

ಬೆಂಗಳೂರು: ನಗರದ ಮೈಸೂರು ರಸ್ತೆಯಲ್ಲಿರುವ ಭಾರತ್ ಹೆವಿ ಎಲೆಕ್ಟ್ರಿಕಲ್ ಕಂಪನಿ(ಬಿಎಚ್‌ಇಎಲ್) ಶನಿವಾರ ಐತಿಹಾಸಿಕ ಘಟನೆಗೆ ಸಾಕ್ಷಿಯಾಯಿತು.
ಸ್ವಾತಂತ್ರ್ಯ ಬಂದ ನಂತರ ಇದೇ ಮೊದಲ ಬಾರಿಗೆ ಉಪ ರಾಷ್ಟ್ರಪತಿಯೊಬ್ಬರು ಬಿಎಚ್‌ಇಎಲ್ ಕಾರ್ಖಾನೆಗೆ ಭೇಟಿ(Historic visit of Vice President Jagdeep Dhankar to BHEL) ನೀಡಿ, ಅಲ್ಲಿನ ವಿವಿಧ ವಿಭಾಗಗಳಿಗೆ ತೆರಳಿ ವಿಜ್ಞಾನಿಗಳು ಹಾಗೂ ತಂತ್ರಜ್ಞರ ಜತೆ ಸಂವಾದ ನಡೆಸಿದರು.
ಉಪ ರಾಷ್ಟ್ರಪತಿ ಜಗದೀಪ್ ಧನಕರ್ ತಮ್ಮ ಪತ್ನಿ ಸುದೇಶ್ ಧನಕರ್ ಅವರೊಂದಿಗೆ ಕಾರ್ಖಾನೆಗೆ ಭೇಟಿ ನೀಡಿದರು. ರಾಜ್ಯಪಾಲರಾದ ಥಾವರ ಚಂದ ಗೆಹಲೋತ್ ಹಾಗೂ ಕೇಂದ್ರದ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಹಾಗೂ ಕಂಪನಿಯ ಉನ್ನತ ಅಧಿಕಾರಿಗಳು ಉಪ ರಾಷ್ಟ್ರಪತಿಗಳ ಜತೆಯಲ್ಲಿದ್ದರು.
ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಬಿಎಚ್‌ಇಎಲ್ ಕಾರ್ಖಾನೆಯ ಬೆಂಗಳೂರು ಘಟಕಕ್ಕೆ ಭೇಟಿ ನೀಡಿರುವುದು ನನಗೆ ಬಹಳ ಸಂತೋಷ ಉಂಟು ಮಾಡಿದೆ. ಪ್ರಧಾನಿ ಮೋದಿ ಅವರ ಆತ್ಮನಿರ್ಭರ ಭಾರತ ಪರಿಕಲ್ಪನೆಯ ಅಡಿಯಲ್ಲಿ ವೇಗವಾಗಿ ಕೆಲಸ ಮಾಡುತ್ತಿದ್ದೇವೆ. 2047ರ ಹೊತ್ತಿಗೆ ವಿಕಸಿತ ಭಾರತ ಕನಸನ್ನು ನನಸು ಮಾಡುವ ದಿಸೆಯಲ್ಲಿ ಉಪ ರಾಷ್ಟ್ರಪತಿಗಳ ಭೇಟಿ ನಮಗೆಲ್ಲ ಆನೆಬಲ ತಂದು ಕೊಟ್ಟಿದೆ ಎಂದರು.
ವಿಕಸಿತ ಭಾರತ ಕನಸು ಸಾಕಾರಕ್ಕಾಗಿ ನಡೆಯುತ್ತಿರುವ ಪ್ರಯತ್ನಕ್ಕೆ ಬಿಎಚ್‌ಇಎಲ್ ಬಹುದೊಡ್ಡ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.
ಭಾರತದ ಕೈಗಾರಿಕೆ ಕ್ಷೇತ್ರವು ಸ್ವಾವಲಂಬನೆ ಸಾಧಿಸುವಲ್ಲಿ ಬಿಎಚ್‌ಇಎಲ್‌ನ ನಿರ್ಣಾಯಕ ಪಾತ್ರ ವಹಿಸಿದೆ. ಖಾಸಗಿ ವಲಯದ ಪ್ರಬಲ ಪೈಪೋಟಿ ನಡುವೆಯೂ ಕಂಪನಿಯು ಬಲಿಷ್ಠವಾಗಿ ನಿಂತಿದೆ ಮತ್ತು ವೇಗಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಇದಕ್ಕೆ ಉದ್ಯೋಗಿಗಳ ನಿರಂತರ ಪರಿಶ್ರಮ ಕಾರಣ, ಅವರಿಗೆ ನನ್ನ ಧನ್ಯವಾದಗಳು ಎಂದು ಹೇಳಿದರು.
ಕಳೆದ ಹಣಕಾಸು ವರ್ಷದಲ್ಲಿ ನಾವು 69,000 ಕೋಟಿ ರೂ. ಮೌಲ್ಯದ ಕಾರ್ಯಾದೇಶಗಳನ್ನು ಬಿಎಚ್‌ಇಎಲ್ ಪಡೆದುಕೊಂಡಿದೆ. ಈ ವರ್ಷ ನಮ್ಮ ಕಾರ್ಯಾದೇಶಗಳ ಮೊತ್ತದ 1.7 ಲಕ್ಷ ಕೋಟಿ ರೂ. ದಾಟಿದೆ. ಪ್ರಧಾನಮಂತ್ರಿ ದೂರದೃಷ್ಟಿಯ ನಾಯಕತ್ವ, ಆತ್ಮನಿರ್ಭರ, ವಿಕಸಿತ ಭಾರತ ಗುರಿಯನ್ನು ಸಾಧಿಸುವಲ್ಲಿ ಕಂಪನಿ ಬಹುದೊಡ್ಡ ಪಾತ್ರ ವಹಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ನಿಮ್ಮ ಭೇಟಿಯಿಂದ ನಮ್ಮ ಹುಮ್ಮಸ್ಸು ಹೆಚ್ಚಾಗಿದೆ ಎಂದು ಕುಮಾರಸ್ವಾಮಿ ಉಪ ರಾಷ್ಟಪತಿಗಳ ಸಮ್ಮುಖದಲ್ಲಿ ಹೇಳಿದರು.
ಬಿಎಚ್‌ಇಎಲ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೆ.ಸದಾಶಿವ ಮೂರ್ತಿ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕ ಶ್ಯಾಂ ಬಾಬು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಉಪ ರಾಷ್ಟ್ರಪತಿ ದಂಪತಿಯನ್ನು ಕಂಪನಿಯ ಪರವಾಗಿ ಕುಮಾರಸ್ವಾಮಿ ಸನ್ಮಾನಿಸಿದರು.