ಸಾರ್ವಜನಿಕ ಶೌಚಾಗೃಹ ನಿರ್ವಹಣೆ ಕುರಿತು ಬಿಬಿಎಂಪಿಗೆ ಹೈ ನಿರ್ದೇಶನ

High Court (1)
Published on


ಬೆಂಗಳೂರು: ಸಾರ್ವಜನಿಕ ಶೌಚಾಗೃಹವನ್ನು ಸಮರ್ಪಕ ಹಾಗೂ ಸ್ವಚ್ಛವಾಗಿ ನಿರ್ವಹಣೆ ಮಾಡುವುದಕ್ಕೆ ಅನುಸರಿಸಬೇಕಾದ ಕ್ರಮಗಳ ಕುರಿತಂತೆ ಹೊಸದಾಗಿ ಮೂರು ವಾರದಲ್ಲಿ ವರದಿ ಸಲ್ಲಿಸಬೇಕು ಎಂದು ಹೈಕೋರ್ಟ್ ಬಿಬಿಎಂಪಿಗೆ ಮಂಗಳವಾರ ನಿರ್ದೇಶಿಸಿದೆ.

ನಗರದಲ್ಲಿ ಸಾರ್ವಜನಿಕ ಶೌಚಾಗೃಹ ಅಸಮರ್ಪಕ ನಿರ್ವಹಣೆ ಕುರಿತಂತೆ ಲೆಟ್ಜ್‌ಕಿಟ್ ಫೌಂಡೇಷನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ನಗರದಲ್ಲಿ ಸಾರ್ವಜನಿಕ ಶೌಚಾಗೃಹ ಸಮರ್ಪಕ ನಿರ್ವಹಣೆ, ನೈರ್ಮಲ್ಯ ಕಾಯ್ದುಕೊಳ್ಳದ ಮತ್ತು ಅವುಗಳಿಗೆ ಮೂಲ ಸೌಕರ್ಯ ಕಲ್ಪಿಸದ ಬಿಬಿಎಂಪಿ ನಡೆಗೆ ಹಾಗೂ ಅರ್ಜಿ ದಾಖಲಾಗಿ ಹಲವು ವರ್ಷ ಕಳೆದರೂ ಈವರೆಗೂ ಯಾವುದೇ ಉತ್ತರ ಸಲ್ಲಿಸದ ರಾಜ್ಯ ಸರ್ಕಾರದ ಧೋರಣೆಯನ್ನು ಹೈಕೋರ್ಟ್ ಇದೇ ವೇಳೆ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಸರ್ಕಾರ ಕಣ್ಣು ಮುಚ್ಚಿ ಕುಳಿತುಕೊಳ್ಳಬಾರದು:
ಪ್ರಕರಣದಲ್ಲಿ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ಹಿತಾಸಕ್ತಿಯಿದೆ. ನಗರದ ನಿವಾಸಿಗಳಿಗೆ ಸಂಬಂಧಿಸಿದ ಸಾರ್ವಜನಿಕ ಮಹತ್ವವನ್ನು ಪ್ರಕರಣ ಹೊಂದಿದ್ದು, ೨೦೧೮ರಿಂದ ನ್ಯಾಯಾಲಯ ವಿಚಾರಣೆ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಈ ವಿಚಾರವಾಗಿ ಒಂದೇ ಒಂದು ಪ್ರಮಾಣಪತ್ರ ಸಲ್ಲಿಸಿ ತನ್ನ ಪ್ರತಿಕ್ರಿಯೆ ನೀಡಿಲ್ಲ. ರಾಜ್ಯ ಸರ್ಕಾರ ಕಣ್ಣು ಮತ್ತು ಬಾಯಿ ಮುಚ್ಚಿ ಕುಳಿತುಕೊಳ್ಳಬಾರದು. ಸರ್ಕಾರ ಮೌನ ವಹಿಸುವುದು ನ್ಯಾಯಾಲಯಕ್ಕೆ ಅಚ್ಚರಿಯಾಗಿದೆ. ಜನರಿಗೆ ನೈರ್ಮಲ್ಯದ ಶೌಚಾಗೃಹ ಒದಗಿಸುವುದು ಸರ್ಕಾರದ ಕರ್ತವ್ಯ ಹಾಗಾಗಿ, ಅರ್ಜಿ ಸಂಬಂಧ ರಾಜ್ಯ ಸರ್ಕಾರ ಸಹ ಮೂರು ವಾರಗಳಲ್ಲಿ ತನ್ನ ಉತ್ತರವನ್ನು ಒಳಗೊಂಡ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.

ಇದಕ್ಕೂ ಮುನ್ನ ನಗರದಲ್ಲಿನ ಶೌಚಾಗೃಹಗಳ ನಿರ್ವಹಣೆಗೆ ಸಂಬಂಧಿಸಿದಂತೆ ಬಿಬಿಎಂಪಿ ವಸ್ತುಸ್ಥಿತಿ ವರದಿ ಮತ್ತು ಕ್ರಿಯಾ ವರದಿ ಸಲ್ಲಿಸಿತು. ವರದಿಯಲ್ಲಿ ಅನೇಕ ನ್ಯೂನ್ಯತೆಗಳನ್ನು ಅರ್ಜಿದಾರರ ಪರ ವಕೀಲ ಪುತ್ತಿಗೆ ರಮೇಶ್ ಅವರು ನ್ಯಾಯಾಲಯದ ಗಮನಕ್ಕೆ ತಂದರು. ಖುದ್ದು ನ್ಯಾಯಪೀಠ ಸಹ ವರದಿಯಲ್ಲಿನ ಲೋಪಗಳನ್ನು ಪತ್ತೆ ಹಚ್ಚಿ ಬಿಬಿಎಂಪಿಗೆ ತರಾಟೆಗೆ ತೆಗೆದುಕೊಂಡಿತು.

ಸಾರ್ವಜನಿಕ ಶೌಚಾಗೃಹದ ಸಮರ್ಪಕ ನಿರ್ವಹಣೆಯಲ್ಲಿ ಆಗಿರುವ ಕೆಲಸಗಳಿಗಿಂತ ಆಗಬೇಕಾಗಿರುವ ಕೆಲಸಗಳ ಬಗ್ಗೆ ವರದಿ ತಿಳಿಸುತ್ತದೆ. ಈ ವಿಚಾರವನ್ನು ಬಿಬಿಎಂಪಿ ಒಪ್ಪಿಕೊಂಡಿದೆ. ಶೌಚಾಗೃಹಗಳ ನಿರ್ವಹಣೆ ಅಸಮರ್ಪಕವಾಗಿದೆ. ಅಲ್ಲಿ ನೈರ್ಮಲ್ಯ ಕಾಯ್ದುಕೊಂಡಿಲ್ಲ. ನಗರದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಶೌಚಾಗೃಹಗಳಿಲ್ಲ. ವಿಕಲ ಚೇತನರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಿಲ್ಲ. ಕೆಲ ಮಹಿಳಾ ಶೌಚಾಗೃಹಗಳಲ್ಲಿ ಕಿಟಕಿಯೆ ಕಿತ್ತುಹೋಗಿದೆ ಎಂದು ಚಾಟಿ ಬೀಸಿದ ನ್ಯಾಯಪೀಠ, ಬಿಬಿಎಂಪಿಯ ವರದಿಗಳನ್ನು ತಿರಸ್ಕರಿಸಿತು.

ಮೂರು ವಾರದಲ್ಲಿ ವದರಿ ಸಲ್ಲಿಸಿ:
ಶೌಚಾಗೃಹ ನಿರ್ವಹಣೆಗೆ ಕೈಗೊಳ್ಳಬೇಕಾಗಿರುವ ಕ್ರಮಗಳೇನು? ಒಂದೊಮ್ಮೆ ಕ್ರಮಗಳು ರೂಪಿಸಿದ್ದರೆ ಅದನ್ನು ಜಾರಿಗೊಳಿಸಲು ನಿಗದಿಪಡಿಸಿರುವ ಕಾಲಮಿತಿ ಏನು? ನಗರದಲ್ಲಿನ ಸಾರ್ವಜನಿಕ ಶೌಚಾಗೃಹಗಳ ನಿರ್ವಹಣೆಗೆ ಬಿಬಿಎಂಪಿ ಬಳಿಯಿರುವ ಸಲಹೆಗಳೇನು ಎಂಬ ಬಗ್ಗೆ ಮೂರು ವಾರಗಳಲ್ಲಿ ಹೊಸದಾಗಿ ವಿವರವಾದ ವರದಿ ಸಲ್ಲಿಸಬೇಕು ಎಂದು ಬಿಬಿಎಂಪಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net