೇಕಿರುವ 30ರಿಂದ 40 ಲಕ್ಷ ರೂಪಾಯಿ ಹಣ ಕಂಪನಿಯಲ್ಲಿಯೇ ಉಳಿದಿದೆ. ಈ ಹಣವನ್ನು ತಾವು ಕೊಡಿಸಬೇಕು ಎಂದು ಕೋರಿದರು.

ಅಲ್ಲದೆ, ಯಾವುದೇ ಕಾರಣಕ್ಕೂ ದೇಶದ ಪ್ರತಿಷ್ಠೆಯ ಕಂಪನಿಯಾಗಿದ್ದ ಎಚ್‌ಎಂಟಿಯನ್ನು ಮುಚ್ಚಬಾರದು. ಒಂದು ವೇಳೆ ಅಂತಹ ಸಂದರ್ಭ ಬಂದರೆ ಬಿಎಚ್‌ಇಎಲ್, ಬಿಇಎಲ್, ಬಿಇಎಂಎಲ್ ನಂತಹ ಕಂಪನಿಗಳಲ್ಲಿ ಎಚ್‌ಎಂಟಿಯನ್ನು ವಿಲೀನ ಮಾಡಬೇಕು ಅಥವಾ ನೌಕರರಿಗಾದರೂ ಆ ಸಂಸ್ಥೆಗಳಲ್ಲಿ ಉದ್ಯೋಗವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು.

ಕಾಲಮಿತಿಯೊಳಗೆ ನಮ್ಮ ಕಷ್ಟಗಳಿಗೆ ನೀವು ಸ್ಪಂದಿಸಬೇಕು, ಇಲ್ಲವಾದರೆ ನಮಗೆ ಬದುಕೇ ಕಷ್ಟವಾಗಿದೆ ಎಂದು ಉದ್ಯೋಗಿಗಳು ಅಳಲು ತೋಡಿಕೊಂಡರು.

ಉದ್ಯೋಗಿಗಳ ಮನವಿ ಆಲಿಸಿ ಮಾತನಾಡಿದ ಸಚಿವ ಕುಮಾರಸ್ವಾಮಿ, ಈ ವಿಷಯ ನನ್ನ ಗಮನಕ್ಕೆ ಈಗಾಗಲೇ ಬಂದಿದೆ. ಉದ್ಯೋಗಿಗಳಿಗೆ ಬಾಕಿ ಇರುವ 361 ಕೋಟಿ ರೂ. ಪಾವತಿಸುವ ಬಗ್ಗೆ ಮಾರ್ಗೋಪಾಯ ಹುಡುಕಲಾಗುವುದು. ಈ ಬಗ್ಗೆ ಸಚಿವಾಲಯದ ಉನ್ನತ ಅಧಿಕಾರಿಗಳ ಜತೆ ಚರ್ಚೆ ಮಾಡುವುದಾಗಿ ಭರವಸೆ ನೀಡಿದರು.

ಎಚ್‌ಎಂಟಿ ಕಾರ್ಖಾನೆಯನ್ನು ಪುನ:ಚ್ಛೇತನ ಮಾಡುವುದು ಒಂದು ಭಾಗವಾದರೆ, ನಿವೃತ್ತ ಹಾಗೂ ಹಾಲಿ ಕಾರ್ಮಿಕರ ಬಾಕಿ ಪಾವತಿ ಮಾಡುವುದು ಮತ್ತೊಂದು ಸವಾಲಾಗಿದೆ. ಈ ಬಗ್ಗೆ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net