

ಬೀಜಿಂಗ್: ಸೆಲ್ಫಿಗಾಗಿ 31 ವರ್ಷದ ಪಾದಯಾತ್ರಿಯೊಬ್ಬರು ಭೀಕರವಾಗಿ ಬಿದ್ದು ಸಾವನ್ನಪ್ಪಿರುವ ಘಟನೆ ಚೀನಾದ ಸಿಚುವಾನ್ ಪ್ರಾಂತ್ಯದ ಮೌಂಟ್ ನಾಮಾದಲ್ಲಿ ನಡೆದಿದೆ.
ಶಿಖರದ ಬಳಿ ಫೋಟೋ ತೆಗೆಯಲು ತನ್ನ ಸುರಕ್ಷತಾ ಹಗ್ಗವನ್ನು ಬಿಚ್ಚಿದ ಬಳಿಕ ಆತ ಸಾವನ್ನಪ್ಪಿದ್ದಾರೆ. ಹಾಂಗ್ ಎಂದು ಗುರುತಿಸಲ್ಪಟ್ಟ ಈ ವ್ಯಕ್ತಿ ಸೆಪ್ಟೆಂಬರ್ 25 ರಂದು 5,588 ಮೀಟರ್ ಎತ್ತರದ ಪರ್ವತವನ್ನು ಹತ್ತುತ್ತಿದ್ದರು. ಫೋಟೋ ಗೀಳಿನಿಂದಾಗಿ ಹಿಮದಿಂದ ಆವೃತವಾದ ಇಳಿಜಾರಿನಲ್ಲಿ ಜಾರಿದಾಗ ಹಾಂಗ್ ಪರ್ವತದಿಂದ ಜಾರಿ ಬಿದ್ದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಇನ್ನೂ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿದೆ. ಈ ವಿಡಿಯೋದಲ್ಲಿ, ಹಾಂಗ್ ಶಿಖರದ ಬಳಿ ಹಿಮದಿಂದ ಆವೃತವಾದ ಇಳಿಜಾರಿನಲ್ಲಿ ಸುರಕ್ಷತಾ ಹಗ್ಗವಿಲ್ಲದೆ ನಿಂತಿರುವುದನ್ನು ಕಾಣಬಹುದಾಗಿದೆ. ಅವನು ತನ್ನನ್ನು ತಾನು ರಕ್ಷಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಸಹ ಸಾಧ್ಯವಾಗಿಲ್ಲ. ಕೊನೆಗೆ ಆತ ಎಡವಿ ಬಿದ್ದು ಪರ್ವತದ ಇಳಿಜಾರಿನ ಕೆಳಗೆ ಜಾರಿ, ಸುಮಾರು 656 ಅಡಿ ಎತ್ತರದಿಂದ ಬೀಳುತ್ತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ. ಇನ್ನೂ ಈ ಘಟನೆಯ ಬಳಿಕ ಅವನ ದೇಹವನ್ನು ಹೊರತೆಗೆದು ಗೊಂಗಾ ಪರ್ವತ ಪಟ್ಟಣಕ್ಕೆ ತರಲಾಗಿದೆ. ಈ ಬಗ್ಗೆ ಹಾಂಗ್ ಅವರ ಸೋದರಸಂಬಂಧಿ ಮಾತನಾಡಿದ್ದು, ಪರ್ವತವನ್ನು ಹತ್ತಲು ಇದು ಅವರ ಮೊದಲ ಪ್ರಯತ್ನವಾಗಿತ್ತು ಎಂದು ಹೇಳಿದ್ದಾರೆ.
(ಏಜೆನ್ಸೀಸ್)
ಈ ಬಗ್ಗೆ ಅಧಿಕಾರಿಗಳು ಮಾತನಾಡಿದ್ದು, ಹಾಂಗ್ ಅವರ ಗುಂಪು ಅಗತ್ಯವಾದ ಕ್ಲೈಂಬಿಂಗ್ ಪರವಾನಗಿಗಳನ್ನು ಪಡೆದಿಲ್ಲ. ಅವರ ದಂಡಯಾತ್ರೆಯ ಯೋಜನೆಗಳ ಬಗ್ಗೆ ಅಧಿಕಾರಿಗಳಿಗೆ ತಿಳಿಸಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಕಾಂಗ್ಡಿಂಗ್ ಮುನ್ಸಿಪಲ್ ಶಿಕ್ಷಣ ಮತ್ತು ಕ್ರೀಡಾ ಬ್ಯೂರೋ ಈ ಗುಂಪು ಮೂಲಭೂತ ಸುರಕ್ಷತಾ ನಿಯಮಗಳನ್ನು ಸಹ ಉಲ್ಲಂಘಿಸಿರುವುದಾಗಿ ಹೇಳಲಾಗಿದೆ. ಪರ್ವತಾ ಪಾದಯಾತ್ರೆಗೆ ಯೋಜಿಸುವವರಿಗೆ ಸರಿಯಾದ ತಯಾರಿ ಅತ್ಯಗತ್ಯ. ಪರ್ವತಾರೋಹಿಗಳಿಗೆ ಪರವಾನಗಿಗಳು ಬೇಕಾಗುತ್ತವೆ ಮತ್ತು ಸ್ಥಳೀಯ ನಿಯಮಗಳನ್ನು ಪಾಲಿಸಬೇಕು. ಸ್ಥಳೀಯ ಮಾರ್ಗದರ್ಶಕರು ಮತ್ತು ಪೋರ್ಟರ್‌ಗಳನ್ನು ನೇಮಿಸಿಕೊಳ್ಳುವುದು ಸುರಕ್ಷತೆ ಮತ್ತು ಸಾಗಣೆಗೆ ಸಹಾಯ ಮಾಡುತ್ತದೆ. ಎತ್ತರಕ್ಕೆ ಹೊಂದಿಕೊಳ್ಳಲು ಪಾದಯಾತ್ರಿಕರು ಕಡಿಮೆ ಎತ್ತರದಲ್ಲಿ ಸಮಯ ಕಳೆಯಬೇಕು. ಹಠಾತ್ ಹಿಮಬಿರುಗಾಳಿಗಳು ಮತ್ತು ಬದಲಾಗುವ ತಾಪಮಾನಕ್ಕೂ ಅವರು ಸಿದ್ಧರಾಗಿರಬೇಕು.