

ಕಂಬಾಲ: ನೀರು ಕುದುರೆಯೊಂದು ಎರಡು ವರ್ಷದ ಮಗುವಿನ ಮೇಲೆ ದಾಳಿ ಮಾಡಿರುವ ಘಟನೆ ಉಗಾಂಡದ ಪಶ್ಚಿಮ ಕಾಸೆಸೆಯಲ್ಲಿ ನಡೆದಿದೆ. ಮಗುವನ್ನು ಜೀವಂತ ನುಂಗಿದ ನೀರು ಕುದುರೆ ಕೆಲವೇ ಸಮಯದಲ್ಲಿ ಮಗುವನ್ನು ಜೀವಂತ ಉಗಿದಿದೆ.
ಈ ಘಟನೆ ಕಳೆದ ಭಾನುವಾರ ನಡೆದಿದೆ. ಬದುಕಿ ಬಂದ ಮಗುವನ್ನು ಇಗಾ ಪೌಲ್ ಎಂದು ಗುರುತಿಸಲಾಗಿದೆ. ಮನೆಯ ಹೊರಭಾಗದಲ್ಲಿ ಆಟವಾಡುತ್ತಿದ್ದಾಗ ಮಗುವಿನ ತಲೆ ಹಿಡಿದು ಎಳೆದುಕೊಂಡ ನೀರು ಕುದುರೆ ಆತನ ಅರ್ಧ ದೇಹವನ್ನು ನುಂಗಿತ್ತು. ಈ ವೇಳೆ ಸಮೀಪದಲ್ಲಿದ್ದ ಕ್ರಿಸ್ಪಾಸ್ ಬ್ಯಾಗೊಂಜಾ ಎಂಬುವರು ಮಗುವಿನ ನೆರವಿಗೆ ಧಾವಿಸಿದರು. ಬ್ಯಾಂಗೋಜ್ ಕಲ್ಲು ತೂರಿದಾಗ ಹೆದರಿದ ನೀರು ಕುದುರೆ ಮಗುವನ್ನು ಹೊರಗಡೆ ಉಗಿದು ಹತ್ತಿರದಲ್ಲೇ ಇದ್ದ ಕೊಳದ ಕಡೆ ಓಡಿತು.
ಇದೇ ಮೊದಲ ಬಾರಿಗೆ ನೀರು ಕುದುರೆ ಹೊಳೆಯಿಂದ ಹೊರಗಡೆ ಬಂದು ಮಗುವಿನ ಮೇಲೆ ದಾಳಿ ಮಾಡಿದೆ. ಬಚಾವ್ ಆದ ಮಗುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ಮಗುವಿಗೆ ರೇಬಿಸ್ ಚುಚ್ಚುಮದ್ದನ್ನು ನೀಡಲಾಗಿದೆ.
ಆಫ್ರಿಕಾದಲ್ಲಿ ನೀರು ಕುದುರೆ ದಾಳಿಗೆ ಪ್ರತಿ ವರ್ಷ ಸುಮಾರು 500 ರಿಂದ 3000 ಮಂದಿ ಸಾಯುತ್ತಾರೆ. (ಏಜೆನ್ಸೀಸ್)