ಹಿಂದು ಧರ್ಮದ ಬೇರು ಬಹು ಆಳ, ಪರಮೇಶ್ವರ್ ಗೆ ಪರಿಜ್ಞಾನವಿರಲಿ; ಮಾಜಿ ಸಿಎಂ ಡಿ.ವಿ.ಸದಾನಂದಗೌಡ ತಿರುಗೇಟು

Published on

ಬೆಂಗಳೂರು: ಹಿಂದು ಧರ್ಮದ ವ್ಯವಸ್ಥೆಯ ಮೂಲ ಸ್ವರೂಪ ರಾಮಾಯಣ, ಮಹಾಭಾರತದಲ್ಲಿದೆ, ಬೇರು ಬಹು ಆಳವಾಗಿದೆ. ಯಾರಿಂದಲೂ ಕಂಡು ಹಿಡಿಯಲು ಆಗುವುದಿಲ್ಲ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಗೂ ಕಂಡು ಹಿಡಿಯಲಾಗದು. ಅವರಿಗೂ ಪರಿಜ್ಞಾನವಿರಲಿ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ತಿರುಗೇಟು ನೀಡಿದರು.

ಮಲ್ಲೇಶ್ವರದ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಬಿಜೆಪಿ ಹಮ್ಮಿಕೊಂಡಿರುವ 'ನನ್ನ ಮಣ್ಣು, ನನ್ನ ದೇಶ' ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಹಿಂದು ಧರ್ಮದಲ್ಲಿ ಹುಟ್ಟಿದ ವ್ಯಕ್ತಿಗೆ ಆ ಬಗ್ಗೆ ಪರಿಜ್ಞಾನ ಇರಬೇಕು. ನಟ ಪ್ರಕಾಶ್ ರಾಜ್ ಸನಾತನ ಧರ್ಮದಲ್ಲಿ ಹುಟ್ಟಿಲ್ಲ, ಹಿರಿಯರು ಗೊತ್ತಿಲ್ಲ ಎಂದಿರುವುದು ಬಾಲಿಶ, ಹುಚ್ಚುತನದ ಪರಮಾವಧಿ ಎಂದು ಕಿಡಿಕಾರಿದರು.

ಬದಲಾವಣೆ ಸೂಕ್ತ

ಇಂಡಿಯಾ ಬದಲು ಭಾರತ್ ಎಂಬ ಹೆಸರು ಬದಲಾವಣೆ ಮಾಡಲೇಬೇಕು. ಸ್ವಾತಂತ್ರ್ಯ ದೊರೆತ ನಂತರ ಇಂಡಿಯಾ ಬದಲು ಭಾರತ್ ಎಂದು ನಾಮಕರಣ ಮಾಡಬೇಕಾಗಿತ್ತು. ನಮ್ಮ ಸಂವಿಧಾನದಲ್ಲೂ ಈ ಹೆಸರು ಪ್ರಸ್ತಾಪವಾಗಿದ್ದು, ಇಂಡಿಯಾ ಬದಲು ಭಾರತ್ ಎಂದು ಹೆಸರು ಮರು ನಾಮಕರಣ ಸೂಕ್ತವಾಗಿದೆ.

ಭಾರತ ಇವತ್ತು ಯಶಸ್ವಿಯಾಗಲು ಈ ಮಣ್ಣಿನ ಆಚಾರ, ವಿಚಾರ, ಸಂಸ್ಕಾರ ಕಾರಣವಾಗಿದೆ. ಭಾರತ ಎಂದು ಕರೆದರೆ ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದು ಡಿ.ವಿ.ಸದಾನಂದಗೌಡ ಹೇಳಿದರು. ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಶಹಪುರ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net