ಹಿಂದು ಮಹಿಳೆಯರೇ ಉಗ್ರರ ಟಾರ್ಗೆಟ್!

untitled-design-5-69025b5fa8145 (12)
Published on

ನವದೆಹಲಿ: ಜೈಷ್ ಎ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಪಾಕಿಸ್ತಾನದಲ್ಲಿ ಇತ್ತೀಚೆಗೆ ಘೋಷಣೆ ಮಾಡಿರುವ ಮಹಿಳಾ ಉಗ್ರ ಸಂಘಟನೆಗೆ ಮಹಿಳೆಯರನ್ನು ನೇಮಿಸಿಕೊಳ್ಳಲು ಮತ್ತು ಅವರಿಗೆ ತರಬೇತಿ ನೀಡಲು ನೀಲನಕ್ಷೆ ತಯಾರಿಸಿದ್ದು, ಭಾರತದ ಹಿಂದು ಮಹಿಳೆಯರೇ ಇವರ ಟಾರ್ಗೆಟ್ ಎಂಬ ಅಪಾಯಕಾರಿ ಅಂಶ ಬೆಳಕಿಗೆ ಬಂದಿದೆ.

ಅಕ್ಟೋಬರ್ ತಿಂಗಳ ಆರಂಭದಲ್ಲಿ ಜೈಷ್ ಎ ಮೊಹಮ್ಮದ್ ಸಂಘಟನೆ ಮಹಿಳಾ ಬ್ರಿಗೇಡ್ ರಚಿಸುತ್ತಿರುವ ಕುರಿತು ವರದಿಯಾಗಿತ್ತು. ಈಗ ಮಸೂದ್ ಅಜರ್​ನ 21 ನಿಮಿಷಗಳ ಆಡಿಯೋದಲ್ಲಿ ಮಹಿಳಾ ಬ್ರಿಗೇಡ್ ಕಾರ್ಯವಿಧಾನಗಳ ಕುರಿತು ಮತ್ತಷ್ಟ ಮಾಹಿತಿ ಬಹಿರಂಗವಾಗಿದೆ. ಮಸೂದ್ ತನ್ನ ಭಾಷಣದಲ್ಲಿ ‘ಜೈಷ್ ಎ ಮೊಹಮ್ಮದ್​ನ ಶತ್ರುಗಳು ಹಿಂದು ಮಹಿಳೆಯರನ್ನು ಸೈನ್ಯಕ್ಕೆ ಸೇರಿಸಿಕೊಂಡಿದ್ದಾರೆ ಮತ್ತು ಅವರು ನಮ್ಮ ವಿರುದ್ಧ ಮಹಿಳಾ ಪತ್ರಕರ್ತರನ್ನು ನೇಮಿಸಿದ್ದಾರೆ. ಹಾಗಾಗಿ ಅವರ ವಿರುದ್ಧ ಹೋರಾಡಲು ನಮ್ಮ ಮಹಿಳೆಯರನ್ನು ಸಜ್ಜುಗೊಳಿಸಬೇಕು. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಜಿಲ್ಲೆಯಲ್ಲೂ ಜಮಾತ್ ಉಲ್ ಮೊಮಿನಾತ್​ನ ಶಾಖೆಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾನೆ.

ಪ್ರತಿ ಜಿಲ್ಲೆಯಲ್ಲಿ ಸ್ಥಾಪಿತವಾಗುವ ಶಾಖೆಗಳಿಗೆ ಮಹಿಳೆಯರನ್ನು ನೇಮಿಸಿಕೊಳ್ಳಲು ಜೈಷ್ ಸಂಘಟನೆಯ ಕಮಾಂಡರ್​ಗಳ ಪತ್ನಿಯರು, ಹತ್ಯೆಗೀಡಾದ ಭಯೋತ್ಪಾದಕರ ಪತ್ನಿ ಮತ್ತು ಸಂಬಂಧಿಕರು ಹಾಗೂ ಆರ್ಥಿಕವಾಗಿ ದುರ್ಬಲರಾಗಿರುವ ಮಹಿಳೆಯರನ್ನು ಬಳಸಿಕೊಳ್ಳಲಾಗುತ್ತಿದೆ. ಭಾರತದ ವಿರುದ್ಧ ಕಾರ್ಯಾಚರಣೆ ನಡೆಸಲು ಮಸೂದ್ ತನ್ನ ಸಂಘಟನೆಯನ್ನು ವಿಸ್ತರಿಸುವ ಭಾಗವಾಗಿ ಮಹಿಳಾ ಬ್ರಿಗೇಡ್ ಸ್ಥಾಪಿಸಿರುವುದು ಇದರಿಂದ ಸ್ಪಷ್ಟವಾಗುತ್ತಿದೆ.

ಮಹಿಳಾ ಬ್ರಿಗೇಡ್​ಗೆ ಸೇರ್ಪಡೆಯಾಗುವವರಿಗೆ ತರಬೇತಿ ನೀಡಲಾಗುವುದು. ಮೊದಲ 15 ದಿನ ದೌರಾ ಎ ತಸ್ಕಿಯಾದಲ್ಲಿ ಅವರು ಭಾಗವಹಿಸುತ್ತಾರೆ. ನಂತರ ಧಾರ್ವಿುಕ ಬೋಧನೆಗಾಗಿ ದೌರಾ ಆಯತ್ ಉಲ್ ನಿಸಾದಲ್ಲಿ ಭಾಗವಹಿಸುತ್ತಾರೆ ಎಂದು ಮಸೂದ್ ತಿಳಿಸಿದ್ದಾರೆ. ಜೈಷ್ ಸಂಘಟನೆ ಆನ್​ಲೈನ್ ಮೂಲಕವೂ ತರಗತಿಗಳು ಮತ್ತು ಕೋರ್ಸ್​ಗಳನ್ನು ನಡೆಸುತ್ತಿದೆ. ಈ ಸಂಬಂಧ ಮಸೂದ್ ಅಜರ್ ಸಹೋದರಿ ಉಮ್ಮೆ ಮಸೂದ್ ಆನ್​ಲೈನ್ ನಲ್ಲಿ ಬೋಧಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಪುಣೆಯ ಟೆಕ್ಕಿ ಬಂಧನ

ಮುಂಬೈ: ಅಲ್-ಖೈದಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಸಾಫ್ಟ್ ವೇರ್ ಇಂಜಿನಿಯರ್ ಜುಬೇರ್ ಹಂಗರ್ಗೆಕರ್ ನನ್ನು ಬಂಧಿಸಿದೆ. ತನಿಖೆ ವೇಳೆ ಟೆಕ್ಕಿ ಅಲ್-ಖೈದಾ ಸಂಘಟನೆಯ ಸಂಸ್ಥಾಪಕ ಒಸಾಮಾ ಬಿನ್ ಲಾಡೆನ್ ಭಾಷಣಗಳಿಂದ ಪ್ರಭಾವಿತನಾಗಿದ್ದ ಎಂದು ತಿಳಿದುಬಂದಿದೆ. ಆತನ ಮನೆಯಲ್ಲಿ ಬಿನ್ ಲಾಡನ್​ನ ಭಾಷಣದ ಉರ್ದು ಅನುವಾದಿತ ಪ್ರತಿಯೂ ಲಭ್ಯವಾಗಿದೆ, ಹಂಗರ್ಗೆಕರ್ ಎಕೆ 47 ರೈಫಲ್ ಬಳಸುತ್ತಿರುವ ಹಾಗೂ ಬಾಂಬ್ ತಯಾರಿಸುತ್ತಿರುವ ಫೋಟೋ ವಶಕ್ಕೆ ಪಡೆಯಲಾಗಿದೆ. ಸೊಲ್ಲಾಪುರದ ಹಂಗರ್ಗೆಕರ್ ಸಾಫ್ಟ್​ವೇರ್ ಪರೀಕ್ಷೆ ಮತ್ತು ಡೇಟಾಬೇಸ್ ಅಭಿವೃದ್ಧಿಯಲ್ಲಿ ಪರಿಣತಿ ಪಡೆದಿದ್ದು, ಪುಣೆಯ ಕಲ್ಯಾಣನಗರದ ಸಾಫ್ಟ್​ವೇರ್ ಕಂಪನಿ ಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net