ಸಪ್ತಪದಿ ಸೇರಿದಂತೆ ಇತರೆ ಆಚರಣೆಗಳಿಲ್ಲದ ಹಿಂದೂ ಮದುವೆ ಅಸಿಂಧು: ಅಲಹಾಬಾದ್​ ಹೈಕೋರ್ಟ್​

Hindu Marriage
Published on

ಲಖನೌ: ಸಪ್ತಪದಿ ಸೇರಿದಂತೆ ಇತರೆ ಆಚರಣೆಗಳಿಲ್ಲದ ಹಿಂದೂ ಮದುವೆ ಅಸಿಂಧು ಎಂದು ಹೇಳಿರುವ ಅಲಹಾಬಾದ್​ ಹೈಕೋರ್ಟ್​, ಡಿವೋರ್ಸ್​ ನೀಡದೇ ಶಾಸ್ತ್ರೋಕ್ತವಾಗಿ ಬೇರೊಂದು ಮದುವೆಯಾಗಿದ್ದಾಳೆ ಎಂದು ಆರೋಪಿಸಿ ಬೇರ್ಪಟ್ಟಿರುವ ಪತ್ನಿಯ ವಿರುದ್ಧ ವ್ಯಕ್ತಿಯೊಬ್ಬ ದಾಖಲಿಸಿದ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸಿದೆ.

ಸ್ಮೃತಿ ಸಿಂಗ್ ಎಂಬುವರು ಸಲ್ಲಿಸಿದ ಅರ್ಜಿಯನ್ನು ಅಂಗೀಕರಿಸಿ, ಅವರ ಪತಿಯ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಸಂಜಯ್ ಕುಮಾರ್ ಸಿಂಗ್, ವಿವಾಹಕ್ಕೆ ಸಂಬಂಧಿಸಿದಂತೆ, ವಿವಾಹವನ್ನು ಸರಿಯಾದ ವಿಧಿವಿಧಾನಗಳೊಂದಿಗೆ ಮತ್ತು ಸರಿಯಾದ ರೂಪದಲ್ಲಿ ಆಚರಿಸುವುದನ್ನು 'ಶಾಸ್ತ್ರೋಕ್ತ​' ಎಂಬ ಪದ ಚೆನ್ನಾಗಿ ಅರ್ಥೈಸುತ್ತದೆ. ಮದುವೆಯನ್ನು ಆಚರಿಸದಿದ್ದರೆ ಅಥವಾ ಸರಿಯಾದ ವಿಧಿವಿಧಾನಗಳು ಮತ್ತು ಸರಿಯಾದ ರೂಪದಲ್ಲಿ ನಡೆಸದಿದ್ದರೆ, ಅದನ್ನು 'ಶಾಸ್ತ್ರೋಕ್ತ' ಎಂದು ಹೇಳಲಾಗುವುದಿಲ್ಲ ಎಂದರು.

ಮದುವೆಯು ಮಾನ್ಯವಾದ ಮದುವೆಯಲ್ಲದಿದ್ದರೆ, ಕಾನೂನಿನ ದೃಷ್ಟಿಯಲ್ಲಿ ಅದು ಮದುವೆಯಲ್ಲ. ಹಿಂದೂ ಕಾನೂನಿನ ಅಡಿಯಲ್ಲಿ 'ಸಪ್ತಪದಿ' ಸಮಾರಂಭವು ಮಾನ್ಯವಾದ ವಿವಾಹವನ್ನು ರೂಪಿಸಲು ಅಗತ್ಯವಾದ ಅಂಶಗಳಲ್ಲಿ ಒಂದಾಗಿದೆ. ಆದರೆ ಪ್ರಸ್ತುತ ಪ್ರಕರಣದಲ್ಲಿ ಸಾಕ್ಷ್ಯಗಳ ಕೊರತೆಯಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಉಲ್ಲೇಖಿಸಿದೆ.

ಹಿಂದೂ ವಿವಾಹ ಕಾಯಿದೆ 1955ರ ಸೆಕ್ಷನ್ 7ರ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದ ನ್ಯಾಯಾಲಯ, ಹಿಂದೂ ವಿವಾಹವನ್ನು ಯಾವುದೇ ಪಕ್ಷಗಳ ಸಾಂಪ್ರದಾಯಿಕ ವಿಧಿಗಳು ಮತ್ತು ಸಮಾರಂಭಗಳಿಗೆ ಅನುಗುಣವಾಗಿ ನಡೆಸಬಹುದು ಮತ್ತು ಎರಡನೆಯದಾಗಿ, ಅಂತಹ ವಿಧಿಗಳು ಮತ್ತು ಸಮಾರಂಭಗಳಲ್ಲಿ 'ಸಪ್ತಪದಿ' (ಪವಿತ್ರ ಅಗ್ನಿಯ ಸುತ್ತಲೂ ವರ ಮತ್ತು ವಧು ಜಂಟಿಯಾಗಿ ಏಳು ಹೆಜ್ಜೆಗಳನ್ನು ಹಾಕುವುದು) ಸೇರಿದೆ, ಇದು ಏಳನೇ ಹೆಜ್ಜೆ ಇಟ್ಟಾಗ ಮದುವೆಯನ್ನು ಪೂರ್ಣಗೊಳಿಸುತ್ತದೆ ಮತ್ತು ಬಂಧವನ್ನು ಗಟ್ಟಿಗೊಳಿಸುತ್ತದೆ.

ಅರ್ಜಿದಾರರಾದ ಸ್ಮೃತಿ ಸಿಂಗ್ ಅವರು 2017ರಲ್ಲಿ ಸತ್ಯಂ ಸಿಂಗ್ ಅವರೊಂದಿಗೆ ಶಾಸ್ತ್ರೋಕ್ತವಾಗಿ ಮದುವೆಯಾದರು. ಆದರೆ ಹಗೆತನದ ಸಂಬಂಧದಿಂದಾಗಿ ಅವರು ಅತ್ತೆಯ ಮನೆಯನ್ನು ತೊರೆದು ವರದಕ್ಷಿಣೆ ಕಿರುಕುಳದ ಆರೋಪದ ಮೇಲೆ ಎಫ್ಐಆರ್ ದಾಖಲಿಸಿದರು. ತನಿಖೆ ನಂತರ ಪೊಲೀಸರು ಪತಿ ಮತ್ತು ಅತ್ತೆಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಬಳಿಕ ಸತ್ಯಂ ತನ್ನ ಪತ್ನಿಯ ವಿರುದ್ಧ ದ್ವಿಪತ್ನಿತ್ವದ ಆರೋಪ ಮಾಡಿ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಮಿರ್ಜಾಪುರದ ಸರ್ಕಲ್ ಆಫೀಸರ್ ಸದರ್ ಅವರು ಕೂಲಂಕುಷವಾಗಿ ಪರಿಶೀಲಿಸಿದರು ಮತ್ತು ಸ್ಮೃತಿ ವಿರುದ್ಧದ ದ್ವಿಪತ್ನಿತ್ವದ ಆರೋಪಗಳು ಸುಳ್ಳು ಎಂದು ಕಂಡುಬಂದಿದೆ.

ಇದಾದ ಬಳಿಕ ಸತ್ಯಂ ಅವರು ಡಿವೋರ್ಸ್​ ನೀಡದೆ ತನ್ನ ಪತ್ನಿ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ ಎಂದು ಪತ್ನಿಯ ವಿರುದ್ಧ 2021ರ ಸೆಪ್ಟೆಂಬರ್ 20ರಂದು ದೂರು ದಾಖಲಿಸಿದರು. 2022ರ ಏಪ್ರಿಲ್ 21ರಂದು ಮಿರ್ಜಾಪುರದ ಮ್ಯಾಜಿಸ್ಟ್ರೇಟ್ ಸ್ಮೃತಿಗೆ ಸಮನ್ಸ್​ ನೀಡಿತು. ಬಳಿಕ ಸ್ಮೃತಿ ಸಮನ್ಸ್ ಆದೇಶ ಮತ್ತು ಪ್ರಕರಣದ ಸಂಪೂರ್ಣ ಪ್ರಕ್ರಿಯೆಗಳನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿಯನ್ನು ಸಲ್ಲಿಸಿದರು. ಇದೀಗ ಪತಿ ಮಾಡಿದ ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದಿರುವುದರಿಂದ ಪ್ರಕರಣವನ್ನು ನ್ಯಾಯಾಲಯ ರದ್ದುಗೊಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net