

ಶಿಮ್ಲಾ: ವಿಶ್ವದಲ್ಲೇ ಅತಿ ಉದ್ದವಾದ ಮತ್ತು ಕುದುರೆ ಲಾಳದ ಆಕಾರದ ಅಟಲ್ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಅ. 3 ಶನಿವಾರ) ಬೆಳಗ್ಗೆ 10.20ರ ಸುಮಾರಿಗೆ ಲೋಕಾರ್ಪಣೆಗೊಳಿಸಿ ಇತಿಹಾಸ ಬರೆದರು. ಹಿಮಾಲಚ ಪ್ರದೇಶದ ರೋಹ್ಟಾಂಗ್ನಲ್ಲಿ ನಿರ್ಮಿಸಲಾಗಿರುವ ಸುರಂಗ ಮಾರ್ಗವೂ ಲೇಹ್ ಮತ್ತು ಮನಾಲಿ ನಡುವೆ ಸುಮಾರು 46 ಕಿ.ಮೀ ಅಂತರವನ್ನು ತಗ್ಗಿಸಲಿದೆ.
ಟೇಪ್ ಕತ್ತರಿಸುವ ಮೂಲಕ ಪ್ರಧಾನಿ ಮೋದಿ ಸುರಂಗ ಉದ್ಘಾಟಿಸಿದರು. ಬಳಿಕ ಸುರಂಗದ ಒಳಹೊಕ್ಕಿ ಪರಿಶೀಲಿಸಿದರು. ಈ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾಣೆ ಹಾಗೂ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಸುರಂಗ ಉದ್ಘಾಟನೆಗಾಗಿ ವಿಶೇಷ ವಿಮಾನದಲ್ಲಿ ಮನಾಲಿಗೆ ಆಗಮಿಸಿದರು. ಜತೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಇದ್ದರು.
ಸುರಂಗ ಕುರಿತು ಜನತೆಗೆ ಸಂದೇಶ ರವಾನಿಸಿರುವ ಪ್ರಧಾನಿ ಮೋದಿ, ಈ ಅಭಿವೃದ್ಧಿ ಯೋಜನೆನ್ನು ನೇರವಾಗಿಯೇ ಉದ್ಘಾಟಿಸುತ್ತೇನೆ. ಬಹುದೊಡ್ಡ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಬೇಕೆಂದು ಬಯಸಿದ್ದೆವು. ಆದರೆ, ಕರೊನಾ ವೈರಸ್ನಿಂದಾಗಿ ಚಿಕ್ಕದಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಗಡಿ ಭದ್ರತಾ ದೃಷ್ಟಿಯಿಂದ ಈ ಸುರಂಗವೂ ಬಹು ದೊಡ್ಡ ಸಂದೇಶವನ್ನು ರವಾನಿಸುತ್ತದೆ ಎಂದು ಮೋದಿ ಹೇಳಿದ್ದಾರೆ.
ಉದ್ಘಾಟನೆಗೂ ಮುನ್ನ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಮಾತನಾಡಿ, ನಾವು ಎಲ್ಲ ರೀತಿಯ ತಯಾರಿಯನ್ನು ಮಾಡಿಕೊಂಡಿದ್ದು, ಪ್ರಧಾನಿ ಮೋದಿ ಅವರಿಗೆ ಕಾಯುತ್ತಿದ್ದೇವೆ. ಇದು ಹಿಮಾಚಲ ಪ್ರದೇಶದ ಜನರ ಅತ್ಯಂತ ಸಂತಸದ ಕ್ಷಣವಾಗಿದೆ. ಇದೊಂದು ಐತಿಹಾಸಿಕ ಕ್ಷಣವಾಗಿದೆ. ಈ ಸುರಂಗವೂ ರಾಷ್ಟ್ರೀಯ ಭದ್ರತಾ ದೃಷ್ಟಿಕೋನದಿಂದ ಮಹತ್ವದ್ದಾಗಿದೆ. ಅಲ್ಲದೆ, ಜನರ ಪ್ರಯಾಣಕ್ಕೂ ಸಹಕಾರಿಯಾಗಿದೆ ಎಂದರು.
ಇನ್ನು ಕಾರ್ಯಕ್ರಮದಲ್ಲಿ ಸುಮಾರು 200 ಗಣ್ಯರು ಭಾಗವಹಿಸಲಿದ್ದಾರೆ. ಶುಕ್ರವಾರವಷ್ಟೇ ಅಟಲ್ ಸುರಂಗಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಿ, ಉದ್ಘಾಟನಾ ಕಾರ್ಯಕ್ರಮದ ತಯಾರಿಯನ್ನು ವೀಕ್ಷಿಸಿದ್ದರು.
ಅಟಲ್ ಸುರಂಗ ಕುರಿತಾದ 10 ಪ್ರಮುಖಾಂಶಗಳು ಹೀಗಿವೆ...
1. ಅಟಲ್ ಸುರಂಗವನ್ನು ನಿರ್ಮಿಸುವ ತೀರ್ಮಾನವನ್ನು 2000, ಜೂನ್ 3ರಂದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತೆಗೆದುಕೊಂಡಿದ್ದರು. 2002, ಮೇ 26ರಂದು ಸುರಂಗ ಮಾರ್ಗಕ್ಕೆ ಶಂಕುಸ್ಥಾಪನೆ ನೇರವೇರಿಸಲಾಗಿತ್ತು.
2. 2019, ಡಿಸೆಂಬರ್ 25ರಂದು ರೋಹ್ಟಾಂಗ್ ಸುರಂಗ ಮಾರ್ಗವನ್ನು ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥ "ಅಟಲ್ ಸುರಂಗ" ಎಂದು ಮರುನಾಮಕರಣ ಮಾಡಲಾಯಿತು.
3. ಅಲಟ್ ಸುರಂಗವೂ ಮನಾಲಿಯಿಂದ 25 ಕಿ.ಮೀ ದೂರದಲ್ಲಿ 3,060 ಮೀಟರ್ ಎತ್ತರದಲ್ಲಿ ನಿರ್ಮಾಣವಾಗಿದೆ.
4. ಸುರಂಗವೂ ಸುಮಾರು 9.02 ಕಿ.ಮೀ ಉದ್ದವಿದೆ. ಅಲ್ಟ್ರಾ-ಮಾಡರ್ನ್ ವಿಶೇಷತೆಗಳಿಂದ ಹಿಮಾಲಯದ ಪಿರ್ ಪಂಜಲ್ ಶ್ರೇಣಿಯಲ್ಲಿ ನಿರ್ಮಿಸಲಾಗಿದೆ.
5. ವಿಶ್ವದಲ್ಲೇ ಅತಿ ಉದ್ದದ ಹೆದ್ದಾರಿ ಸುರಂಗ ಎಂಬ ಖ್ಯಾತಿಗೆ ಅಟಲ್ ಸುರಂಗ ಮಾರ್ಗ ಭಾಜನವಾಗಿದ್ದು, ಇದು ಮನಾಲಿ ಮತ್ತು ಲೇಹ್ ನಡುವೆ 46 ಕಿ.ಮೀ ಅಂತರವನ್ನು ತಗ್ಗಿಸಲಿದ್ದು, ಪ್ರಯಾಣದ ದೂರ 4 ರಿಂದ 5 ಗಂಟೆ ತೆಗೆದುಕೊಳ್ಳಲಿದೆ.
6. ಸುರಂಗವೂ ಕುದರೆ ಲಾಳದ ಆಕಾರದಲ್ಲಿದೆ. ಸಿಂಗಲ್ ಟ್ಯೂಬ್ ಡಬಲ್ ಲೇನ್ ಸುರಂಗವು 8 ಮೀಟರ್ ರಸ್ತೆಮಾರ್ಗವನ್ನು ಹೊಂದಿದೆ ಮತ್ತು 5.525 ಮೀಟರ್ ಓವರ್ ಹೆಡ್ ಕ್ಲಿಯರೆನ್ಸ್ ಹೊಂದಿದೆ.
7. ಗಂಟೆಗೆ ಗರಿಷ್ಠ 80 ಕಿ.ಮೀ ವೇಗದಲ್ಲಿ ದಿನಕ್ಕೆ 3,000 ಕಾರುಗಳು ಮತ್ತು 1,500 ಟ್ರಕ್‌ಗಳ ಸಂಚಾರ ಸಾಂದ್ರತೆಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.
8. ಸುರಂಗವೂ 10.5 ಮೀಟರ್ ಅಗಲವಿದೆ ಮತ್ತು 3.6 X 2.25 ಮೀಟರ್ ಅಗ್ನಿ ನಿರೋಧಕ ತುರ್ತು ಪ್ರಗತಿ ಸುರಂಗವನ್ನು ಮುಖ್ಯ ಸುರಂಗದಲ್ಲಿಯೇ ನಿರ್ಮಿಸಲಾಗಿದೆ.
9. ಸಿಸಿಟಿವಿ ಕ್ಯಾಮೆರಾ, ಯಾವುದೇ ತುರ್ತು ಪರಿಸ್ಥಿತಿಗಾಗಿ ಪ್ರತಿ 150 ಮೀಟರ್ಗೆ ಟೆಲಿಫೋನ್ ಸಂಪರ್ಕ, ಪ್ರತಿ 60 ಮೀಟರ್ಗೆ ಅಗ್ನಿಶಾಮಕ ಯಾಂತ್ರಿಕ ವ್ಯವಸ್ಥೆ ಮತ್ತು ಸ್ವಯಂ ಘಟನೆ ಪತ್ತೆ ವ್ಯವಸ್ಥೆ ಸೇರಿದಂತೆ ಸುರಂಗದಲ್ಲಿ ವಿವಿಧ ರೀತಿಯ ಭದ್ರತಾ ಸಾಧನಗಳಿವೆ.
10. ಪ್ರತಿ 25 ಮೀಟರ್‌ನಲ್ಲಿ ಸ್ಥಳಾಂತರಿಸುವ ದೀಪಗಳು ಮತ್ತು ನಿರ್ಗಮನ ಚಿಹ್ನೆಗಳು ಮತ್ತು ವಿಸ್ತರಣಾ ವ್ಯವಸ್ಥೆಗಳಿವೆ.