

ರಿಪ್ಪನ್‌ಪೇಟೆ: ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಸಾನಿ ಗ್ರಾಮದ ಅಂಗನವಾಡಿಯ 13 ಮಕ್ಕಳು ವಾಂತಿ-ಭೇದಿಯಿಂದ ಅಸ್ವಸ್ಥರಾಗಿದ್ದಾರೆ.
ಅಂಗನವಾಡಿಯಲ್ಲಿ ಒಟ್ಟು 13 ಮಕ್ಕಳಿದ್ದು, ಮಂಗಳವಾರ ಸಂಜೆಯಿಂದಲೇ ವಾಂತಿ-ಭೇದಿ ಆರಂಭವಾಗಿದೆ. ಕೆಲವು ಮಕ್ಕಳಿಗೆ ಪಾಲಕರು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಮಕ್ಕಳ ಆರೋಗ್ಯ ಸುಧಾರಿಸದಿದ್ದರಿಂದ ಪಾಲಕರು ಗುರುವಾರ ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕರೆತಂದಿದ್ದಾರೆ. ಪ್ರಾಥಮಿಕ ಚಿಕಿತ್ಸೆಯನ್ನು ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಮಕ್ಕಳನ್ನು ಕಳುಹಿಸಲಾಗಿದೆ.
ವಿಟಮಿನ್ ಡ್ರಾಪ್ಸ್ ಕಾರಣ?: ಮಂಗಳವಾರ ಅಂಗನವಾಡಿಯಲ್ಲಿ ಮಕ್ಕಳಿಗೆ ವಿಟಮಿನ್ ಎ ಡ್ರಾಪ್ಸ್ ಹಾಕಲಾಗಿತ್ತು. ಅಂದು ಸಂಜೆ ಮಕ್ಕಳಿಗೆ ಮನೆಗೆ ಬರುತ್ತಿದ್ದಂತೆ ಜ್ವರ ಕಾಣಿಸಿಕೊಂಡು ವಾಂತಿ-ಭೇದಿ ಶುರುವಾಗಿದೆ. ಡ್ರಾಪ್ಸ್‌ನಿಂದಲೇ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆಂದು ಪಾಲಕರು ಆರೋಪಿಸಿದ್ದಾರೆ.
ಆಸ್ಪತ್ರೆಗೆ ಜಿಪಂ ಉಪಕಾರ್ಯದರ್ಶಿ ಜಯಶೀಲಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಭಾರತಿ ಬಣಕಾರ್, ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಗಾಯತ್ರಿ ಭೇಟಿ ನೀಡಿ ಪಾಲಕರೊಂದಿಗೆ ಸಮಾಲೋಚಿಸಿ ಶಿವಮೊಗ್ಗಕ್ಕೆ ಕಳುಹಿಸಿಕೊಟ್ಟರು.
ನೀರಿನ ಮಾದರಿ ಪರೀಕ್ಷೆ: ಹಿರೇಸಾನಿ ಸೇರಿ ಕೆಲವು ಅಂಗನವಾಡಿ ಮಕ್ಕಳಿಗೆ ವಿಟಮಿನ್ ಡ್ರಾಪ್ಸ್ ನೀಡಲಾಗಿದೆ. ಆದರೆ ಹಿರೇಸಾನಿಯ ಮಕ್ಕಳಿಗೆ ಮಾತ್ರ ಅನಾರೋಗ್ಯ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಮಕ್ಕಳಿಗೆ ನೀಡುತ್ತಿದ್ದ ನೀರಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ನಿಖರ ಕಾರಣ ತಿಳಿಯಬಹುದು.