

ಬೆಂಗಳೂರು: ಸಾಲು ಸಾಲು ದಾರುಣ ಘಟನೆಗಳು, ಅಭಿವೃದ್ಧಿ ಸ್ಥಗಿತ, ಬರಗಾಲದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಪರಿಹಾರ ವಿತರಣೆಯಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಈ ವಿಷಯಗಳು ಹೆಚ್ಚು ಚರ್ಚೆಯಾದಷ್ಟು ಸಮಸ್ಯೆಯಾಗಲಿದೆ ಎಂದು ತಿಳಿದು ಜನರ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್ ಹಿಜಾಬ್ ಮುಖವಾಡ ಧರಿಸಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಹಿಜಾಬ್ ನಿಷೇಧ ಆದೇಶ ವಾಪಸ್ ಗೆ ಸೂಚಿಸಿರುವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಜನರ ಬವಣೆಗಳನ್ನು ದೂರ ಮಾಡುವುದಕ್ಕೆ ಆದ್ಯತೆ ನೀಡುವ ಬದಲು ಜನರ ಮಧ್ಯೆ ಧಾರ್ಮಿಕ ಬೇಧಭಾವ ಹುಟ್ಟಿಹಾಕಲು ಕಾಂಗ್ರೆಸ್ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಆರ್.ಅಶೋಕ್, ವಿಧಾನಸಭೆ ಅಧಿವೇಶನದ ನಡೆಯುತ್ತಿದ್ದ ಸಂದರ್ಭದಲ್ಲೇ ಬೆಳಗಾವಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ದಾರುಣ ಘಟನೆ, ಮಾಲೂರಿನ ವಸತಿ ಶಾಲೆಯಲ್ಲಿ ಮಕ್ಕಳನ್ನು ಮಲದ ಗುಂಡಿಗೊಳಿಸಿದ ಹೃದಯ ವಿದ್ರಾವಕ ಘಟನೆ.
ಹೀಗೆ ಸಾಲು ಸಾಲು ವೈಫಲ್ಯಗಳು, ಒಂದರ ಮೇಲೊಂದು ವಿವಾದಗಳು, ಒಳಜಗಳದ ಮುಜುಗರದಿಂದ ಜನತೆಗೆ ಮುಖ ತೋರಿಸಲೂ ಆಗದಂತಹ ದುಸ್ಥಿತಿಗೆ ತಲುಪಿರುವ ಕಾಂಗ್ರೆಸ್ ಸರ್ಕಾರ ಈಗ ಹಿಜಾಬ್ ಮುಖವಾಡ ಹಾಕಿಕೊಂಡು ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ.
ಓದುವ ಮಕ್ಕಳಲ್ಲಿ ಸಮಾನತೆಯ ಭಾವನೆ ಮೂಡಿಸುವ ಸಮವಸ್ತ್ರ ಬಿಟ್ಟು, ಧರ್ಮದ ಹೆಸರಿನಲ್ಲಿ ಎಳೆಯ ಮನಸ್ಸುಗಳನ್ನು ಒಡೆಯುವ ಹಿಜಾಬ್ ವಿಷಯವನ್ನ ಮತ್ತೆ ಕೆದಕುತ್ತಿರುವುದೇಕೆ?
ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ಪಕ್ಷ ತುಷ್ಟೀಕರಣದ ರಾಜಕೀಯಕ್ಕೆ ಮೊರೆ ಹೋಗಿದೆ. ಕನ್ನಡಿಗರು ಇದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆರ್.ಅಶೋಕ್ ಎಚ್ಚರಿಸಿದ್ದಾರೆ.