

ಪದ್ಮವಿಭೂಷಣ ಪುರಸ್ಕೃತರು: ಪ್ರಭಾ ಅತ್ರೆ (ಕಲೆ), ಮರಣೋತ್ತರವಾಗಿ ರಾಧೆಶ್ಯಾಮ್ ಖೆಮ್ಕಾ (ಸಾಹಿತ್ಯ-ಶಿಕ್ಷಣ), ಜನರಲ್ ಬಿಪಿನ್ ರಾವತ್ (ನಾಗರಿಕ ಸೇವೆ), ಕಲ್ಯಾಣ ಸಿಂಗ್ (ರಾಜಕೀಯ)
ಪದ್ಮಭೂಷಣ: ರಾಜಕೀಯ ಕ್ಷೇತ್ರದಲ್ಲಿ ಗುಲಾಂ ನಬಿ ಆಜಾದ್, ಬುದ್ದದೇವ ಭಟ್ಟಾಚಾರ್ಯ, ಕಲಾ ಕ್ಷೇತ್ರದಲ್ಲಿ ವಿಕ್ಟರ್ ಬ್ಯಾನರ್ಜಿ, ಗುರ್ವಿುತ್ ಬವಾ (ಮರಣೋತ್ತರ), ರಶೀದ್ ಖಾನ್, ವಾಣಿಜ್ಯ ಮತ್ತು ಕೈಗಾರಿಕಾ ವಲಯದಲ್ಲಿ ನಟರಾಜನ್ ಚಂದ್ರಶೇಖರನ್, ಕೃಷ್ಣ ಎಲ್ಲಾ ಮತ್ತು ಸುಚಿತ್ರಾ ಎಲ್ಲಾ (ದಂಪತಿ), ಸತ್ಯ ನಾರಾಯಣ ನಾದೆಲ್ಲಾ (ಮೈಕ್ರೋಸಾಫ್ಟ್ ಸಿಇಒ, ಅಮೆರಿಕ) ಸುಂದರರಾಜನ್ ಪಿಚೈ (ಗೂಗಲ್ನ ಆಲ್ಪಾಬೆಟ್ ಸಿಇಒ, ಅಮೆರಿಕ), ಸೈರಸ್ ಪೂನಾವಾಲಾ, ಸಾಹಿತ್ಯ-ಶಿಕ್ಷಣ ಕ್ಷೇತ್ರದಲ್ಲಿ ಪ್ರತಿಭಾ ರಾಯ್, ಸ್ವಾಮಿ ಸಚ್ಚಿದಾನಂದ, ವಶಿಷ್ಠ ತ್ರಿಪಾಠಿ, ವಿಜ್ಞಾನ ಮತ್ತು ಇಂಜಿನಿಯರಿಂಗ್ನಲ್ಲಿ ಸಂಜಯ ಜಯರಾಂ (ಮರಣೋತ್ತರ), ಕ್ರೀಡೆಯಲ್ಲಿ ದೇವೇಂದ್ರ ಝಾಝಾರಿಯಾ, ನಾಗರಿಕ ಸೇವೆಗೆ ರಾಜೀವ್ ಮೆಹಿರ್ಷಿ (ಮಾಜಿ ಸಿಎಜಿ), ಇತರ- ಮಧುರ್ ಜಾಫ್ರಿ.
ಪದ್ಮಭೂಷಣ ತಿರಸ್ಕರಿಸಿದ ಬುದ್ಧದೇವ ಭಟ್ಟಾಚಾರ್ಯ: ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ಧವೇವ ಭಟ್ಟಾಚಾರ್ಯ (77) ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ‘ನನ್ನನ್ನು ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆಂದು ಅನೇಕರು ಹೇಳುತ್ತಿದ್ದಾರೆ. ಈ ಬಗ್ಗೆ ನನಗೇನೂ ಗೊತ್ತಿಲ್ಲ. ಇದು ನಿಜವೇ ಆಗಿದ್ದರೆ ನಾನು ಪ್ರಶಸ್ತಿಯನ್ನು ತಿರಸ್ಕರಿಸುತ್ತೇನೆ’ ಎಂದು ಅವರು ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರಧಾನಿ ಮೋದಿಯ ಟೀಕಾಕಾರರಲ್ಲಿ ಭಟ್ಟಾಚಾರ್ಯ ಕೂಡ ಪ್ರಮುಖರು.
ಟೋಕಿಯೊ ಒಲಿಂಪಿಕ್ಸ್ ಸ್ವರ್ಣ ಪದಕ ವಿಜೇತ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ, ಟೋಕಿಯೊ ಪ್ಯಾರಾಲಿಂಪಿಕ್ಸ್ ಪದಕ ವಿಜೇತರಾದ ದೇವೇಂದ್ರ ಜಜಾರಿಯಾ ಹಾಗೂ ಪ್ರಮೋದ್ ಭಗತ್ ಸೇರಿದಂತೆ 10 ಕ್ರೀಡಾಪಟುಗಳು ಪದ್ಮ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಮೂರು ಪ್ಯಾರಾಲಿಂಪಿಕ್ಸ್ ಪದಕ ವಿಜೇತ ರಾಜಸ್ಥಾನದ ದೇವೇಂದ್ರ ಜಜಾರಿಯಾಗೆ ಪದ್ಮಭೂಷಣ ಪ್ರಶಸ್ತಿ ಒಲಿದಿದ್ದರೆ, ನೀರಜ್ ಮತ್ತು ಪ್ರಮೋದ್ ಪದ್ಮಶ್ರೀಗೆ ಭಾಜನರಾಗಿದ್ದಾರೆ. ಪ್ಯಾರಾಥ್ಲೀಟ್ಗಳಾದ ಸುಮಿತ್ ಅಂತಿಲ್, ಫೈಸಲ್ ಅಲಿ ದಾರ್, ಅವನಿ ಲೇಖರ, ಹಾಕಿ ಆಟಗಾರ್ತಿ ವಂದನಾ ಕಟಾರಿಯಾಗೆ ಪದ್ಮಶ್ರೀ ದಕ್ಕಿದೆ. ಭಾರತದ ಫುಟ್ಬಾಲ್ ತಂಡದ ಮಾಜಿ ನಾಯಕ 67 ವರ್ಷದ ಬ್ರಹ್ಮಾನಂದ ಸಂಖ್ವಾಲ್ಕರ್ ಹಾಗೂ ಕೇರಳದ ಕಲಾರಿ ಪಯಟ್ಟು ಪಟು 93 ವರ್ಷದ ಶಂಕರನಾರಾಯಣ ಮೆನನ್ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮ ಪುರಸ್ಕಾರ 2017ರಿಂದೀಚೆಗೆ ಎಲೆಮರೆಯ ಕಾಯಿಯಂತಿರುವ ಸಾಧಕರಿಗೂ ಒಲಿಯತೊಡಗಿದೆ. ಕೇಂದ್ರ ಸರ್ಕಾರ ಈ ಪುರಸ್ಕಾರದ ಆಯ್ಕೆ ಪ್ರಕ್ರಿಯೆಯನ್ನು ಪರಿಷ್ಕರಿಸಿ ಜನಸಾಮಾನ್ಯರೂ ಅರ್ಹ ಸಾಧಕರ ಹೆಸರು ಶಿಫಾರಸು ಮಾಡುವುದಕ್ಕೆ ಅನುಕೂಲ ಕಲ್ಪಿಸಿದೆ. ಪದ್ಮಪುರಸ್ಕಾರ ನಾಮನಿರ್ದೇಶನ ಪ್ರಕ್ರಿಯೆಗೆ ನಿಗದಿತ ( http://www.padmaawards.gov.in) ಜಾಲತಾಣಕ್ಕೆ ಭೇಟಿ ನೀಡಬೇಕು. ಅಲ್ಲಿ, ಖಾತೆ ತೆರೆದು ಬಳಿಕ ‘ನ್ಯೂ ನಾಮಿನಷೇನ್’ ಎಂಬುದನ್ನು ಕ್ಲಿಕ್ ಮಾಡಬೇಕು. ಅಗತ್ಯ ಮಾಹಿತಿಗಳನ್ನು ತುಂಬಿದ ಬಳಿಕ ಸೇವ್ ಆಂಡ್ ನೆಕ್ಸ್ಟ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ, ಸೈಟೇಷನ್ ತುಂಬಿ, ಫೋಟೊ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ ಸೇವ್ ಕೊಡಬೇಕು. ಕೊನೆಗೆ ‘ಫೈನಲ್ ಸಬ್ವಿುಟ್’ ಕೊಟ್ಟರೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ಶಿವಮೊಗ್ಗ ತಾಲೂಕಿನ ಮತ್ತೂರು-ಹೊಸಳ್ಳಿಯ ಎಚ್.ಆರ್.ಕೇಶವಮೂರ್ತಿ ಗಮಕ ಕ್ಷೇತ್ರದಲ್ಲಿ ಪರಿಣತರಾಗಿದ್ದು ಹೊಸಹಳ್ಳಿಯಲ್ಲಿರುವ ಗಮಕ ಕಲಾ ಪರಿಷತ್ನಿಂದ (ಗಮಕ ಆರ್ಟ್ ಅಕಾಡೆಮಿ) ಲಭ್ಯವಿರುವ ಗಮಕದ ಧ್ವನಿ ಹಾಡುಗಳಲ್ಲಿ ಕಾಣಿಸಿಕೊಂಡ ಕಲಾವಿದರಲ್ಲಿ ಒಬ್ಬರು. ಗಮಕ ಕಲಾ ಸಾಧಕರಿಗೆ ನೀಡಲಾಗುವ ಕುಮಾರವ್ಯಾಸ ಪ್ರಶಸ್ತಿ ಗಮಕ ವಾಚಕ ಹೊಸಹಳ್ಳಿ ಕೇಶವಮೂರ್ತಿ ಅವರಿಗೆ ಮೊದಲ ಬಾರಿಗೆ ಒಲಿದಿತ್ತು. ಜತೆಗೆ ವಾಚನದಲ್ಲಿ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದಾರೆ. ವೇದಬ್ರಹ್ಮ ರಾಮಸ್ವಾಮಿ ಶಾಸ್ತ್ರಿ ಮತ್ತು ಲಕ್ಷ್ಮೀದೇವಪ್ಪ ದಂಪತಿ ಪುತ್ರರಾದ ಕೇಶವಮೂರ್ತಿ 1934ರ ಫೆ.22ರಂದು ಹೊಸಹಳ್ಳಿಯಲ್ಲಿ ಜನಿಸಿದ್ದಾರೆ. ಬಾಲ್ಯದಿಂದಲೂ ತಂದೆಯಂತೆ ಯೇ ಗಮಕ ಕಲೆ ಬಗ್ಗೆ ಆಸಕ್ತರಾದ ಅವರು ಗಮಕ ಕಲೆಯನ್ನು ಉಳಿಸಿ ಬೆಳೆಸಲು ಇಡೀ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ.
ಭಾರತದ ಪ್ರಮುಖ ಕೃಷಿ ಮತ್ತು ಮೀನುಗಾರಿಕೆ ವಿಜ್ಞಾನಿಗಳ ಸಾಲಿನಲ್ಲಿ ಕೇಳಿಬರುವ ಹೆಸರು ಡಾ. ಸುಬ್ಬಣ್ಣ ಅಯ್ಯಪ್ಪನ್. ಡಾ. ಎಸ್.ಅಯ್ಯಪನ್ ಎಂದೇ ಹೆಸರುವಾಸಿಯಾದ ವಿಜ್ಞಾನಿ. ಮಂಗಳೂರು ವಿಶ್ವವಿದ್ಯಾಲಯದಿಂದ ಮೀನುಗಾರಿಕೆ ಉತ್ಪಾದನೆ ಹಾಗೂ ನಿರ್ವಹಣೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪಡೆದಿದ್ದಾರೆ. ಮೀನುಗಾರಿಕೆ ಕುರಿತು ಅತ್ಯಂತ ಹೆಚ್ಚಿನ ಸಂಶೋಧನೆ ಹಾಗೂ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ರಾಷ್ಟ್ರೀಯ ಕೃಷಿ ವಿಜ್ಞಾನಗಳ ಪರಿಷತ್, ಪರಿಸರ ಸಂರಕ್ಷಕರ ಸೊಸೈಟಿ, ಬಯೋಡೈವರ್ಸಿಟಿ ಇಂಡಿಯಾ ಸೇರಿ ಅನೇಕ ಸಂಸ್ಥೆಗಳ ಸಂಶೋಧಕರಾಗಿ ಸೇವೆ ಸಲ್ಲಿಸಿದ್ದಾರೆ. ಭಾರತೀಯ ಕೃಷಿ ಸಂಶೋಧನಾ ಪರಿಷತ್ ಅಧ್ಯಕ್ಷರಾಗಿ, ಪ್ರಧಾನ ನಿರ್ದೇಶಕರಾಗಿ, ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ(ಡೇರ್) ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಜೀವವಿಜ್ಞಾನ ಸೊಸೈಟಿಯಿಂದ 1996-97ರಲ್ಲಿ ಜಹೂರ್ ಕಾಸಿಮ್ ಚಿನ್ನದ ಪದಕ, ಮೀನುಗಾರಿಕೆಗೆ ನೀಡಿದ ಗಣನೀಯ ಕೊಡುಗೆಗಾಗಿ 1997ರಲ್ಲಿ ಭಾರತೀಯ ಕೃಷಿ ಸಂಶೋಧನಾ ಪರಿಷತ್ (ಐಸಿಎಆರ್) ವಿಶೇಷ ಗೌರವ ಹಾಗೂ ಐಸಿಎಆರ್ ಟೀಮ್ ರಿಸರ್ಚ್ ಸೇರಿ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ.
ಬಂಟ್ವಾಳ ತಾಲೂಕಿನ ಅಡ್ಯನಡ್ಕ ಸಮೀಪದ 75 ವಯಸ್ಸಿನ ಮಹಾಲಿಂಗ ನಾಯ್ಕ ಅವರು ಕೃಷಿ ಕಾಯಕದ ಮೂಲಕ ಸ್ವಾವಲಂಬಿ ಜೀವನ ಸಾಧ್ಯ ಎಂಬುದನ್ನು ಯುವ ಶಕ್ತಿಗೆ ತೋರಿಸಿಕೊಟ್ಟವರು. ಗುಡ್ಡಕ್ಕೆ ಏಳು ಸುರಂಗ ಕೊರೆದು ತಮ್ಮ ಎರಡು ಎಕರೆ ಕೃಷಿಗೆ ಅಗತ್ಯವಿರುವ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ. ವಿದ್ಯುತ್ ಬಳಕೆಯಿಲ್ಲದೆ ನೀರನ್ನು ಗುರುತ್ವಾಕರ್ಷಣೆ ಮೂಲಕ ಗಿಡಗಳಿಗೆ ನೀರುಣಿಸುವಂತೆ ಮಾಡಿದ್ದಾರೆ. 300 ಅಡಕೆ, 75 ತೆಂಗು, 200 ಬಾಳೆ ಗಿಡಗಳಿದ್ದು, ಹಟ್ಟಿಗೊಬ್ಬರ ಹಾಗೂ ಕಾಂಪೋಸ್ಟ್ ಹೊರತು ಬೇರಾವುದೇ ಗೊಬ್ಬರ ಬಳಸಿದವರಲ್ಲ.
ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಸೇರಿ ಹಲವು ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದ ಕವಿ ಡಾ. ಸಿದ್ಧಲಿಂಗಯ್ಯ ಅವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ. 2021ರ ಜೂನ್ ತಿಂಗಳಲ್ಲಿ ಹೃದಯಾಘಾತದಿಂದ ನಿಧನರಾದರು. ಅವರ ಆತ್ಮಕಥೆ ಊರು ಕೇರಿಯು ಎರಡು ಭಾಗದಲ್ಲಿ ಪ್ರಕಟಗೊಂಡಿದೆ. ಇಂಗ್ಲಿಷ್ ಹಾಗೂ ತಮಿಳು ಭಾಷೆಗೆ ಅನುವಾದಗೊಂಡಿದ್ದು, ಇಂಗ್ಲಿಷ್ ಅನುವಾದವನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯು ಪ್ರಕಟಿಸಿದೆ. ಅವರ ಹೊಲೆ ಮಾದಿಗರ ಹಾಡು ಕವನ ಸಂಕಲನವು ಭಾರತೀಯ ಸಾಹಿತ್ಯದಲ್ಲಿಯೇ ವಿಶಿಷ್ಟವಾದ ಸ್ಥಾನಗಳಿಸಿರುವ ಶ್ರೇಷ್ಠ ಕೃತಿಯಾಗಿದೆ. ಸಾವಿರಾರು ನದಿಗಳು, ಕಪ್ಪುಕಾಡಿನ ಹಾಡು, ಮೆರವಣಿಗೆ, ನನ್ನ ಜನಗಳು ಮತ್ತು ಇತರ ಕವಿತೆಗಳು, ಆಯ್ದ ಕವನಗಳು, ಅಲ್ಲೆಕುಂತವರು ಮುಂತಾದ ಕವನ ಸಂಕಲನಗಳು ಪ್ರಕಟಗೊಂಡಿವೆ. ಪಂಚಮ, ನೆಲಸಮ, ಏಕಲವ್ಯ ಪ್ರಮುಖ ನಾಟಕಗಳಾಗಿವೆ. ರಸಘಳಿಗೆಗಳು, ಎಡಬಲ, ಹಕ್ಕಿನೋಟ, ಜನಸಂಸ್ಕೃತಿ, ಉರಿಕಂಡಾಯ ಮುಂತಾದ ಲೇಖನ ಸಂಗ್ರಹಗಳು, ಸದನದಲ್ಲಿ ಸಿದ್ದಲಿಂಗಯ್ಯ ಭಾಗ 1 ಮತ್ತು 2 ಸೇರಿ ವಿವಿಧ ಕೃತಿಗಳು ಪ್ರಕಟಗೊಂಡಿವೆ. ಪುಟ್ಟಣ್ಣ ಕಣಗಾಲರು ನಿರ್ದೇಶಿಸಿದ ಧರಣಿಮಂಡಲ ಮಧ್ಯದೊಳಗೆ ಚಿತ್ರಕ್ಕೆ ಬರೆದ ಗೀತೆಗೆ ರಾಜ್ಯಪ್ರಶಸ್ತಿ ಸಂದಿದೆ. ಶ್ರವಣಬೆಳಗೊಳದಲ್ಲಿ ನಡೆದ 81ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಸೇರಿ ಮುಂತಾದ ಗೌರವಗಳು ಅವರಿಗೆ ಸಂದಿವೆ.
ಕೃಷಿ ಯಂತ್ರಗಳ ಸಂಶೋಧನೆ ಮೂಲಕ ಗಮನ ಸೆಳೆದಿರುವ ಧಾರವಾಡ ಜಿಲ್ಲೆ ಅಣ್ಣಿಗೇರಿಯ ವಿಶ್ವಶಾಂತಿ ಆಗ್ರಿಕಲ್ಚರಲ್ ರಿಸರ್ಚ್ ಆಂಡ್ ಇಂಡಸ್ಟ್ರಿಯಲ್ ಡೆವಲಪ್ವೆುಂಟ್ ಸೆಂಟರ್ನ ಸಂಸ್ಥಾಪಕ ಅಬ್ದುಲ್ ಖಾದರ್ ನಡಕಟ್ಟಿನ ಅವರ ವಿಷಯದಲ್ಲಿ ‘ಅವಶ್ಯಕತೆಯೇ ಅನ್ವೇಷಣೆ ತಾಯಿ’ ಎಂಬ ಮಾತು ಅಕ್ಷರಶಃ ಸತ್ಯ. ಚಿಕ್ಕಂದಿನಲ್ಲಿದ್ದಾಗ ಬೆಳಗ್ಗೆ ಬೇಗ ಏಳಲು ಕೀಲಿ ಕೊಡುವ ಅಲಾಮ್ರ್ ಇಟ್ಟುಕೊಂಡರೂ ಇವರಿಗೆ ಎಚ್ಚರಾಗುತ್ತಿರಲಿಲ್ಲ. ಇದಕ್ಕೆ ಪರಿಹಾರವಾಗಿ, ಅಲಾಮ್ರ್ ಸದ್ದು ಮಾಡಿದಾಗ (ಕೀಲಿ ಉಲ್ಟಾ ತಿರುಗಿದಾಗ) ಅದಕ್ಕೆ ಕಟ್ಟಿದ ದಾರ ಸರಿದು, ಬಾಟಲಿಯೊಂದರಿಂದ ನೀರು ಚಿಮ್ಮಿ ತನ್ನ ಮುಖಕ್ಕೆ ಸಿಂಪರಣೆಯಾಗುವಂತೆ ವ್ಯವಸ್ಥೆ ಮಾಡಿಕೊಂಡಿದ್ದು ಇವರ ಮೊದಲ ಅನ್ವೇಷಣೆ. 60 ಎಕರೆ ಜಮೀನು ಹೊಂದಿರುವ ಅಬ್ದುಲ್, ಕೃಷಿಕನಾಗಿ ದೊಡ್ಡ ಪ್ರಮಾಣದಲ್ಲಿ ಹುಣಸೆ ಬೆಳೆ ಬೆಳೆದಾಗ ಬೀಜ ಬಿಡಿಸುವುದು ಸವಾಲಾಯಿತು. ಅದಕ್ಕೊಂದು ಯಂತ್ರ ಸಂಶೋಧಿಸಿದರು. ರೈತರ ಅಗತ್ಯ ಅರಿತು ಯಂತ್ರಗಳನ್ನು ರೂಪಿಸುವ ಪ್ರವೃತ್ತಿಯಿಂದಾಗಿ ಫೈವ್ ಇನ್ ಒನ್ ಟಿಲ್ಲರ್, ಸೀಡ್ ಕಮ್ ಫರ್ಟಿಲೈಜನರ್ ಕೂರಿಗೆ, ದಿಂಡಿನ ಕುಂಟೆ, ವ್ಹೀಲ್ ಟಿಲ್ಲರ್, ಕಬ್ಬು ನಾಟಿ ಯಂತ್ರ ಸೇರಿ ಹಲವು ಯಂತ್ರಗಳನ್ನು ಸಂಶೋಧಿಸಿದ್ದು, ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಜನಪ್ರಿಯವಾಗಿವೆ.