ಹೈಕಮಾಂಡ್‌ಗೂ ತಟ್ಟಿದ ಅಕ್ರಮದ ಘಾಟು

Indian_National_Congress_hand_logo
Published on

ಬೆಂಗಳೂರು: ವಾಲ್ಮೀಕಿ ನಿಗಮದ ಹಣ ಬೇನಾಮಿ ಖಾತೆಗಳಿಗೆ ವರ್ಗಾವಣೆಯಾದ ಪ್ರಕರಣದಿಂದ ಪಕ್ಷಕ್ಕಾಗುತ್ತಿರುವ ಮುಜುಗರದ ವಿಚಾರ ಹೈಕಮಾಂಡ್‌ಗೂ ತಲುಪಿದ್ದು, ಮಾಹಿತಿ ತರಿಸಿಕೊಂಡು ಸಿಎಂ, ಡಿಸಿಎಂ ಬಳಿಯೂ ಮಾಹಿತಿ ಕೇಳಿದೆ.

ವಿಧಾನ ಪರಿಷತ್ ಅಭ್ಯರ್ಥಿ ಆಯ್ಕೆಗಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿಯೂ ಸಹ ವಾಲ್ಮೀಕಿ ನಿಗಮದ ವಿಚಾರ ಚರ್ಚೆಗೆ ಬಂದಿದೆ.

ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಆಗಿದ್ದೇಗೆ? ಇದರ ಹಿಂದೆ ಯಾರಿದ್ದಾರೆ? ಎಂದು ಖರ್ಗೆಯವರು ವಿಚಾರಿಸಿದ್ದಾರೆನ್ನಲಾಗಿದೆ.

ನಿಗಮದ ಅಧಿಕಾರಿ ಆತ್ಮಹತ್ಯೆ ಮತ್ತು ಬಳಿಕ ಸರ್ಕಾರ ಕೈಗೊಂಡ ತನಿಖೆ, ತನಿಖೆಯ ಪ್ರಾಥಮಿಕ ಮಾಹಿತಿ, ಬ್ಯಾಂಕ್ ವಿರುದ್ಧ ಎ್ಐಆರ್ ದಾಖಲು ಮಾಡಿದ ವಿಚಾರವನ್ನು ಸಿಎಂ ಹಾಗೂ ಡಿಸಿಎಂ ಖರ್ಗೆಯವರ ಗಮನಕ್ಕೆ ತಂದಿದ್ದಾರೆ.

ಜತೆಗೆ ಇಂತಹ ಬೆಳವಣಿಗೆಯಿಂದ ಪಕ್ಷ ಹಾಗೂ ಸರ್ಕಾರದ ಇಮೇಜ್‌ಗೆ ಧಕ್ಕೆಯಾಗುತ್ತಿದೆ. ಜನರ ನಡುವೆ ಚರ್ಚೆ ಕೂಡ ನಡೆಯುತ್ತಿದೆ. ಕೂಡಲೇ ಅಗತ್ಯ ಕ್ರಮಕೈಗೊಂಡು ವಿಷಯ ಮುಗಿಸುವತ್ತ ಗಮನ ಕೊಡಿ ಎಂದು ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿಯವರು ಇಂತಹ ಘಟನೆ ಇಟ್ಟುಕೊಂಡು ಸಕ್ರಿಯರಾಗುತ್ತಾರೆ, ಜತೆಗೆ ಒಂದು ಸಮುದಾಯದಲ್ಲಿ ಬೇರೆ ಸಂದೇಶ ಹೋಗಬಹುದು, ಬಹುಕಾಲ ಅದು ನೆಲೆ ನಿಲ್ಲಬಹುದು. ಇಂಹದ್ದಕ್ಕೆ ಅವಕಾಶ ಕೊಡಬಾರದೆಂದು ದೆಹಲಿ ನಾಯಕರು ಹೇಳಿಕಳಿಸಿದ್ದಾರೆಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net