

ಶಿವಮೊಗ್ಗ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಶಿವಮೊಗ್ಗ ಡಿಸಿಸಿ(ಜಿಲ್ಲಾ ಕೇಂದ್ರ ಸಹಕಾರ) ಬ್ಯಾಂಕ್‌ನ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ ಅವರ ವಿರುದ್ಧ ಅವಿಶ್ವಾಸ ನಿರ್ಣಯದಲ್ಲಿ ಶುಕ್ರವಾರ ಕಾಂಗ್ರೆಸ್ ಬೆಂಬಲಿತರು ಗೆಲುವು ಸಾಧಿಸಿದ್ದು ಕೊನೆ ಅವಧಿಗೆ ಪ್ರಭಾರ ಅಧ್ಯಕ್ಷರಾಗಿ ಎಚ್.ಎಲ್.ಷಡಾಕ್ಷರಿ ಆಯ್ಕೆಯಾದರು.
ಅಧ್ಯಕ್ಷರಾಗಿದ್ದ ಚನ್ನವೀರಪ್ಪ ಅವರ ವಿರುದ್ಧ ನಿರ್ದೇಶಕರು ಅವಿಶ್ವಾಸ ನಿರ್ಣಯ ಮಂಡಿಸಿದ್ದರಿಂದ ನಿರ್ಣಯವನ್ನು ಮತಕ್ಕೆ ಹಾಕಲಾಗಿತ್ತು. 13 ನಿರ್ದೇಶಕರು ಮತದಾನದಲ್ಲಿ ಭಾಗವಹಿಸಿದ್ದರು. ಒಬ್ಬರು ಮುಚ್ಚಿದ ಲಕೋಟೆ ನೀಡಿದ್ದು ಅವಿಶ್ವಾಸ ನಿರ್ಣಯದ ಪರ 9 ಮತಗಳು ಹಾಗೂ ಅಧ್ಯಕ್ಷರ ಪರ 3 ಮತಗಳು ಚಲಾಯಿಸಲ್ಪಟ್ಟವು. ಹಾಗಾಗಿ ಅವಿಶ್ವಾಸ ನಿರ್ಣಯದ ಪರವಾಗಿ ತೀರ್ಪು ಬಂದ ಹಿನ್ನಲೆಯಲ್ಲಿ ಎಂ.ಬಿ.ಚನ್ನವೀರಪ್ಪ ಅವರ 21 ತಿಂಗಳ ಅಧಿಕಾರವಧಿ ಅಂತ್ಯಗೊಂಡಿತು.
ಅಧ್ಯಕ್ಷರ ಪರವಾಗಿ ಬಿ.ಡಿ. ಭೂಕಾಂತ್, ಅಗಡಿ ಅಶೋಕ್ ಮತ್ತು ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ ಮತ ಚಲಾಯಿಸಿದ್ದರು. ಅವಿಶ್ವಾಸ ನಿರ್ಣಯದ ಪರವಾಗಿ ಎಚ್.ಎಲ್.ಷಡಾಕ್ಷರಿ, ಎಚ್.ಎನ್.ವಿಜಯದೇವ್, ಕೆ.ಪಿ.ದುಗ್ಗಪ್ಪಗೌಡ, ಎಚ್.ಕೆ.ವೆಂಕಟೇಶ್, ಎಸ್.ಪಿ.ದಿನೇಶ್, ಜೆ.ಪಿ.ಯೋಗೀಶ್, ಶ್ರೀಪಾದರಾವ್ ನಿಸರಾಣಿ, ಎಂ.ಎಂ.ಪರಮೇಶ್, ಜಿ.ಎನ್.ಸುಧೀರ್ ಮತ ಚಲಾಯಿಸಿದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಎಲ್.ಷಡಾಕ್ಷರಿ ಪ್ರಭಾರ ಅಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಜೆ.ಸಿ.ವೆಂಕಟಾಚಲಪತಿ ಕಾರ್ಯನಿರ್ವಹಿಸಿದ್ದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಎಎಸ್ಪಿ ಅನಿಲ್‌ಕುಮಾರ್ ಭೂಮರಡ್ಡಿ, ಶಿವಮೊಗ್ಗ ಉಪ ವಿಭಾಗ-2ರ ಡಿವೈಎಸ್ಪಿ ಸುರೇಶ್ ನೇತೃತ್ವದಲ್ಲಿ ಮುಖ್ಯದ್ವಾರ ಹಾಗೂ ಸುತ್ತಮುತ್ತ ಪೊಲೀಸ್ ಬಿಗಿ ಪಹರೆ ಕೈಗೊಳ್ಳಲಾಗಿತ್ತು.
ಡಿಸಿಸಿ ಬ್ಯಾಂಕ್ ಆವರಣದಲ್ಲಿ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಪಿ.ಒ.ಶಿವಕುಮಾರ್, ವಿದ್ಯಾದರ ಮೊದಲಾದವರು ಹಾಜರಿದ್ದು ಅವಿಶ್ವಾಸ ನಿರ್ಣಯದ ಬಗ್ಗೆ ಸಮಾಲೋಚನೆ ನಡೆಸಿದರು. ಅಂದುಕೊಂಡಂತೆ ಅವಿಶ್ವಾಸ ನಿರ್ಣಯದ ಪರ ಮತ ಬಂದಿದ್ದರಿಂದ ಕಾಂಗ್ರೆಸ್ ಬೆಂಬಲಿತ ಉಪಾಧ್ಯಕ್ಷರಾಗಿದ್ದ ಎಚ್.ಎಲ್.ಷಡಕ್ಷರಿ ಅವರೇ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.