

ಚಂಡೀಗಢ: ಗ್ರಾಮದ ಎಲ್ಲರಿಗೂ ಕರೊನಾ ಪಾಸಿಟಿವ್ ಇರುವಾಗ ಅದೇ ಗ್ರಾಮದ ಒಬ್ಬನೇ ಒಬ್ಬ ವ್ಯಕ್ತಿಗೆ ಮಾತ್ರ ಸೋಂಕು ತಗುಲದ ಕುತೂಹಲಕಾರಿ ಪ್ರಕರಣ ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿಟಿ ಜಿಲ್ಲೆಯ ಗ್ರಾಮವೊಂದರಲ್ಲಿ ಕಂಡುಬಂದಿದೆ.
ಶೂನ್ಯಕ್ಕಿಂತ ಕಡಿಮೆ ತಾಪಮಾನ ಹಾಗೂ ಕರೊನಾಗೆ ಅನುಕೂಲಕರ ವಾತಾವರಣವಿರುವ ಹಿಮಬೆಟ್ಟಗಳ ವಲಯದಲ್ಲೇ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಥೋರಂಗ್ ಗ್ರಾಮ ಎದುರಿಸಿದೆ. ಇಡೀ ಗ್ರಾಮವೇ ಕರೊನಾ ಕರಿನೆರಳಿನಲ್ಲಿ ಇರುವಾಗ ಭೂಷಣ್ ಠಾಕೂರ್ (52) ಎಂಬ ವ್ಯಕ್ತಿಯ ಹತ್ತಿರವೂ ಕರೊನಾ ಸುಳಿಯದೇ ಇರುವುದು ಅಚ್ಚರಿಯ ಸಂಗತಿಯೇ ಸರಿ.
ಅಂದಹಾಗೆ ಠಾಕೂರ್ ಅವರು ಕರೊನಾದಿಂದ ತಪ್ಪಿಸಿಕೊಳ್ಳಲು ಯಾವುದೇ ಕರಾಮತ್ತು ಮಾಡಿಲ್ಲ. ಬದಲಾಗಿ ಎಲ್ಲರಂತೆ ಸಾಮಾನ್ಯ ರಕ್ಷಣಾ ತಂತ್ರಗಳನ್ನೇ ಅನುಸರಿಸುವ ಮೂಲಕ ಕರೊನಾದಿಂದ ಅಂತರ ಕಾಪಾಡಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಠಾಕೂರ್, ನನಗೆ ಕರೊನಾ ನೆಗೆಟಿವ್ ಬರಲು ಪ್ರಮುಖ ಕಾರಣವೆಂದರೆ ನಾನು ಚಾಚೂ ತಪ್ಪದೇ ಮಾಸ್ಕ್, ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದೆ ಎಂದು ತಿಳಿಸಿದರು.
ನನ್ನ ಕುಟುಂಬದ ಆರು ಜನರಿಗೆ ಕರೊನಾ ಪಾಸಿಟಿವ್ ಇದೆ. ಇದು ತಿಳಿದ ತಕ್ಷಣ ನನ್ನಷ್ಟಕ್ಕೆ ನಾನೇ ಪ್ರತ್ಯೇಕವಾದೆ. ಪ್ರತ್ಯೇಕವಾದ ಕೊಠಡಿಯಲ್ಲಿ ನಾನೇ ಅಡುಗೆ ಮಾಡಿಕೊಳ್ಳುತ್ತಿದ್ದೆ. ಮೊದಲೇ ನಮ್ಮದು ಶೀತವಲಯ ಆಗಿರುವುದರಿಂದ ಚಳಿ ನಿವಾರಣೆಗೆ ಬೆಂಕಿ ಕಾಯಲು ಎಲ್ಲರು ಒಂದೆಡೆ ಸೇರಿದಾಗ ಕರೊನಾ ಹರಡಿದೆ ಎಂದು ಠಾಕೂರ್ ಹೇಳಿದರು.
ಥೋರಂಗ್ ಗ್ರಾಮ ಗ್ರಾಮದಲ್ಲಿ ಸುಮಾರು 160 ಜನರಿದ್ದಾರೆ. ಚಳಿಯ ಕಾರಣ ಗ್ರಾಮದ ಜನರು ಬೇರೆ ಪ್ರದೇಶಗಳಲ್ಲಿ ವಲಸೆ ಹೋಗಿದ್ದಾರೆ. ಉಳಿದ 42 ಮಂದಿಯಲ್ಲಿ ನವೆಂಬರ್ 13ರಂದು 41 ಜನರಿಗೆ ಕೆರೊನಾ ಪಾಸಿಟಿವ್ ಆಗಿದೆ. ಶನಿವಾರ ಮತ್ತೆ ಪರೀಕ್ಷಿಸಿದಾಗ ಕೆಲವರಿಗೆ ನೆಗೆಟಿವ್ ಬಂದಿದೆ. ಅ. 13ರಂದು ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಕರೊನಾ ಹರಡು ಇದೇ ಕಾರಣವಾಗಿರಬಹುದು ಎನ್ನುತ್ತಾರೆ ಲಾಹೌಲ್-ಸ್ಪಿಟಿ ಜಿಲ್ಲೆಯ ಡೆಪ್ಯುಟಿ ಕಮಿಷನರ್ ಪಂಕಜ್ ರಾಜ್.
ಇನ್ನು ಹಿಮಾಚಲ ಪ್ರದೇಶದಲ್ಲಿ ಇಲ್ಲಿಯವರೆಗೆ 33 ಸಾವಿರಕ್ಕೂ ಅಧಿಕ ಮಂದಿಗೆ ಕರೊನಾ ಪಾಸಿಟಿವ್ ವರದಿಯಾಗಿದೆ. ಇದರಲ್ಲಿ 518 ಮಂದಿ ಮೃತಪಟ್ಟಿದ್ದು, 26 ಸಾವಿರ ಮಂದಿ ಗುಣಮುಖರಾಗಿದ್ದಾರೆ. 7,070 ಸಕ್ರೀಯ ಪ್ರಕರಣಗಳಿವೆ. (ಏಜೆನ್ಸೀಸ್)