ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ವಿರುದ್ಧ ದೂರು ದಾಖಲಿಸಿದ ಹಿಂದೂ ಸೇನೆ! ಕಾರಣ ಹೀಗಿದೆ

ವಿಜಯವಾಣಿ - 2024-01-02T132554.339
Published on

ಹೊಸದಿಲ್ಲಿ: ಅಯೋಧ್ಯೆಯ ಶ್ರೀರಾಮಮಂದಿರದ ಕುರಿತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಉದ್ಧಟತನದ ಹೇಳಿಕೆ ನೀಡಿದ್ದಾರೆ ಎಂದು ಮಂಗಳವಾರ ಹಿಂದೂ ಸೇನೆ ದೆಹಲಿ ಪೊಲೀಸರಿಗೆ ದೂರು ನೀಡಿದೆ. ದೆಹಲಿ ಪೊಲೀಸ್ ಆಯುಕ್ತರಿಗೆ ಲಿಖಿತ ರೂಪದಲ್ಲಿ ದೂರನ್ನು ಸಲ್ಲಿಸಿದ ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ, ಓವೈಸಿ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲು ಕ್ರಮಗಳುವಂತೆ ತಿಳಿಸಿದ್ದಾರೆ.

ಭಾರತದಲ್ಲಿ ಕೋಮು ಸೌಹಾರ್ದತೆಯನ್ನು ಉಂಟುಮಾಡಲು ಪ್ರಯತ್ನಿಸುತ್ತಿರುವ ಸಾರ್ವಜನಿಕರಿಗೆ ಅಸಾದುದ್ದೀನ್ ಓವೈಸಿ ಉದ್ದೇಶಪೂರ್ವಕವಾಗಿ ಮತ್ತು ಬೇಜವಾಬ್ದಾರಿಯಿಂದ ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ ಎಂದು ಗುಪ್ತಾ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಜನವರಿ 22ರಂದು ಉತ್ತರಪ್ರದೇಶದ ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಯ ಬೆನ್ನಲ್ಲೇ ತೆಲಂಗಾಣದ ಹೈದರಾಬಾದ್‌ನ ಭವಾನಿ ನಗರದಲ್ಲಿ ಮಾತನಾಡಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, "ಕೇಂದ್ರದ ಚಟುವಟಿಕೆಗಳ ಬಗ್ಗೆ ಮುಸ್ಲಿಂ ಯುವಕರು ಜಾಗರೂಕರಾಗಿರಬೇಕು ಮತ್ತು ದೇಶಾದ್ಯಂತ ಮಸೀದಿಗಳು ಜನವಸತಿಯಲ್ಲಿ ಉಳಿಯಬೇಕು" ಎಂದು ಮನವಿ ಮಾಡಿದ್ದರು.

ಬಾಬರಿ ಮಸೀದಿಯನ್ನು ಉಲ್ಲೇಖಿಸಿ ಮಾತನಾಡಿದ ಓವೈಸಿ, "ಕಳೆದ 500 ವರ್ಷಗಳಿಂದ ಪವಿತ್ರ ಕುರಾನ್ ಪಠಣ ಮಾಡಿದ ಸ್ಥಳವು ಇಂದು ನಮ್ಮ ಕೈಯಲ್ಲಿಲ್ಲ. ಯುವಜನರೇ ನಾವು ನಮ್ಮ ಮಸೀದಿಯನ್ನು ಕಳೆದುಕೊಂಡಿದ್ದೇವೆ. ಅಲ್ಲಿ ಏನು ಮಾಡಲಾಗುತ್ತಿದೆ ಎಂಬುದನ್ನು ನೀವು ನೋಡುತ್ತಿದ್ದೀರಿ. ನಿಮ್ಮ ಹೃದಯದಲ್ಲಿ ನೋವಿಲ್ಲವೇ?" ಎಂದು ಓವೈಸಿ ಪ್ರಶ್ನಿಸಿದ್ದಾರೆ. ಈ ಹೇಳಿಕೆಯ ಬಳಿಕ ಈ ಬೆಳವಣಿಗೆ ಮುನ್ನೆಲೆಗೆ ಬಂದಿದೆ.

ಈ ಪ್ರಕರಣ ಕುರಿತು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net