ಮುಡಾಕ್ಕೆ ಸೇರಿದ ಜಮೀನು ಜಪ್ತಿ ವಿಚಾಬಲವಂತದ ಕ್ರಮ ಕೈಗೊಳ್ಳದಂತೆ ಹೈ ಸೂಚನೆ

Published on

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಅಕ್ರಮ ಹಗರಣದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಮೈಸೂರಿನ ದಟ್ಟಗಳ್ಳಿಯಲ್ಲಿ ಮುಡಾಗೆ ಸೇರಿದ ಜಮೀನು ಜಪ್ತಿ ವಿಚಾರದಲ್ಲಿ ಸದ್ಯ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಮಧ್ಯಂತರ ಅದೇಶ ನೀಡಿದೆ.

ಇಡಿ ವಿರುದ್ಧ ಚಾಮುಂಡೇಶ್ವರಿ ನಗರ ಸರ್ವೋದಯ ಸಂಘ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ನ್ಯಾಯಮೂರ್ತಿ ವೆಂಕಟೇಶ್ ಟಿ.ನಾಯಕ್ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.

ಅರ್ಜಿದಾರರ ಪರ ವಕೀಲರು, ಸಂಘದ ಸದಸ್ಯರಿಗೆ ನಿವೇಶನ ಹಂಚಿಕೆ ಸಂಬಂಧ ಮುಡಾ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ಬಾಕಿಯಿರುವಾಗ ಜಾರಿ ನಿರ್ದೇಶನಾಲಯದಿಂದ ಇಡೀ ಬಡಾವಣೆಗೆ ಗುರುತಿಸಿದ್ದ ಜಾಗವನ್ನು ಜಪ್ತಿ ಮಾಡಲಾಗಿದೆ. ಹಾಗಾಗಿ ಜಪ್ತಿ ಆದೇಶವನ್ನು ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.

ಮಾತ್ರವಲ್ಲದೇ, ಅರ್ಜಿದಾರರ ಸಂಘ ಮೂಡಾ ವಿರುದ್ಧ 2023ರಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ. ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಅದರ ವಿಚಾರಣೆ ಬಾಕಿ ಇರುವ ಮಧ್ಯೆಯೇ ಜಾರಿ ನಿರ್ದೇಶನಾಲಯ ಯಾವುದೇ ನೋಟಿಸ್ ನೀಡದೆ, ನಿಯಮಗಳನ್ನು ಪಾಲನೆ ಮಾಡದೆ ಏಕಪಕ್ಷೀಯವಾಗಿ ಭೂಮಿ ಜಪ್ತಿ ಆದೇಶವನ್ನು ಹೊರಡಿಸಿರುವುದು ಕಾನೂನು ಬಾಹಿರ. ಹಾಗಾಗಿ ನ್ಯಾಯಾಲಯ ಮಧ್ಯಂತರ ಆದೇಶ ನೀಡಿ ಅರ್ಜಿದಾರರ ಹಕ್ಕು ರಕ್ಷಿಸಬೇಕು ಎಂದು ಕೋರಿದರು

ಅರ್ಜಿದಾರರ ವಾದ ಆಲಿಸಿದ ನ್ಯಾಯಾಲಯ, ಪ್ರತಿವಾದಿ ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿಗೊಳಿಸಿ ಜಪ್ತಿ ಬಗ್ಗೆ ವಿವರಣೆ ನೀಡುವಂತೆ ಸೂಚನೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net