

ಜಮ್ಮು-ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ಅನ್ವಯ ನೀಡಲಾಗಿದ್ದ ‘ವಿಶೇಷ ಸ್ಥಾನಮಾನ’ವನ್ನು ಕೇಂದ್ರ ಸರ್ಕಾರ 2019 ಆಗಸ್ಟ್ 5ರಂದು ಹಿಂಪಡೆಯುವ ಮೂಲಕ, ಮಹತ್ವದ ಹೆಜ್ಜೆ ಇರಿಸಿತು. ಆದರೆ, ಕೇಂದ್ರದ ಈ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ 23 ಅರ್ಜಿಗಳು ದಾಖಲಾಗಿದ್ದವು. ಸುದೀರ್ಘ ವಿಚಾರಣೆಯ ಬಳಿಕ, ಸೋಮವಾರ ತೀರ್ಪು ಪ್ರಕಟಿಸಿರುವ ನ್ಯಾಯಾಲಯ ಕೇಂದ್ರದ ನಿರ್ಣಯವನ್ನು ಎತ್ತಿಹಿಡಿದಿದೆ. ಇದು ಚಾರಿತ್ರಿಕ ತೀರ್ಪಾಗಿದ್ದು, ಜಮ್ಮು-ಕಾಶ್ಮೀರದ ಅಭಿವೃದ್ಧಿಗೆ, ಭವಿಷ್ಯಕ್ಕೆ ಪೂರಕವಾಗಿ ಪರಿಣಮಿಸಲಿದೆ ಎಂಬುದರಲ್ಲಿ ಅನುಮಾನವಿಲ್ಲ. ಭಾರತದ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ, ‘ಒಂದು ದೇಶ ಒಂದು ಕಾನೂನು’ ನೀತಿಯನ್ನು ಬಲಗೊಳಿಸಿದ ಈ ಕ್ರಮ ನಿಜಕ್ಕೂ ಪ್ರಶಂಸಾರ್ಹ. ಕಾಶ್ಮೀರವನ್ನು ಭಾರತದ ಅಭಿವೃದ್ಧಿಯ ಮುಖ್ಯವಾಹಿನಿಗೆ ತರಲು ವಿಶೇಷ ಸ್ಥಾನಮಾನ ಮತ್ತು 35ಎ ವಿಧಿ ಅಡ್ಡಿಯಾಗಿದ್ದವು. ಇದನ್ನು ತೆಗೆದು ಹಾಕುವುದು ಸುಲಭವೂ ಇರಲಿಲ್ಲ. ‘ಕೇಂದ್ರದಲ್ಲಿ ಹತ್ತು ಬಾರಿ ಅಧಿಕಾರಕ್ಕೆ ಬಂದರೂ ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದು ಹಾಕಲು ಸಾಧ್ಯವಿಲ್ಲ’ ಎಂದು ಆ ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ಗುಡುಗಿದ್ದರು. ಅಲ್ಲದೆ, ಸಂವಿಧಾನ ತಾತ್ಕಾಲಿಕವಾಗಿ ನೀಡಿದ್ದ ಈ ಸವಲತ್ತನ್ನು ಅಲ್ಲಿಯ ರಾಜಕಾರಣಿಗಳು ‘ಶಾಶ್ವತ’ ಎಂಬಂತೆ ಜನರಲ್ಲಿ ಬಿಂಬಿಸಿ, ಅದನ್ನು ಮತಬ್ಯಾಂಕಿನ ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿದ್ದರು.
1954ರಲ್ಲಿ 370ನೇ ಕಲಂ ಅನ್ವಯ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿತ್ತು. ಇದರಿಂದಾಗಿ, ರಾಜ್ಯವನ್ನು ಪುನರ್ ವಿಂಗಡಣೆ ಮಾಡುವಂತಿರಲಿಲ್ಲ. ರಕ್ಷಣೆ, ಸಂವಹನ, ವಿದೇಶಾಂಗ ನೀತಿ ಹೊರತುಪಡಿಸಿ ಈ ರಾಜ್ಯದ ಬಗ್ಗೆ ನಿರ್ಧಾರ ಕೈಗೊಳ್ಳುವಂಥ ಅಧಿಕಾರ ಕೇಂದ್ರ ಸರ್ಕಾರಕ್ಕೂ ಇರಲಿಲ್ಲ. ಹಾಗಾಗಿಯೇ, ಪ್ರತ್ಯೇಕತಾವಾದಿಗಳ ಉಪಟಳ ಹದ್ದು ಮೀರುತ್ತಿತ್ತು. ಪ್ರಸಕ್ತ, 370ನೇ ವಿಧಿ ರದ್ದಾಗಿರುವ ಪ್ರಯುಕ್ತ ಅಲ್ಲಿ ದ್ವಿಪೌರತ್ವ ಇರುವುದಿಲ್ಲ, ಕೇಂದ್ರದ ಕಾನೂನುಗಳು ನೇರವಾಗಿ ಅನ್ವಯವಾಗುತ್ತಿವೆ. ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಕಾನೂನು ಇರುವುದಿಲ್ಲ. ಭಾರತದ ಇತರ ರಾಜ್ಯಗಳ ನಾಗರಿಕರು ಅಲ್ಲಿ ನೆಲೆಸಬಹುದು, ಆಸ್ತಿ ಖರೀದಿಸಬಹುದು. ಅಲ್ಲಿನ ವಿಧಾನಸಭೆಯ ಅವಧಿ ಆರು ವರ್ಷದಿಂದ ಐದು ವರ್ಷಕ್ಕೆ ಇಳಿಕೆಯಾಗಿದೆ.
ಒಟ್ಟಾರೆ, ಆ ‘ಪ್ರತ್ಯೇಕ’ ಭಾವನೆ ಕೊನೆಗೊಳ್ಳಲಿದೆ ಎಂಬುದು ಮುಖ್ಯ ಸಂಗತಿ.2019ರಲ್ಲಿ 370ನೇ ವಿಧಿ ಹಿಂಪಡೆದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳು ಆಗಿವೆ. ಪ್ರತ್ಯೇಕತಾವಾದಿ ಚಟುವಟಿಕೆಗಳು ಬಹುತೇಕ ನಿಯಂತ್ರಣಕ್ಕೆ ಬಂದಿದ್ದು, ಭಯೋತ್ಪಾದನೆ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ. ಉದ್ಯೋಗಸೃಷ್ಟಿಯ ಪ್ರಯತ್ನಕ್ಕೆ ವೇಗ ಸಿಕ್ಕಿದ್ದು, ಪ್ರವಾಸೋದ್ಯಮ ಮತ್ತೆ ಚಿಗುರೊಡೆಯುತ್ತಿದೆ. ಕಾಶ್ಮೀರಕ್ಕಾಗಿ ನಮ್ಮಲ್ಲಿ ಅದೆಷ್ಟೋ ಬಲಿದಾನಗಳು ನಡೆದಿವೆ, ಸೈನಿಕರು ಹುತಾತ್ಮರಾಗಿದ್ದಾರೆ. ಕಾಶ್ಮೀರಿ ಪಂಡಿತರು ನ್ಯಾಯಕ್ಕಾಗಿ ಪರಿತಪಿಸುತ್ತಿದ್ದಾರೆ. ಹಲವು ದಶಕಗಳ ಈ ಎಲ್ಲ ಬವಣೆಗೆ ಪ್ರಸಕ್ತ ನಿರ್ಧಾರ ಅಂತ್ಯ ಹಾಡಿದೆ. ಇನ್ನು ಮುಂದೆ ಇರುವುದು ಜಮ್ಮು-ಕಾಶ್ಮೀರವನ್ನು ಅಭಿವೃದ್ಧಿಯ ಮುಂಚೂಣಿಗೆ ತಂದು ನಿಲ್ಲಿಸುವ ಸವಾಲು. ಆ ನಿಟ್ಟಿನಲ್ಲೂ ಕೇಂದ್ರ ಮಹತ್ವದ ಹೆಜ್ಜೆಗಳನ್ನು ಇರಿಸುತ್ತದೆಂದು ನಿರೀಕ್ಷಿಸೋಣ.