ಭಾರತದ ಭಾಷೆ ಹಿಂದಿ.. ಕನ್ನಡ ಮಾತಾಡೋಲ್ಲ; ಟೋಲ್​ ಸಿಬ್ಬಂದಿ ಕಿರಿಕ್​ ಬಳಿಕ ಏನಾಯ್ತು ನೀವೆ ನೋಡಿ..

Untitled-design-2024-09-17T175208.311
Published on

ಕರ್ನಾಟಕದಲ್ಲಿ ಕನ್ನಡ ಮಾತನಾಡುವವರು ಕಡಿಮೆಯಾಗಿದ್ದಾರೆ. ಕನ್ನಡ ಉಳಿಸಿ ಬೆಳಸಿ ಎಂಬ ಕೂಗು ಆಗಾಗ್ಗೆ ಕೇಳಿಬರುತ್ತಿರುತ್ತದೆ. ಹೊರಗಿನಿಂದ ಬಂದವರು ಕನ್ನಡ ಕಲಿಯಬೇಕು ಎಂಬ ಮಾತುಗಳು ಬರುತ್ತಿರುತ್ತವೆ. ಪದೇಪದೆ ಕಂಡುಬರುವ ಕಾದಾಟಗಳು ಕನ್ನಡಿಗರನ್ನು ಮತ್ತಷ್ಟು ಕೆರಳುವಂತೆ ಮಾಡುತ್ತವೆ. ಕನ್ನಡ ಬರದೆ ಮಾತನಾಡದೆ ಇರುವುದು ಬೇರೆ, ಆದರೆ ಕನ್ನಡವನ್ನು ನಾವು ಮಾತನಾಡುವಿದಲ್ಲ ಎಂದು ಹೇಳುವುದು ಬೇರೆ. ಈ ಮಾತಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿರುವುದು ಕರ್ನಾಟಕ -ಮಹಾರಾಷ್ಟ್ರ ಗಡಿಯಲ್ಲಿರುವ ಟೋಲ್​​ನಲ್ಲಿ ಎನ್ನಲಾಗುತ್ತಿದೆ.

ವೈರಲ್​ ವಿಡಿಯೋದಲ್ಲಿ ಟೋಲ್​​ ಸಿಬ್ಬಂದಿಯನ್ನು ಕನ್ನಡದಲ್ಲಿ ಮಾತನಾಡುವಂತೆ ಹೇಳಲಾಗುತ್ತದೆ. ಕಾರಿನಲ್ಲಿದ್ದ ವ್ಯಕ್ತಿ ಕೇಳಿದ ಪ್ರಶ್ನೆಗೆ ಟೋಲ್​ ಸಿಬ್ಬಂದಿ ಕನ್ನಡ ಮಾತನಾಡುವುದಿಲ್ಲ. ಇಂಡಿಯಾ ಭಾಷೆ ಹಿಂದಿ ಅದನ್ನೇ ಮಾತನಾಡುತ್ತೇನೆ. ಇದು ಕೇಂದ್ರದ ಟೋಲ್​​, ಮಹಾರಾಷ್ಟ್ರದಲ್ಲಿ ಮರಾಠಿ, ತಮಿಳುನಾಡಿನಲ್ಲಿ ತಮಿಳು, ಕರ್ನಾಟಕದಲ್ಲಿ ಕನ್ನಡ ಈ ರೀತಿ ಮಾತನಾಡಲು ಆಗುವುದಿಲ್ಲ,. ಹಿಂದಿಯಷ್ಟೆ ಮಾತನಾಡುತ್ತೇನೆ ಎಂದು ಹೇಳುತ್ತಾನೆ.
ಸಿಬ್ಬಂದಿಯ ಈ ವರ್ತನೆ ಆ ವ್ಯಕ್ತಿಯ ಕೋಪವನ್ನು ಹೆಚ್ಚಿಸುತ್ತದೆ. ಕರ್ನಾಟಕದಲ್ಲಿ ಇದ್ದು ಕನ್ನಡ ಮಾತನಾಡೋದಿಲ್ಲ ಅಂತೀಯಾ ಎಂದು ಕೇಳುತ್ತಾರೆ.

ಅಲ್ಲೆ ಇದ್ದ ಮತ್ತೊಬ್ಬರು ಕನ್ನಡ ಬರುವುದಿಲ್ಲ ಎನ್ನುತ್ತಿದ್ದಾರೆ ಅಲ್ವಾ ಎಂದು ಹಿಂದಿಯಲ್ಲಿ ಕೇಳುತ್ತಾರೆ. ಅದಕ್ಕೆ ಕಾರಿನಲ್ಲಿದ್ದವರು ಸಿಬ್ಬಂದಿ ಕನ್ನಡ ಬರುವುದಿಲ್ಲ ಎಂದು ಹೇಳುತ್ತಿಲ್ಲ, ಕನ್ನಡ ಮಾತನಾಡೋದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಹೇಳುತ್ತಾರೆ. ಆ ಟೋಲ್​ ಸಿಬ್ಬಂದಿ ತನ್ನ ಮೊಬೈಲ್​ನಲ್ಲಿ ದೃಶ್ಯಗಳನ್ನು ರೆಕಾರ್ಡ್​ ಮಾಡುತ್ತಿರುವುದನ್ನು ಹಾಗೂ ವ್ಯಕ್ತಿಯ ಜತೆ ಜಗಳಕ್ಕೆ ಸಿದ್ಧನಾಗಿರುವುದನ್ನು ನೋಡಬಹುದಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ 73 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ವೀಕ್ಷಿಸಿದ್ದಾರೆ. 200 ಮಂದಿ ಲೈಕ್​ ಮಾಡಿದ್ದು ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ. ಈ ಪೋಸ್ಟ್​​ಗೆ ವಿವಿಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಸ್ಥಳೀಯ ಭಾಷೆ ಮಾತನಾಡಲು ಬರದಿದ್ದರೆ ತಮ್ಮ ರಾಜ್ಯಗಳಲ್ಲೇ ವಾಸಿಸಬಹುದು, ಇದರಲ್ಲಿ ಬಲವಂತ ಪಡಿಸುತ್ತಿರುವುದು ಸ್ಪಷ್ಟವಾಗಿದೆ, ಕನ್ನಡಿಗ ಚಾಲಕ ವಾದ ಬಿಟ್ಟು ಮುಂದೆ ಹೋಗಬೇಕಿತ್ತು, ಟೋಲ್ ಸಿಬ್ಬಂದಿಯನ್ನು ಕನ್ನಡದಲ್ಲಿ ಮಾತನಾಡುವಂತೆ ಒತ್ತಾಯಿಸುವುದು ಸ್ವೀಕಾರಾರ್ಹವಲ್ಲ, ಬೆಂಗಳೂರಿಗೆ ಬರುವ ಪ್ರತಿಯೊಬ್ಬರಿಗೂ ನೀವು ಕನ್ನಡ ಮಾತನಾಡದಿದ್ದರೆ ಅಥವಾ ಕನ್ನಡ ಮಾತನಾಡಲು ಪ್ರಯತ್ನಿಸದಿದ್ದರೆ ಬೆಂಗಳೂರಿನಲ್ಲಿ ನಿಮ್ಮನ್ನು ಹೊರಗಿನವರು ಎಂದು ಪರಿಗಣಿಸಲಾಗುತ್ತದೆ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.

ಸ್ವಾತಂತ್ರ್ಯ ನಂತರ ಪ್ರಾಂತ್ಯ ಹಾಗೂ ಭಾಷೆಗಳಿಗೆ ಅನುಗುಣವಾಗಿ ಭಾಷಾವಾರು ಪ್ರಾಂತ್ಯಗಳನ್ನು ರಚಿಸಲಾಗಿದೆ. ಇಂದು ಅದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸುವ ಆತಂಕ ಎಲ್ಲರನ್ನು ಕಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net