ದೌರ್ಜನ್ಯವೆಸಗಿದ ವೈದ್ಯರಿಗೆ ಹೈಕೋರ್ಟ್ ಎಚ್ಚರಿಕೆ

highcourt
Published on

 ಬೆಂಗಳೂರು: ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಯನ್ನು ಲೈಂಗಿಕವಾಗಿ ಹಿಂಸಿಸುವ ವೈದ್ಯರನ್ನು ಸುಮ್ಮನೆ ಬಿಡಲು ಸಾಧ್ಯವೇ ಇಲ್ಲ ಎಂದು ಎಚ್ಚರಿಕೆ ನೀಡಿರುವ ಹೈಕೋರ್ಟ್, ವೈದ್ಯೆಗೆ ಲೈಂಗಿಕ ಕಿರುಕುಳ ನೀಡಿ ಆಕೆಯನ್ನು ಅವಾಚ್ಯ ಪದಗಳಿಂದ ನಿಂದಿಸಿದ ಆರೋಪ ಎದುರಿಸುತ್ತಿರುವ ವೈದ್ಯರೊಬ್ಬರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಲು ನಿರಾಕರಿಸಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಕುಂದಾಪುರ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಬರ್ಟ್ ರೆಬೆಲ್ಲೊ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ವಿಚಾರಣೆ ನಡೆಸಿತು.

ಡಾ.ರಾಬರ್ಟ್ ಪರ ವಕೀಲರು ವಾದ ಮಂಡಿಸಿ, ಕರ್ತವ್ಯ ಸಮಯದ ನಂತರ ಮತ್ತು ಮಧ್ಯರಾತ್ರಿಯಲ್ಲಿ ದೂರುದಾರ ವೈದ್ಯೆಗೆ ಸಂದೇಶ ಕಳುಹಿಸಿದ ಮತ್ತು ವಿಡಿಯೋ ಕಾಲ್ ಮಾಡಿ ಕಿರುಕುಳ ನೀಡಿರುವ ಆರೋಪ ಅರ್ಜಿದಾರರ ಮೇಲಿದೆ. ಆದರೆ, ಅರ್ಜಿದಾರರು ಯಾವುದೇ ಅಪರಾಧ ಎಸಗಿಲ್ಲ. ಇದೆಲ್ಲವೂ ಸತ್ಯಕ್ಕೆ ದೂರವಾದ ಸಂಗತಿ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ ಬೇಸರವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಮಧ್ಯರಾತ್ರಿ ಏಕೆ ಸಂದೇಶ ಕಳುಹಿಸಲಾಗಿದೆ ಮತ್ತು ಕರೆ ಮಾಡಲಾಗಿದೆ ಎಂದು ಪ್ರಶ್ನಿಸಿದರು. ಆಗ ಅರ್ಜಿದಾರರ ಪರ ವಕೀಲರು, ದೂರುದಾರೆಗೆ ಯಾವುದೇ ಅಶ್ಲೀಲ ಅಥವಾ ಅಪರಾಧ ಸಂದೇಶ ಕಳುಹಿಸಿಲ್ಲ ಎಂದು ಉತ್ತರಿಸಿದರು. ಆಗ ಪೀಠವು ಮತ್ತೇನು? ಗುಡ್ ಮಾರ್ನಿಂಗ್, ಗುಡ್‌ನೈಟ್ ಎಂದು ಸಂದೇಶ ಕಳುಹಿಸಿದ್ದೀರಾ ಎಂದು ಖಾರವಾಗಿ ಪ್ರಶ್ನಿಸಿತು.

ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರು, ಅದು ಸಹ ಇದೆ. ಕೆಲ ಚರ್ಚೆಯ ಸಂದೇಶ ಕಳುಹಿಸಲಾಗಿದೆ. ಅವು ಅಪರಾಧದ ಸಂದೇಶಗಳಲ್ಲ. ದೂರುದಾರೆ ಸಹ ಆರೋಪಿಯ ಸಂದೇಶಕ್ಕೆ ಉತ್ತರಿಸಿದ್ದಾರೆ ಎಂದು ಸಮಜಾಯಿಷಿ ನೀಡಿಲು ಮುಂದಾದರು. ಬಳಿಕ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ನೀವು ಯಾವ ರೀತಿಯಲ್ಲಿ ಸಂದೇಶ ಕಳುಹಿಸಿದ್ದೀರಾ? ಎನ್ನುವುದು ನಮ್ಮ ಮುಂದಿವೆ. ಅವುಗಳನ್ನು ನಿಮಗೆ ನೀಡಲೇ? ತಡರಾತ್ರಿ ಊಟಕ್ಕೆ ಬರುವಂತೆ ದೂರುದಾರೆಗೆ ಏಕೆ ಕರೆದಿದ್ದೀರಿ ಎಂದು ಪ್ರಶ್ನಿಸಿತು.

ಅಷ್ಟೇ ಅಲ್ಲದೆ, ಅರ್ಜಿದಾರ ಸರ್ಕಾರಿ ನೌಕರ. ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುವವರು. ಸಿಬ್ಬಂದಿಯನ್ನು ಲೈಂಗಿಕವಾಗಿ ಹಿಂಸಿಸುವ ವೈದ್ಯರನ್ನು ಸುಮ್ಮನೆ ಬಿಡಲು ಸಾಧ್ಯವೇ ಇಲ್ಲ. ದಾಖಲೆಗಳನ್ನು ನೋಡಿದರೆ ಅರ್ಜಿದಾರ ವೈದ್ಯ ದೂರುದಾರೆ ವೈದ್ಯೆಗೆ ಕಿರುಕುಳ ನೀಡಿರುವುದು ತಿಳಿಯುತ್ತದೆ. ಈ ಹಂತದಲ್ಲಿ ಎಫ್‌ಐಆರ್ ರದ್ದುಪಡಿಸಲಾಗದು. ತನಿಖಾಧಿಕಾರಿ ಆರೋಪ ಪಟ್ಟಿ ಸಲ್ಲಿಸಲಿ. ನಂತರವಷ್ಟೇ ಸತ್ಯಾಂಶ ತಿಳಿದು ಬರಲಿದ್ದು, ಬಳಿಕ ಆರೋಪಗಳ ಕೈಬಿಡಲು ಕೋರಿ ಅರ್ಜಿದಾರ ವೈದ್ಯರು ನ್ಯಾಯಲಯದ ಮೆಟ್ಟಿಲೇರಬಹುದು ಎಂದು ಸೂಚಿಸಿದ ಹಿನ್ನೆಲೆಯಲ್ಲಿ ವೈದ್ಯರ ಪರ ವಕೀಲರು ಅರ್ಜಿ ಹಿಂಪಡೆದರು.

ವೈದ್ಯೆಗೆ ಮಧ್ಯರಾತ್ರಿ ಸಂದೇಶ!

ಪ್ರಕರಣದಲ್ಲಿ ದೂರುದಾರ ವೈದ್ಯೆಗೆ ಆರೋಪಿ ವೈದ್ಯ ಮಧ್ಯರಾತ್ರಿ ಊಟಕ್ಕೆ ಬರುವಂತೆ ಸಂದೇಶ ಕಳುಹಿಸಿದ್ದ. ಅಶ್ಲೀಲ ಸಂದೇಶ ಕಳುಹಿಸಿದ್ದಲ್ಲದೆ, ಆಕೆಯ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ಅವಾಚ್ಯ ಪದಗಳಿಂದ ನಿಂದಿಸಲಾಗಿತ್ತು.

ಇದೆಲ್ಲ ಸಂಗತಿಯನ್ನು ದಾಖಲೆಗಳ ಮೂಲಕ ತಿಳಿದುಕೊಂಡ ನ್ಯಾಯಮೂರ್ತಿಗಳು, ವೈದ್ಯನ ನಡವಳಿಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net