ಹಿಂದೂ ಧರ್ಮ ಇಸ್ಲಾಂಗಿಂತ ಹಳೆಯದು, ಮುಸ್ಲಿಮರೂ ಹಿಂದೂಗಳಾಗಿದ್ದರು: ಗುಲಾಂ ನಬಿ ಆಜಾದ್

gulam nabi azad
Published on

ಶ್ರೀನಗರ: ಹಿಂದೂ ಧರ್ಮ ಇಸ್ಲಾಂಗಿಂತ ಹಳೆಯದು, ಮುಸ್ಲಿಮರೂ ಹಿಂದೂಗಳಾಗಿದ್ದರು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಕ್ಷದ (ಡಿಪಿಎಪಿ) ನಾಯಕ ಗುಲಾಂ ನಬಿ ಆಜಾದ್ ಹೇಳಿದ್ದಾರೆ.

ಈ ಕುರಿತಾದ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಆಗಸ್ಟ್ 9ರಂದು ದೋಡಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಮಾತುಗಳನ್ನು ಹೇಳಿದ್ದಾರೆಂದು ಹೇಳಲಾಗುತ್ತಿದೆ. ಆಜಾದ್ ತಮ್ಮ ಭಾಷಣದಲ್ಲಿ, 'ಇಸ್ಲಾಂ ಹುಟ್ಟಿದ್ದು 1500 ವರ್ಷಗಳ ಹಿಂದೆ. ಭಾರತದಲ್ಲಿ ಯಾರೂ ಹೊರಗಿನವರಲ್ಲ. ನಾವೆಲ್ಲರೂ ಈ ದೇಶಕ್ಕೆ ಸೇರಿದವರು. ಭಾರತದ ಮುಸ್ಲಿಮರು ಮೂಲತಃ ಹಿಂದೂಗಳು, ಅನಂತರ ಮತಾಂತರಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಯ್ಯೋ ವಿಧಿಯಾಟವೇ: ಹೃದಯಾಘಾತದಿಂದ ಅಣ್ಣ-ತಮ್ಮನ ಸಾವು..

ದೋಡಾದಲ್ಲಿ ನೀಡಿದ ಈ ಭಾಷಣದಲ್ಲಿ, '600 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರು ಮಾತ್ರ ಇದ್ದರು. ನಂತರ ಅನೇಕ ಜನರು ಮತಾಂತರಗೊಂಡು ಮುಸ್ಲಿಮರಾದರು. ಆದುದರಿಂದ ಈಗ ಎಲ್ಲಾ ಜನರು ತಮ್ಮ ತಮ್ಮ ನಡುವೆ ಸಹೋದರತೆ, ಶಾಂತಿ ಮತ್ತು ಐಕ್ಯತೆಯನ್ನು ಕಾಪಾಡಿಕೊಳ್ಳಲು ವಿನಂತಿಸಲಾಗಿದೆ. ರಾಜಕೀಯದೊಂದಿಗೆ ಧರ್ಮವನ್ನು ಬೆರೆಸಬಾರದು, ಜನರು ಧರ್ಮದ ಹೆಸರಿನಲ್ಲಿ ಮತ ಹಾಕಬಾರದು ಎಂದು ತಿಳಿಸಿದ್ದಾರೆ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.

ನಮ್ಮ ಹಿಂದೂ ಸಹೋದರರು ಮೃತ ದೇಹಗಳನ್ನು ಸುಡುತ್ತಾರೆ. ನಂತರ ಬೂದಿಯನ್ನು ನದಿಯಲ್ಲಿ ಬಿಡುತ್ತಾರೆ. ನಮ್ಮ ದೇಶದಲ್ಲಿ ಮರಣದ ನಂತರ ಮುಸಲ್ಮಾನನನ್ನು ನೆಲದಡಿಯಲ್ಲಿ ಹೂಳಲಾಗುತ್ತದೆ. ನಮ್ಮೆಲ್ಲರ ದೇಹ ಭಾರತ ಮಾತೆಯ ಮಣ್ಣಲ್ಲಿ ಬೆರೆತುಹೋಗುತ್ತದೆ, ಇಲ್ಲಿನ ಮಣ್ಣಿನಲ್ಲಿ ಎಲ್ಲವೂ ಸಿಗುತ್ತದೆ ಎಂದು ಆಜಾದ್ ಹೇಳಿದ್ದಾರೆ. ಇವರ ಈ ಹೇಳಿಕೆಗೆ ದೇಶಾದ್ಯಂತ ವ್ಯಾಪಕ ಪ್ರತಿಕ್ರಿಯೆಗಳು ಬರುತ್ತಿವೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net