ರಾಮನಗರದ ಚಾನ್ ಪಾಷಾ ವಕೀಲಿಕೆ ಅಮಾನತಿಗೆ ಹೈಕೋರ್ಟ್ ತಡೆ

highcourt
Published on

ಬೆಂಗಳೂರು : ಕಳೆದ ಫೆಬ್ರವರಿಯಲ್ಲಿ ರಾಮನಗರ ವಕೀಲರ ಸಂಘದ ಭಾರಿ ಪ್ರತಿಭಟನೆಯ ಕೇಂದ್ರಬಿಂದುವಾಗಿದ್ದ ಐಜೂರು ನಿವಾಸಿಯಾದ ವಕೀಲ ಚಾನ್ ಪಾಷಾ ವಕೀಲಿಕೆ ಮಾಡದಂತೆ ಅಮಾನತು ಮಾಡಿ ಆದೇಶಿಸಿದ್ದ ರಾಜ್ಯ ವಕೀಲರ ಪರಿಷತ್ (ಕೆಎಸ್‌ಬಿಸಿ) ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.


ಮಾರ್ಚ್ 30ರಂದು ಕೆಎಸ್‌ಬಿಸಿಯು ಚಾನ್ ಪಾಷಾರನ್ನು ವಕೀಲಿಕೆ ಮಾಡುವುದರಿಂದ ಅಮಾನತು ಮಾಡಿ ಆದೇಶಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ ವಿಚಾರಣೆ ನಡೆಸಿತು.


ಆದೇಶಕ್ಕೂ ಮುನ್ನ ಕೆಎಸ್‌ಬಿಸಿ ನೋಟಿಸ್ ನೀಡಿಲ್ಲ. ಆದ್ದರಿಂದ, ಅರ್ಜಿದಾರರ ಕೋರಿಕೆಯಂತೆ ಮುಂದಿನ ವಿಚಾರಣೆವರೆಗೆ ಕೆಎಸ್‌ಬಿಸಿ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿದೆ ಎಂದು ನ್ಯಾಯಾಲಯ ಆದೇಶ ಮಾಡಿದೆ.


ಅಲ್ಲದೇ, ರಾಮನಗರ ವಕೀಲರ ಸಂಘ ಮತ್ತು ಕೆಎಸ್‌ಬಿಸಿ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದೆ.

ಪ್ರಕರಣದ ಹಿನ್ನೆಲೆ )
ಉತ್ತರಪ್ರದೇಶದ ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅಲ್ಲಿನ ಜಿಲ್ಲಾ ನ್ಯಾಯಾಲಯ ಜ.31ರಂದು ಅವಕಾಶ ಕಲ್ಪಿಸಿ ಆದೇಶ ಮಾಡಿತ್ತು. ಇದನ್ನು ಆಕ್ಷೇಪಿಸಿ ರಾಮನಗರ ವಕೀಲರ ಸಂಘದ ಸದಸ್ಯ ಹಾಗೂ ಎಸ್‌ಡಿಪಿಐ ಮುಖಂಡ ಚಾನ್ ಪಾಷಾ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು.


ಇದನ್ನು ಆಧರಿಸಿ ಪಾಷಾ ವಿರುದ್ಧ ಬಿಜೆಪಿ ಮುಖಂಡ ಪಿ ಶಿವಾನಂದ ರಾಮನಗರ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾ ವಕೀಲರ ಸಂಘವು ಅವರ ವಿರುದ್ಧ ಕ್ರಮ ಕೈಗೊಳ್ಳಲು ಫೆ. 6ರಂದು ಸಂಜೆ ಸರ್ವ ಸದಸ್ಯರ ಸಭೆ ಕರೆದಿತ್ತು. ಆಗ, ದಲಿತ ಮತ್ತು ಪ್ರಗತಿಪರ ಮುಖಂಡರ ನಿಯೋಗವು ರಾಮನಗರ ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿಯನ್ನು ಭೇಟಿ ಮಾಡಿ, ಪ್ರಕರಣವನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳುವಂತೆ ಮನವಿ ಸಲ್ಲಿಸಿತ್ತು.


ಈ ವೇಳೆ ಕೆಲ ವಕೀಲರು ಪಾಷಾ ಪರವಾಗಿ ಬಂದಿದ್ದ ಮುಖಂಡರನ್ನು ಪ್ರಶ್ನಿಸಿದಾಗ, ವಾಗ್ವಾದ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಆವರಣಕ್ಕೆ ಅತಿಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ಆರೋಪಿಸಿ, ವಕೀಲರ ಸಂಘದ ಅಧ್ಯಕ್ಷರು ಅಂದು ರಾತ್ರಿ ನೀಡಿದ ದೂರಿನ ಮೇರೆಗೆ ಪಾಷಾ ಮತ್ತು 40 ಮುಖಂಡರ ವಿರುದ್ಧ ಐಜೂರು ಠಾಣೆ ಪಿಎಸ್‌ಐ ಸಯ್ಯದ್ ತನ್ವೀರ್ ಹುಸೇನ್ ಎಫ್‌ಐಆರ್ ದಾಖಲಿಸಿಕೊಂಡಿದ್ದರು.


ಇದಾದ ಮಾರನೇಯ ದಿನ ವಕೀಲರ ಸಂಘಕ್ಕೆ ತೆರಳಿದ್ದವರ ಪೈಕಿ ರಫೀಕ್ ಖಾನ್ ಎಂಬುವರು, ವಕೀಲರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನೀಡಿದ ದೂರಿನ ಮೇರೆಗೆ ಪಿಎಸ್‌ಐ ತನ್ವೀರ್ 40 ವಕೀಲರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದರಿಂದ ಕೆರಳಿದ ವಕೀಲರು ಪಿಎಸ್‌ಐ ಅಮಾನತಿಗೆ ಆಗ್ರಹಿಸಿ ಧರಣಿ ನಡೆಸಿದ್ದರು. ಇದಾದ ಬಳಿಕ ಕೆಎಸ್‌ಬಿಸಿಯು ಚಾನ್ ಪಾಷಾ ಅವರನ್ನು ವಕೀಲಿಕೆ ಮಾಡುವುದರಿಂದ ಅಮಾನತು ಮಾಡಿ ಆದೇಶಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net