ಸಬ್ ರಿಜಿಸ್ಟ್ರಾರ್‌ಗಳ ವರ್ಗಾವಣೆಗೆ ಹೈಕೋರ್ಟ್ ತಡೆ

sr
Published on

ಬೆಂಗಳೂರು: ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿದ್ದ 90 ಹಿರಿಯ ಮತ್ತು ಕಿರಿಯ ಸಬ್ ರಿಜಿಸ್ಟ್ರಾರ್‌ಗಳ ವರ್ಗಾವಣೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ಕೊಟ್ಟಿದೆ. 90 ಮಂದಿಯಲ್ಲಿ ವರ್ಗಾವಣೆಯಾದ ಆದೇಶದನ್ವಯ ಕಚೇರಿಯಿಂದ ಬಿಡುಗಡೆಯಾಗದ 24 ಅಧಿಕಾರಿಗಳು ಹಿಂದಿನ ಕಚೇರಿಯಲ್ಲೇ ಮುಂದುವರಿಯಬೇಕು. ಹೊಸ ಕಚೇರಿಗೆ ವರದಿ ಮಾಡಿಕೊಂಡಿರುವ 32 ಅಧಿಕಾರಿಗಳಿಗೆ ಈ ಮಧ್ಯಂತರ ಆದೇಶದಿಂದ ಯಾವುದೇ ರಕ್ಷಣೆ ಇಲ್ಲ.

ಕೆಎಟಿ ಆದೇಶ ಪ್ರಶ್ನಿಸಿ ಸಬ್ ರಿಜಿಸ್ಟ್ರಾರ್‌ಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರು ಒಳಗೊಂಡ ನ್ಯಾಯಪೀಠ, ಮಧ್ಯಂತರ ಆದೇಶ ನೀಡಿದೆ. ಕೌನ್ಸಲಿಂಗ್ ಆಧಾರದ ಮೇಲೆ ಡಿ.10ರಂದು 90 ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ಕಂದಾಯ ಇಲಾಖೆ ಆದೇಶ ಹೊರಡಿಸಿತ್ತು. ಈಗಾಗಲೇ ವರ್ಗಾವಣೆ ಆದೇಶದ ಮೇಲೆ ಮೂಲಹುದ್ದೆಯಿಂದ ಬಿಡುಗಡೆಯಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುವವರು ಮುಂದುವರೆಯಬಹುದು. ಔಪಚಾರಿಕವಾಗಿ ಬಿಡುಗಡೆಯಾಗದಿರುವ 24 ಅಧಿಕಾರಿಗಳು ವರ್ಗಾವಣೆ ಆದೇಶದಂತೆ ಹೊಸ ಕಚೇರಿಗೆ ಹೋಗಬೇಕಿಲ್ಲ. ವಾಪಸ್ ತಮ್ಮ ಕಚೇರಿಯಲ್ಲಿ ಕರ್ತವ್ಯ ಮುಂದುವರಿಯಬಹುದು ಎಂದು ಸ್ಪಷ್ಟಪಡಿಸಿದೆ.

ಸಚಿವ ಸಂಪುಟದ ಒಪ್ಪಿಗೆ ಪಡೆದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗವನ್ನು ಕೌನ್ಸಲಿಂಗ್ ಆಧಾರದಡಿ ವರ್ಗಾವಣೆ ಮಾಡಲು ಕಂದಾಯ ಇಲಾಖೆ ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಸಬ್ ರಿಜಿಸ್ಟ್ರಾರ್‌ಗಳು ಕೆಎಟಿ ಮೆಟ್ಟಿಲೇರಿದ್ದರು. ವೈದ್ಯಕೀಯ ಅಧಿಕಾರಿಗಳ ವರ್ಗಾವಣೆಗೆ ರಾಜ್ಯ ನಾಗರಿಕ ಸೇವೆಗಳ (ವೈದ್ಯಕೀಯ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿ ವರ್ಗಾವಣೆ ನಿಯಂತ್ರಣ) ಕಾಯ್ದೆ-2011 ರೂಪಿಸಲಾಗಿದೆ.

ರಾಜ್ಯ ನಾಗರಿಕ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯ್ದೆ-2020 ಹಾಗೂ ರಾಜ್ಯ ಪೊಲೀಸ್ ಇಲಾಖೆ (ವರ್ಗಾವಣೆ) (ವಿಶೇಷ) ನಿಯಮಗಳು 2022ರ ಜಾರಿಗೆ ತಂದಿದ್ದು, ಇದರ ಮೂಲಕವೇ ಅಧಿಕಾರಿಗಳ ವರ್ಗಾವಣೆ ಆಗುತ್ತಿದೆ. ಇದೇ ಮಾದರಿಯಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲೂ ಕಾನೂನು ರೂಪಿಸಿ ವರ್ಗಾವಣೆ ಮಾಡಬೇಕೆಂದು ಮನವಿ ಮಾಡಿದ್ದರು. ಆದರೆ, ಕೆಎಟಿ ಇದನ್ನು ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಸಬ್ ರಿಜಿಸ್ಟ್ರಾರ್‌ಗಳು ಹೈಕೋರ್ಟ್ ಮೇಟ್ಟಿಲೇರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net