

ಕೋಲಾರ: ಹಿಂದುತ್ವ ಎಂಬುದು ಜೀವನ ಕ್ರಮವೇ ಹೊರತು ಯಾರನ್ನೂ ವಿರೋಧಿಸುವ, ದ್ವೇಷಿಸುವ ಧರ್ಮವಲ್ಲ. ಆದರೆ ಹಿಂದುತ್ವ ಕುರಿತು ವಿವಿಧ ರೀತಿಯಲ್ಲಿ ತಮ್ಮ ಸ್ವಾರ್ಥಕ್ಕಾಗಿ ವ್ಯಾಖ್ಯಾನಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಹೊಳ್ಳ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸಾಮರಸ್ಯ ವೇದಿಕೆ ಆಶ್ರಯದಲ್ಲಿ ಹಿಂದುತ್ವ ವರ್ತಮಾನದ ಸಂದರ್ಭದಲ್ಲಿ ಹಿಂದುತ್ವದ ಪ್ರಸ್ತುತತೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಮನುಷ್ಯರು ಸಂಘರ್ಷವಿಲ್ಲದೆ ಸಹಬಾಳ್ವೆಯಿಂದ ಬದುಕಬೇಕೆಂದು ಬೋಧಿಸುವುದೇ ಧರ್ಮ ಎಂದರು.
ಸತ್ಯ ಮಾರ್ಗದಲ್ಲಿ ನಡೆಯಬೇಕು, ಹಿಂಸೆ ಮಾಡಬಾರದು ಗುರು&ಹಿರಿಯರನ್ನು, ಮಹಿಳೆಯರನ್ನು ಗೌರವಿಸಬೇಕು. ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕಬೇಕು ಎಂದು ಹೇಳುವ ಹಿಂದುತ್ವಕ್ಕೆ ಯಾವುದೇ ಅಪಾಯ ಬರಲು ಸಾಧ್ಯವಿಲ್ಲ ಎಂದು ನುಡಿದರು.
ಹಿಂದುತ್ವದ ವಿರುದ್ಧ ದಾಳಿ ಇಂದು ನೆನ್ನೆಯದಲ್ಲ, 2000 ವರ್ಷಗಳಿಂದಲೂ ನಿರಂತರ ಮುಂದುವರಿದಿದೆ. ಆದರೆ ಇವೆಲ್ಲ ದಾಳಿಯನ್ನು ಮೆಟ್ಟಿ ನಿಂತು ಹಿಂದುತ್ವ ಉಳಿದಿದೆ. ಅಜರಾಮರವಾಗಿ ಉಳಿಯುತ್ತದೆ ಎಂದು ಪ್ರತಿಪಾದಿಸಿದರು.
ಹಿಂದು ಬಿಟ್ಟರೆ ಬೇರೆ ಯಾವುದೇ ಧರ್ಮಗಳು ಸಹಿಷ್ಣತೆ ಬೋಧಿಸುವುದಿಲ್ಲ. ತಮ್ಮ ತಮ್ಮ ಧರ್ಮಗಳೇ ಶ್ರೇಷ್ಠ ಅದನ್ನು ಮಾತ್ರ ಅನುಸರಿಸಬೇಕು ಎಂದು ಹೇಳುವ ಬೇರೆ ಧರ್ಮಗಳ ನಡುವೆ ಹಿಂದುತ್ವವು ಪರಧರ್ಮ ಸಹಿಷ್ಣೆತಯ ತತ್ವವನ್ನು ಬೋಧಿಸುತ್ತದೆ. ಇದೇ ಹಿಂದು ಧರ್ಮದ ಹೆಗ್ಗಳಿಕೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಮಕ್ಕಳನ್ನು ಚಿಕ್ಕಂದಿನಿಂದಲೇ ಸಂಸ್ಕಾರಯುತವಾಗಿ ಬೆಳೆಸುವ ಹಿಂದುತ್ವ ಅಗತ್ಯವಾಗಿದೆ. ಇವತ್ತಿನ ದಿನಗಳಲ್ಲಿ ಮರೀಚಿಕೆಯಾಗಿರುವ ನೈತಿಕತೆಯ ಜೀವನವನ್ನು ರೂಢಿಸುವ ಹಿಂದುತ್ವ ಮತ್ತು ಮನುಷ್ಯರನ್ನು ಯಾವುದೇ ತಾರತಮ್ಯವಿಲ್ಲದೆ ಮನುಷ್ಯರನ್ನಾಗಿ ನೋಡುವ ಹಿಂದುತ್ವ ಅಗತ್ಯವಾಗಿದೆ ಎಂದು ಹೇಳಿದರು.
ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಸಂಸತಿ ಮತ್ತು ಪರಂಪರೆಯ ಅರಿವು ಮೂಡಿಸಿ ಬದುಕಿನುದ್ದಕ್ಕೂ ನೈತಿಕತೆಯ ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುವ ಹಿಂದುತ್ವ ಇವತ್ತಿನ ಅನಿವಾರ್ಯತೆಯಾಗಿದೆ ಎಂದು ಎಚ್ಚರಿಸಿದರು.