

ಸಾಗರ: ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳುವ ಮೂಲಕ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆ ನಿವಾರಿಸುವಂತೆ ಒತ್ತಾಯಿಸಿ ಶುಕ್ರವಾರ ಸಾಗರ ಎಬಿವಿಪಿ ಘಟಕದ ಪದಾಧಿಕಾರಿಗಳು ಸಾಗರ ಎಸಿ ಕಚೇರಿಗೆ ಮನವಿ ಸಲ್ಲಿಸಿದರು.
ಉಪನ್ಯಾಸಕರ ಕೊರತೆಯಿಂದಾಗಿ ವಿದ್ಯಾರ್ಥಿಗಳು ಪಾಠಗಳಿಂದ ವಂಚಿತರಾಗುತ್ತಿದ್ದಾರೆ. ಉಪನ್ಯಾಸಕರು ಇಲ್ಲದೆ ವಿದ್ಯಾರ್ಥಿಗಳು ವಾಪಸ್ ಮನೆಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಕಾಲೇಜು ಶಿಕ್ಷಣ ಇಲಾಖೆಯಡಿ ಬರುವ 432 ಪದವಿ ಕಾಲೇಜುಗಳಲ್ಲಿನ 6 ಸಾವಿರ ಉಪನ್ಯಾಸಕರ ಪೈಕಿ 3 ಸಾವಿರಕ್ಕೂ ಅಧಿಕ ಉಪನ್ಯಾಸಕರು ನಿವೃತ್ತರಾಗಿದ್ದಾರೆ. ಉಳಿದವರ ಮೇಲೆ ಕಾರ್ಯಭಾರ ಹೆಚ್ಚಿದೆ ಎಂದು ಗಮನಕ್ಕೆ ತಂದರು.
ಪದವಿ ತರಗತಿಗಳಲ್ಲಿ ಗುಣಮಟ್ಟದ ಶಿಕ್ಷಣ ಪಡೆಯುವುದು ವಿದ್ಯಾರ್ಥಿಗಳ ಹಕ್ಕು. ಸರ್ಕಾರ ಇದಕ್ಕೆ ಪೂರಕ ವಾತಾವರಣ ಕಲ್ಪಿಸಬೇಕು. ಈಗಾಗಲೇ 2025-26ನೇ ಸಾಲಿಗೆ 12 ಸಾವಿರ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಅರ್ಜಿ ಆಹ್ವಾನಿಸಿದೆ ಸುಮಾರು 55 ಸಾವಿರ ಅರ್ಜಿ ಸಲ್ಲಿಕೆಯಾಗಿದೆ. ತರಗತಿಗಳು ಆರಂಭವಾದರೂ ಈತನಕ ಅತಿಥಿ ಉಪನ್ಯಾಸಕರ ನೇಮಕ ಆಗಿಲ್ಲ ಎಂದು ದೂರಿದರು.
20 ಸಾವಿರಕ್ಕೂ ಹೆಚ್ಚು ಅರ್ಹ ಅಭ್ಯರ್ಥಿಗಳು ಯುಜಿಸಿ ನಿಯಮದಡಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಲು ಸಿದ್ಧರಿದ್ದಾರೆ. ಅವರನ್ನು ಸರ್ಕಾರ ನೇಮಕ ಮಾಡಿಕೊಳ್ಳಬೇಕು. ಖಾಲಿ ಇರುವ ಎಲ್ಲ ಹುದ್ದೆ ಭರ್ತಿ ಮಾಡಬೇಕು. ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಸರ್ಕಾರ ಆಸಕ್ತಿ ವಹಿಸಬೇಕು. ಕಾಲೇಜುಗಳಲ್ಲಿ ಮೂಲ ಸೌಲಭ್ಯ ಒದಗಿಸಬೇಕು ಒತ್ತಾಯಿಸಿದರು.
ಎಚ್.ಜಿ.ಮೋಹನ್, ನಿತಿನ್‌ಕುಮಾರ್, ಚಿನ್ಮಯ್, ಸಂಜಯ್, ಅಭಿಷೇಕ್, ಸುದೀಪ್, ಅಖಿಲಾ, ಸುಧಾ, ಶ್ರೀನಿಧಿ, ಸುರಕ್ಷಾ ಇತರರಿದ್ದರು.