ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉನ್ನತ ಕೌಶಲ ತರಬೇತಿ ಭಾಗ್ಯ: ಸಚಿವ ಲಾಡ್ ಚಿಂತನೆ

Lad meeting
Published on

ಬೆಂಗಳೂರು: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾರ್ಹತೆ, ಉದ್ಯಮಗಳಿಗೆ ಬೇಕಾದ ಉನ್ನತೀಕರಿಸಿದ ಕೌಶಲ ತರಬೇತಿ ಒದಗಿಸಿ ಉದ್ಯೋಗಾವಕಾಶ ಕಲ್ಪಿಸಲು ಕಾರ್ಮಿಕ ಸಚಿವ ಸಂತೋಷ ಲಾಡ್ ಗಂಭೀರ ಚಿಂತನೆ ನಡೆಸಿದ್ದಾರೆ.

ವಿಕಾಸಸೌಧದಲ್ಲಿ ಉನ್ನತೀಕರಿಸಿದ ಕೌಶಲ ತರಬೇತಿ ಕೇಂದ್ರ ಸ್ಥಾಪನೆ ಪೂರ್ವ ಸಭೆ ಸೋಮವಾರ ನಡೆಯಿತು. ಅಧ್ಯಕ್ಷತೆವಹಿಸಿದ್ದ ಸಚಿವ ಸಂತೋಷ್ ಲಾಡ್, ಕೇಂದ್ರಗಳ ಪರಿಕಲ್ಪನೆ ಹಾಗೂ ಪೂರ್ವ ತಯಾರಿ ಕುರಿತು ಚರ್ಚಿಸಿದರು.

ಖಾಸಗಿ ಕಂಪನಿಗಳು, ಉದ್ಯಮಿಗಳು ಮತ್ತು ಕಾರ್ಖಾನೆಗಳ ಸಹಭಾಗಿತ್ವದಲ್ಲಿ ತರಬೇತಿ ಕೇಂದ್ರಗಳು ಸ್ಥಾಪನೆಯಾಗಲಿವೆ. ಕೇಂದ್ರಕ್ಕೆ ಬೇಕಾದ ಜಾಗ ಸೇರಿ ಅಗತ್ಯ ಸವಲತ್ತುಗಳನ್ನು ರಾಜ್ಯ ಸರ್ಕಾರವೇ ಸೃಜಿಸಿ ಕೊಡಲಿದೆ.

ಅಗತ್ಯವಿರುವ ಕೋರ್ಸ್ ಅಥವಾ ಪಠ್ಯಕ್ರಮ ಸಿದ್ಧಪಡಿಸಿ ತರಬೇತಿ ನೀಡಿ, ಉದ್ಯೋಗ ಅವಕಾಶ ಕಲ್ಪಿಸುವುದು ಖಾಸಗಿ ಕಂಪನಿ, ಉದ್ಯಮ ಮತ್ತು ಕಾರ್ಖಾನೆಗಳ ಜವಾಬ್ದಾರಿಯಾಗಿದೆ.

ಸಹಭಾಗಿತ್ವದ ಈ ಉಪಕ್ರಮದಿಂದ ಕಂಪನಿ/ಉದ್ಯಮಗಳಿಗೆ ಬೇಕಾದ ಕೌಶಲಪೂರ್ಣ ಮಾನವ ಸಂಪನ್ಮೂಲ ಲಭಿಸುತ್ತದೆ. ಅದೇ ಕಾಲಕ್ಕೆ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಕ್ಕಳಿಗೂ ಕೌಶಲಕ್ಕೆ ಉದ್ಯೋಗ ಅವಕಾಶ ಲಭಿಸುತ್ತದೆ.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ 50 ಲಕ್ಷ ಕಾರ್ಮಿಕರ ಹೆಸರು ನೋಂದಣಿಯಾಗಿವೆ. ಮೊದಲ ಹಂತದಲ್ಲಿ ಈ ಕಾರ್ಮಿಕರ ಮಕ್ಕಳು, ನಂತರದಲ್ಲಿ ಅಸಂಘಟಿತ ವಲಯದ 50 ಲಕ್ಷ ಕಾರ್ಮಿಕರ ಮಕ್ಕಳಿಗೆ ಕೌಶಲ ತರಬೇತಿ ನೀಡುವ ಉದ್ದೇಶವಿದೆ.

ಕಂದಾಯ ವಿಭಾಗವಾರು ಉನ್ನತೀಕರಿಸಿದ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶವಿದ್ದು, ಪ್ರಾಯೋಗಿಕವಾಗಿ ಹುಬ್ಬಳ್ಳಿ-ಧಾರವಾಡದಲ್ಲಿ ತೆರೆಯಲಾಗುವುದು. ಕೇಂದ್ರದ ಯಶಸ್ಸು ಗಮನಿಸಿ ಮುಂದಿನ ಹೆಜ್ಜೆಯಿಡುವ ಬಗ್ಗೆಯೂ ಸಂತೋಷ್ ಲಾಡ್ ಪ್ರಸ್ತಾಪಿಸಿದ್ದಾರೆ.

ಈ ಸಭೆಯಲ್ಲಿ ಕಾರ್ಮಿಕ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅಧಿಕಾರಿಗಳು, ಸದಸ್ಯರು, ಕಾರ್ಖಾನೆಗಳ ಆಡಳಿತ ಮಂಡಳಿ, ಪ್ರತಿನಿಧಿಗಳು, ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net