

ಬೆಂಗಳೂರು: ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಥಾಯ್ ಸ್ಪಾ ಮೇಲೆ ಯಲಹಂಕ ಪೊಲೀಸರು ದಾಳಿ ಮಾಡಿ 7 ಮಂದಿ ಯುವತಿಯರನ್ನು ರಕ್ಷಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಆಂಜನೇಯ ಗೌಡ, ಹರೀಶ್ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳು ಯಲಹಂಕ ನ್ಯೂ ಟೌನ್ನಲ್ಲಿ ರೋರಾ ಲಕ್ಸುರಿ ಥಾಯ್ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಅಗ್ನಿ ಅವಘಡ; ಭಾರತ ಮೂಲದ ಯುವ ಪತ್ರಕರ್ತ ಸಾವು
ಬಂಧಿತ ಆರೋಪಿಗಳು ಥೈಲ್ಯಾಂಡ್ ಸೇರಿದಂತೆ ವಿವಿಧ ದೇಶದ ಮಹಿಳೆಯರನ್ನು ಟೂರಿಸ್ಟ್ ವೀಸಾ ಹಾಗೂ ಬ್ಯುಸಿನೆಸ್ ವೀಸಾ ಮೂಲಕ ಬೆಂಗಳೂರಿಗೆ ಕರೆತಂದು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದರು. ವಿದೇಶದಿಂದ ಯುವತಿಯರನ್ನು ಕರೆ ತಂದು ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಈಶಾನ್ಯ ವಿಭಾಗದ ಡಿಸಿಪಿ ಯಲಹಂಕ ನ್ಯೂಟೌನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಯಲಹಂಕ ನ್ಯೂ ಟೌನ್ ಪೊಲೀಸರು ದಾಳಿ ಮಾಡಿ ಅಕ್ರಮವನ್ನು ಬಯಲಿಗೆ ಎಳೆದಿದ್ದಾರೆ.
ದಾಳಿ ವೇಳೆ ಆರೋಪಿಗಳು ವಿವಿಧ ದೇಶದ ಮಹಿಳೆಯರನ್ನು ಟೂರಿಸ್ಟ್ ವೀಸಾ ಹಾಗೂ ಬ್ಯುಸಿನೆಸ್ ವೀಸಾ ಮೂಲಕ ಬೆಂಗಳೂರಿಗೆ ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿರುವುದು ಬೆಳಕಿಗೆ ಬಂದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.