

ನವದೆಹಲಿ: ಹಿಂದುಸ್ಥಾನ್ ಯುನಿಲೀವರ್ ಲಿಮಿಟೆಡ್ನ ಫ್ಲ್ಯಾಗ್ಶಿಪ್ ಬ್ರ್ಯಾಂಡ್ ಆಗಿದ್ದ ಫೇರ್ ಆ್ಯಂಡ್ ಲವ್ಲೀ ಈಗ ಬದಲಾಗಿದೆ.
ಹೌದು... ಫೇರ್ನೆಸ್ ಕ್ರೀಮ್ ಉತ್ಪನ್ನದ ಹೆಸರು ಬದಲಾಯಿಸುವುದಾಗಿ ಈ ಹಿಂದೆಯೇ ಕಂಪನಿ ತಿಳಿಸಿತ್ತು. ಅದರ ಬದಲಾದ ಹೆಸರನ್ನು ಸಂಬಂಧಿತ ಪ್ರಾಧಿಕಾರದ ಒಪ್ಪಿಗೆಗೆ ಕಳುಹಿಸಲಾಗಿದೆ ಎಂದು ಪ್ರಕಟಣೆ ಹೊರಡಿಸಿತ್ತು. ಇದೀಗ ಅದರ ಹೆಸರನ್ನು ಬಹಿರಂಗಪಡಿಸಿದೆ.
ಇನ್ನು ಮುಂದೆ ಫೇರ್ ಆ್ಯಂಡ್ ಲವ್ಲೀ ಹೆಸರನ್ನು ಗ್ಲೋ ಆ್ಯಂಡ್ ಲವ್ಲೀ ಎಂದು ಬದಲಾಯಿಸಲಾಗಿದೆ. ಪುರುಷರು ಬಳಸುವ ಸ್ಕಿನ್ ಕೇರ್ ಕ್ರೀಮ್ಅನ್ನು ಗ್ಲೋ ಆ್ಯಂಡ್ ಹ್ಯಾಂಡ್ಸಮ್ ಎಂದು ಘೋಷಿಸಿದೆ.
ಜತೆಗೆ ತನ್ನ ಉತ್ಪನ್ನ ಹಾಗೂ ಅವುಗಳ ಪ್ಯಾಂಕಿಂಗ್ನಲ್ಲೆಲ್ಲೂ ಫೇರ್, ಫೇರ್ನೆಸ್, ಲೈಟ್, ಲೈಟ್ನಿಂಗ್ ಎಂಬ ಪದಗಳನ್ನು ಬಳಸದಿರಲು ಕಂಪನಿ ನಿರ್ಧರಿಸಿದೆ.
ಕಪ್ಪು ವರ್ಣದವರನ್ನು ಕೀಳಾಗಿ ನೋಡಲಾಗುತ್ತದೆ ಹಾಗೂ ಮನುಷ್ಯರ ಬಣ್ಣಗಳ ಆಧಾರದಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂಬ ಟೀಕೆ ಬಲವಾದ ಕಾರಣ ಹಿಂದುಸ್ಥಾನ ಯುನಿಲೀವರ್ ಹೆಸರನ್ನು ಬದಲಾಯಿಸಲು ನಿರ್ಧರಿಸಿತ್ತು.
ಇದಲ್ಲದೇ, ಅಮೆರಿಕದಲ್ಲಿ ಬ್ಲ್ಯಾಕ್ ಲೈವ್ಸ್ ಮ್ಯಾಟರ್ಸ್ ಹೋರಾಟ ತೀವ್ರತೆ ಪಡೆದುಕೊಂಡಿದ್ದು ಕೂಡ ಕಂಪನಿಗೆ ಮುಳುವಾಗಿ ಪರಿಣಮಿಸಿತ್ತು.