

ನವದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿಗೆ ಹಿಮಾಚಲ ಪ್ರದೇಶದಲ್ಲಿ ಹಿನ್ನಡೆಯಾಗುತ್ತಿದೆ. ಆಡಾಳಿತಾರೂಢ ಬಿಜೆಪಿಗೆ ನೆಕ್ ಟು ನೆಕ್ ಪೈಟ್ ಕೊಟ್ಟ ಕಾಂಗ್ರೆಸ್, ಅಧಿಕಾರದ ಗದ್ದುಗೆ ಏರುವ ಸನಿಹದಲ್ಲಿದೆ. ಗೆಲುವಿನತ್ತ ಮುನ್ನುಗುತ್ತಿರುವ ಸಂಭ್ರಮದ ಜತೆಗೆ ಆಪರೇಷನ್ ಕಮಲದ ಭೀತಿಯೂ ಕಾಂಗ್ರೆಸ್ಗೆ ಆವರಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಛತ್ತೀಸ್ಗಢಕ್ಕೆ ಸ್ಥಳಾಂತರಿಸಿದೆ.
ನವೆಂಬರ್ 12ರಂದು ಹಿಮಾಚಲಪ್ರದೇಶ ವಿಧಾನಸಭೆ ಚುನಾವಣೆ ನಡೆದಿತ್ತು. ಇಂದು(ಡಿ.8) ಮತ ಎಣಿಕೆ ನಡೆಯುತ್ತಿದ್ದು, ಒಟ್ಟು 68 ಕ್ಷೇತ್ರಗಳು ರಾಜ್ಯದಲ್ಲಿದ್ದು, ಮ್ಯಾಜಿಕ್ ನಂಬರ್ 35 ಗೆಲ್ಲಬೇಕಿದೆ. ಮಧ್ಯಾಹ್ನ 12ರ ವರೆಗಿನ ಮಾಹಿತಿಯಂತೆ ಕಾಂಗ್ರೆಸ್ 38 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 27 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. ಮೂವರು ಸ್ವತಂತ್ರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.
1985ರಿಂದ ಇಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಾಗುತ್ತಾ ಬಂದಿದೆ. ಸದ್ಯ ಬಿಜೆಪಿ ಅಧಿಕಾರದಲ್ಲಿದ್ದು, ಕಾಂಗ್ರೆಸ್ನಿಂದ ಪ್ರಬಲ ಪೈಪೋಟಿ ಎದುರಿಸಿದೆ. ಚುನಾವಣೋತ್ತರ ಸಮೀಕ್ಷೆಗಳಲ್ಲಿ ಕೂಡ ಯಾರೂ ಬೇಕಾದರೂ ಅಧಿಕಾರಕ್ಕೆ ಬರಬಹುದು ಎಂಬ ವರದಿಗಳು ಬಂದಿವೆ. ಕಳೆದ ಬಾರಿ ಬಿಜೆಪಿ 44 ಸೀಟುಗಳನ್ನು ಗೆದ್ದಿತ್ತು. 21 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ತವರು ರಾಜ್ಯ ಹಿಮಾಚಲ ಪ್ರದೇಶ.