

ಶಿರಾಳಕೊಪ್ಪ: ಸೊರಬ ರಸ್ತೆಯಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದ ಹಿಂದು ಮಹಾಗಣಪತಿಯ ಮೆರವಣಿಗೆ ಮಂಗಳವಾರ ಅದ್ದೂರಿಯಾಗಿ ನೆರವೇರಿತು. ಭಕ್ತಿ, ಸಂಭ್ರಮ, ಸಾಂಸ್ಕೃತಿಕ ವೈವಿಧ್ಯತೆಯ ಸಂಯೋಜನೆಯಾಗಿ ನಡೆದ ಈ ಮೆರವಣಿಗೆಗೆ ಸಾವಿರಾರು ಭಕ್ತರು ಸಾಕ್ಷಿಯಾದರು.
ಸೊರಬ ರಸ್ತೆಯಿಂದ ಆರಂಭವಾದ ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳ ನೃತ್ಯ, ಗೊಂಬೆ ಕುಣಿತ, ಮಂಗಳೂರಿನ ನಾಸಿಕ್ ಡೋಲ್ ತಂಡದ ನೃತ್ಯ ಹಾಗೂ ಡಿಜೆ ಸೌಂಡ್ ಸಿಸ್ಟಮ್ ಸಡಗರ ಹೆಚ್ಚಿಸಿತು. ಸಂಗೀತದ ತಾಳಕ್ಕೆ ಮಹಿಳೆಯರು, ಯುವಕರು ಉತ್ಸಾಹದಿಂದ ಕುಣಿದರು. ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ನೃತ್ಯ ಮಾಡಿದರು.
ಮೆರವಣಿಗೆಯಲ್ಲಿ ಬಣ್ಣ ಬಣ್ಣದ ಗೊಂಬೆಗಳು, ತಾಳಮದ್ದಳೆ ಹಾಗೂ ಸಿಡಿಮದ್ದು ಪ್ರದರ್ಶನ ಭಕ್ತರನ್ನು ರಂಜಿಸಿತು. ಭಕ್ತಿಗೀತೆಗಳು ಮೊಳಗಿದವು. ಶಿರಾಳಕೊಪ್ಪದ ಬೀದಿಗಳಲ್ಲಿ ಗಣಪತಿ ಬಪ್ಪಾ ಮೋರಯಾ ಘೋಷಣೆಗಳು ಮುಗಿಲು ಮುಟ್ಟಿದವು.
ಸ್ಥಳೀಯ ಯುವಕ ಮಲ್ಲಿಕ್ ರೆಡ್ಡಿ ಅವರ ಹುಲಿ ಪಟ್ಟೆ ಕುಣಿತ ಎಲ್ಲರ ಗಮನ ಸೆಳೆಯಿತು. ಮಕ್ಕಳು, ಯುವಕರು, ಮಹಿಳೆಯರು ಕುಣಿತವನ್ನು ನೋಡಲು ಗುಂಪುಗೂಡಿದರು. ಜನಪದ ಸೊಗಡಿಗೆ ಹುಲಿ ಕುಣಿತ ಮೆರವಣಿಗೆಯ ಅದ್ದೂರಿಯನ್ನು ಹೆಚ್ಚಿಸಿತು.
ಮೆರವಣಿಗೆಗೆ ಸ್ಥಳೀಯರು ಸಹಕಾರ ನೀಡಿದರು. ಅನೇಕ ಸಾಮಾಜಿಕ ಸಂಘಟನೆಗಳು ತೀರ್ಥ, ನೀರಿನ ಪ್ಯಾಕೆಟ್, ತಂಪುಪಾನೀಯಗಳನ್ನು ವಿತರಿಸಿದವು. ವಿಶೇಷವಾಗಿ ಮುಸ್ಲಿಮರು ಪಾನಕ ವಿತರಿಸಿ ಸೌಹಾರ್ದತೆ ಮೆರೆದರು. ಎಲ್ಲೆಡೆ ಭಕ್ತರ ಗುಂಪುಗಳು ಗಣೇಶನ ಜೈಕಾರ ಮೊಳಗಿಸಿದರು. ಗಣಪತಿ ವಿಶೇಷ ಪೂಜೆ ಸಲ್ಲಿಸಿ ಸೊರಬ ರಸ್ತೆಯ ವಡ್ಡಿನಕೆರೆಯಲ್ಲಿ ಜಲಸ್ತಂಭನ ಮಾಡಲಾಯಿತು. ಎಲ್ಲಿಯೂ ಅಹಿತಕರ ಘಟನೆಗೆ ಆಸ್ಪದವಾಗದಂತೆ ಪೊಲೀಸರು ಭದ್ರತೆ ಒದಗಿಸಿದ್ದರು.